ಹೂಸ್ಟನ್(ಡಿ.14): ಕೊರೋನಾ ಪಿಡುಗೆ ಜಗತ್ತನ್ನು ಆವರಿಸಿಕೊಂಡ ಮೇಲೆ ವೈದ್ಯಕೀಯ ಸಿಬ್ಬಂದಿಗಳ ಅವಿರತ ಶ್ರಮ ಎಲ್ಲರಿಗೂ ತಿಳಿದಿದ್ದೇ. ಅಚ್ಚರಿಯೆಂದರೆ ಅಮೆರಿಕದ ಹೂಸ್ಟನ್‌ನ ವೈದ್ಯರೊಬ್ಬರು ಕಳೆದ 280 ದಿನಗಳಿಂದ ಸತತವಾಗಿ ಸೇವೆ ಸಲ್ಲಿಸುವ ಮೂಲಕ ತಮ್ಮ ಕರ್ತವ್ಯಪರತೆ ಮೆರೆದಿದ್ದಾರೆ. ಡಾ. ಜೋಸೆಫ್‌ ವರೊನ್‌ ಎನ್ನುವವರು ಅಮೆರಿಕದಲ್ಲಿ ಕೊರೋನಾ ವೈರಸ್‌ ಆರಂಭವಾದಾಗಿನಿಂದ ಒಂದು ದಿನವೂ ರಜೆ ಪಡೆದುಕೊಂಡಿಲ್ಲ.

ಹೂಸ್ಟನ್‌ನಲ್ಲಿ ಬಡ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಯುನೈಟೆಡ್‌ ಮೆಮೋರಿಯಲ್‌ ಎಂಬ ಆಸ್ಪತ್ರೆಯ ಮುಖ್ಯಸ್ಥರಾಗಿರುವ ಜೋಸೆಫ್‌ ವರೋನ್‌, ಕೊರೋನಾದಿಂದ ಹಲವಾರು ರೋಗಿಗಳ ಪ್ರಾಣವನ್ನು ರಕ್ಷಿಸಿದ್ದಾರೆ. ಇತ್ತಿಚೆಗೆ ಹಿರಿಯ ರೋಗಿಯೊಬ್ಬರು ಜೋಸೆಫ್‌ ಅವರನ್ನು ಅಪ್ಪಿಕೊಂಡು ಕೃತಜ್ಞತೆ ಸಲ್ಲಿಸಿದ ಫೋಟೋವೊಂದು ವೈರಲ್‌ ಆಗಿತ್ತು. ಆ ಬಳಿಕ ಜೋಸೆಫ್‌ ಅವರ ನಿಸ್ವಾರ್ಥ ಸೇವೆ ಬೆಳಕಿಗೆ ಬಂದಿದೆ.

ದಿನದಲ್ಲಿ ಕೆಲವು ಗಂಟೆಗಳನ್ನಷ್ಟೇ ಜೋಸೆಫ್‌ ಮನೆಯಲ್ಲಿ ಕಳೆಯುತ್ತಿದ್ದಾರೆ. ಮನೆಯಲ್ಲಿ ಇರುವಷ್ಟೂಹೊತ್ತು ರೋಗಿಗಳಿಂದ ನಿರಂತರ ಫೋನ್‌ ಕರೆಗಳು ಬರುತ್ತಲೇ ಇರುತ್ತವೆ. ಹೀಗಾಗಿ ದಿನದಲ್ಲಿ ಒಂದೆರಡು ಗಂಟೆಯಷ್ಟೇ ನಿದ್ರೆ ಮಾಡುತ್ತಿದ್ದೇನೆ. ನಿರಂತರ ಕೆಲಸದಿಂದ ಆಸ್ಪತ್ರೆಯ ಸಿಬ್ಬಂದಿ ಅತಿಯಾಗಿ ಬಳಲಿಕೆ ಅನುಭವಿಸುತ್ತಿದ್ದಾರೆ. ಆದಾಗ್ಯೂ ನಮ್ಮ ಸೇವೆ ಸೇವೆ ನಿರಂತರವಾಗಿ ಮುಂದುವರಿಯಲಿದೆ ಎಂದು ಜೋಸೆಫ್‌ ಹೇಳಿದ್ದಾರೆ.