ಸೂಯೆಜ್(ಮಾ.30): ಜಗತ್ಪ್ರಸಿದ್ಧ ಸೂಯೆಜ್‌ ಕಾಲುವೆಯಲ್ಲಿ 1 ವಾರದಿಂದ ಸಿಲುಕಿದ್ದ ಬೃಹತ್‌ ಸರಕು ಸಾಗಣೆ ಹಡಗನ್ನು ಪೂರ್ತಿಯಾಗಿ ಚಲಿಸುವಂತೆ ಮಾಡುವಲ್ಲಿ ಎಂಜಿನಿಯರ್‌ಗಳು ಯಶಸ್ವಿಯಾಗಿದ್ದಾರೆ.

ಸೂಯೆಜ್‌ ಕಾಲುವೆಯ ಪೂರ್ವ ದಂಡೆಯ ಹೂಳಿನಲ್ಲಿ ಸಿಲುಕಿಕೊಂಡಿದ್ದ ‘ಎವರ್‌ ಗಿವನ್‌’ ಹಡಗನ್ನು ಸಮುದ್ರದ ದೊಡ್ಡ ಅಲೆಗಳು ಮತ್ತು ಶಕ್ತಿಶಾಲಿ ನೌಕೆಗಳ ನೆರವಿನೊಂದಿಗೆ ಹೂಳಿನಿಂದ ಹೊರ ತೆಗೆಯಲಾಗಿದೆ ಎಂದು ಹಡಗನ್ನು ಚಲಿಸುವಂತೆ ಮಾಡುವ ಹೊಣೆ ಹೊತ್ತಿರುವ ಬೋಸ್ಕಾಲಿಸ್‌ ಕಂಪನಿ ಹೇಳಿದೆ. ಇದರೊಂದಿಗೆ ಕಳೆದೊಂದು ವಾರದಿಂದ ಸಮುದ್ರ ಮಾರ್ಗದ ವ್ಯಾಪಾರಕ್ಕೆ ಎದುರಾಗಿದ್ದ ದೊಡ್ಡ ಅಡಚಣೆ ನಿವಾರಣೆಯಾಗಿದೆ. ಜೊತೆಗೆ ಸೂಯೆಜ್‌ ಕಾಲುವೆಯಲ್ಲಿ ಕಳೆದೊಂದು ವಾರದಿಂದ ನಿರ್ಮಾಣವಾಗಿದ್ದ ಸಮುದ್ರ ಯಾನದ ಸಂಚಾರ ದಟ್ಟಣೆಗೂ ಮುಕ್ತಿ ಸಿಕ್ಕಿದೆ.

‘ಎವರ್‌ ಗಿವನ್‌’ ಹಡಗಿನ ಕಾರ್ಯಕ್ಷಮತೆ ಕುರಿತ ಪರಿಶೀಲನೆಗಾಗಿ ಈ ಹಡಗನ್ನು ಗ್ರೇಟ್‌ ಬಿಟರ್‌ ಲೇಕ್‌ನತ್ತ ಸಾಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

367 ಹಡಗು ಸಿಲುಕಿದ್ದವು:

ತೈವಾನ್‌ ಮೂಲದ ಎವರ್‌ಗ್ರೀನ್‌ ಕಂಪನಿಯ ಈ ಹಡಗು ಒಂದು ವಾರದಿಂದ ಸೂಯೆಜ್‌ ಕಾಲುವೆಯಲ್ಲಿ ಸಿಲುಕಿದ್ದರಿಂದಾಗಿ 367 ಸರಕು ಸಾಗಣೆ ಹಡಗುಗಳು ಕಾಲುವೆ ದಾಟಲು ಆಗದೇ ಕಾಯುತ್ತಿದ್ದವು. ಇದರಿಂದ ನಿತ್ಯ ಜಾಗತಿಕ ವ್ಯಾಪಾರಿ ಕಂಪನಿಗಳಿಗೆ ಸುಮಾರು 65 ಸಾವಿರ ಕೋಟಿ ರು. ನಷ್ಟವಾಗುತ್ತಿತ್ತು.

ನೂರಾರು ಹಡಗುಗಳು ಈಗಾಗಲೇ ಈ ಮಾರ್ಗ ತಪ್ಪಿಸಿ ಆಫ್ರಿಕಾದ ಕೇಪ್‌ ಆಫ್‌ ಗುಡ್‌ ಹೋಪ್‌ ಭೂಶಿರ ಸುತ್ತಿ ದೀರ್ಘ ಹಾದಿಯಲ್ಲಿ ಪ್ರಯಾಣ ಬೆಳೆಸಿದ್ದು, ಅದರಿಂದಲೂ ಇನ್ನಷ್ಟುಇಂಧನ, ಹಣ ಹಾಗೂ ಸಮಯ ವ್ಯರ್ಥವಾಗುತ್ತಿತ್ತು. ಇದೀಗ ಈ ಎಲ್ಲಾ ಸಮಸ್ಯೆಗಳಿಗೂ ಪೂರ್ಣ ವಿರಾಮ ಬಿದ್ದಂತಾಗಿದೆ.