* ಆಫ್ಘಾನಿಸ್ತಾನದ ಹಂಗಾಮಿ ರಕ್ಷಣಾ ಸಚಿವರನ್ನು ಗುರಿಯಾಗಿಸಿಕೊಂಡು ತಾಲಿಬಾನ್‌ ಉಗ್ರರ ದಾಳಿ* ಬಾಂಬ್‌ ದಾಳಿಯಲ್ಲಿ ಕನಿಷ್ಠ ಎಂಟು ಮಂದಿ ಮೃತ, 20 ಮಂದಿಗೆ ಗಾಯ* ಬಿಸ್ಮಿಲ್ಲಾ ಖಾನ್‌ ಮುಹಮ್ಮದಿ ಅವರನ್ನು ಗುರಿಯಾಗಿಸಿ ಅವರ ಅತಿಥಿ ಗಹದ ಸಮೀಪ ಈ ದಾಳಿ  

ಕಾಬೂಲ್‌(ಆ.05): ಆಫ್ಘಾನಿಸ್ತಾನದ ಹಂಗಾಮಿ ರಕ್ಷಣಾ ಸಚಿವರನ್ನು ಗುರಿಯಾಗಿಸಿಕೊಂಡು ತಾಲಿಬಾನ್‌ ಉಗ್ರರು ನಡೆಸಿದ ಬಾಂಬ್‌ ದಾಳಿಯಲ್ಲಿ ಕನಿಷ್ಠ ಎಂಟು ಮಂದಿ ಮೃತಪಟ್ಟು, 20 ಮಂದಿ ಗಾಯಗೊಂಡ ಘಟನೆ ನಡೆದಿದೆ.

ಮಂಗಳವಾರ ಮಧ್ಯರಾತ್ರಿ ಸಚಿವ ಬಿಸ್ಮಿಲ್ಲಾ ಖಾನ್‌ ಮುಹಮ್ಮದಿ ಅವರನ್ನು ಗುರಿಯಾಗಿಸಿ ಅವರ ಅತಿಥಿ ಗಹದ ಸಮೀಪ ಈ ದಾಳಿ ನಡೆಸಲಾಗಿದೆ. ಆದರೆ ದಾಳಿ ವೇಳೆ ಅವರು ಸ್ಥಳದಲ್ಲಿರಲಿಲ್ಲ. ಹೀಗಾಗಿ ಸಚಿವರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ. ದಾಳಿ ಬಳಿಕ ನಡೆದ ಗುಂಡಿನ ಕಾಳಗದಲ್ಲಿ ನಾಲ್ವರು ಉಗ್ರರನ್ನು ಹತ್ಯೆಗೈಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿಯ ಸಂಪೂರ್ಣ ಹೊಣೆಯನ್ನು ತಾಲಿಬಾನ್‌ ಹೊತ್ತುಕೊಂಡಿದೆ. ಇತ್ತೀಚಿಗೆ ಆಫ್ಘಾನ್‌ ಪಡೆ ವಿವಿಧ ಪ್ರಾಂತ್ಯಗಳಲ್ಲಿ ನಡೆಸಿದ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ತಾಲಿಬಾನ್‌ ತಿಳಿಸಿದೆ.