ನ್ಯೂಯಾರ್ಕ್(ನ.21): ತನ್ನ ಗಡಿಗೆ ಅಂಟಿಕೊಂಡಿರುವ ತೈವಾನ್‌, ಟಿಬೆಟ್‌ ಸೇರಿದಂತೆ ಸುತ್ತಮುತ್ತಲ ರಾಷ್ಟ್ರಗಳ ಭೂಭಾಗವನ್ನು ಚೀನಾ ಕಬಳಿಸುತ್ತಿದೆ ಎಂಬ ಆರೋಪಗಳ ಬೆನ್ನಲ್ಲೇ, ಇದೇ ಮೊಟ್ಟಮೊದಲ ಬಾರಿಗೆ ಟಿಬೆಟ್‌ ಭೂಭಾಗವು ಚೀನಾ ಸೇನೆಯ ಆಕ್ರಮಿತ ಪ್ರದೇಶವೆಂದು ಅಮೆರಿಕ ಪ್ರತಿಪಾದಿಸಿದೆ.

‘ದಿ ಎಲಿಮೆಂಟ್ಸ್‌ ಆಫ್‌ ದಿ ಚೀನಾ ಚಾಲೆಂಜ್‌’(ಚೀನಾದ ಸವಾಲುಗಳ ಮೂಲತತ್ವ) ಎಂಬ ವರದಿಯನ್ನು ಬಿಡುಗಡೆ ಮಾಡಿರುವ ಅಮೆರಿಕ ಅದರಲ್ಲಿ, ಚೀನಾದ ಆಡಳಿತಾರೂಢ ಕಮ್ಯುನಿಸ್ಟ್‌ ಪಕ್ಷ ಸುತ್ತಮುತ್ತಲ ರಾಷ್ಟ್ರಗಳ ಭೂಪ್ರದೇಶ ಕಬಳಿಕೆ ಮತ್ತು ಆ ರಾಷ್ಟ್ರಗಳ ಜನರ ಮೇಲಿನ ದಬ್ಬಾಳಿಕೆಯನ್ನು ವಿವರಿಸಲಾಗಿದೆ ಎಂದು ತಿಳಿದುಬಂದಿದೆ.

ಚೀನಾ ಸರ್ಕಾರ ಧಾರ್ಮಿಕ ಅಲ್ಪಸಂಖ್ಯಾತರನ್ನು ಬಗ್ಗುಬಡಿಯಲು ಭಾರೀ ಪ್ರಮಾಣದ ಸಂಪನ್ಮೂಲಗಳನ್ನು ವಿನಿಯೋಗಿಸುತ್ತಿದ್ದು, ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಅಲ್ಲದೆ, ಟಿಬೆಟ್‌ ಅನ್ನು ಆಕ್ರಮಿಸಿಕೊಂಡಿರುವ ಚೀನಾ ಸೇನೆ, ಕ್ಸಿಂಜಿಯಾಂಗ್‌ನಲ್ಲಿ ಉಯಿಗುರ್‌ ಮುಸ್ಲಿಮರು ಸೇರಿದಂತೆ ಒಟ್ಟಾರೆ 7 ಕೋಟಿ ಇರುವ ಇನ್ನಿತರ ಸಮುದಾಯಗಳ ಜನರಿಗೆ ಇನ್ನಿಲ್ಲದ ಕಿರುಕುಳ ನೀಡುತ್ತಿದೆ ಎಂದು ಈ ವರದಿಯಲ್ಲಿ ದೂರಲಾಗಿದೆ.