Asianet Suvarna News Asianet Suvarna News

ಸಿಕ್ಕಿಬಿದ್ದ ಹಡಗು, ಸೂಯೆಜ್ ಕಾಲುವೆಯಲ್ಲಿ ಟ್ರಾಫಿಕ್ ಜಾಮ್!

ಸೂಯೆಜ್‌ ಕಾಲುವೇಲಿ ಸಿಕ್ಕಿಬಿದ್ದ ಹಡಗು| ಮೂರು ದಿನಗಳಿಂದ ಸುಯೆಜ್‌ ಕಾಲುವೆ ಸಂಚಾರ ಸ್ಥಗಿತ| ಹಡುಗು ತೆರವಿಗೆ ಇನ್ನೂ ಬೇಕು ಇನ್ನೂ ಒಂದು ತಿಂಗಳು

Suez Canal blockage may choke India trade supply chain pod
Author
Bangalore, First Published Mar 27, 2021, 7:42 AM IST

ಕಾರಿಯೋ (ಮಾ.27‌): ಏಷ್ಯಾ ಮತ್ತು ಯುರೋಪ್‌ ಮಧ್ಯೆ ಸಂಪರ್ಕ ಕಲ್ಪಿಸುವ ಸೂಯೆಜ್‌ ಕಾಲುವೆಯಲ್ಲಿ ಜಪಾನಿನ ‘ಎವರ್‌ಗ್ರೀನ್‌’ ಹೆಸರಿನ ಬೃಹತ್‌ ಸರಕು ಸಾಗಣೆ ಹಡಗೊಂದು ಕಳೆದ ಮೂರು ದಿನಗಳಿಂದ ಸಿಕ್ಕಿಹಾಕಿಕೊಂಡಿದೆ. ಪರಿಣಾಮ ಇಡೀ ಪ್ರದೇಶದಲ್ಲಿ ನೂರಾರು ಬೃಹತ್‌ ಸರಕು ಸಾಗಣೆ ಹಡಗುಗಳ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಕಾಲುವೆಯಲ್ಲಿ ಸಿಲುಕಿಕೊಂಡಿರುವ ಹಡಗನ್ನು ತೆರವುಗೊಳಿಸಲು ಇನ್ನೂ ಒಂದು ವಾರ ಅಥವಾ ಅದಕ್ಕಿಂತಲೂ ಹೆಚ್ಚು ದಿನಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಇದರಿಂದ ಜಾಗತಿಕ ತೈಲ ಪೂರೈಕೆ, ಆಹಾರ ಸಾಮಗ್ರಿ ಸೇರಿದಂತೆ ವಿಶ್ವದೆಲ್ಲೆಡೆಯ ವ್ಯಾಪಾರ ವಹಿವಾಟು ವ್ಯತ್ಯಯಗೊಳ್ಳುವ ಆತಂಕ ಎದುರಾಗಿದೆ.

ಆಗಿದ್ದೇನು?

ಚೀನಾದಿಂದ ರೋಟಡ್ರ್ಯಾಮ್‌ಗೆ ತೆರಳುತ್ತಿದ್ದ 4 ಫುಟ್ಬಾಲ್‌ ಮೈದಾನದಷ್ಟು ದೊಡ್ಡದಾದ ಜಪಾನಿನ ಶೋಯಿ ಕಿನ್ಸೆನ್‌ ಎಂಬ ಸಂಸ್ಥೆಗೆ ಸೇರಿದ ಸರಕು ಸಾಗಣೆ ಹಡಗು ಮಂಗಳವಾರ ಸೂಯೆಜ್‌ ಕಾಲುವೆ ದಾಟುತ್ತಿದ್ದ ವೇಳೆ ಭಾರೀ ಗಾಳಿಗೆ ತುತ್ತಾಗಿ, ಅಡ್ಡಕ್ಕೆ ತಿರುಗಿ ಕೆಸರಿನಲ್ಲಿ ಹೂತುಹೋಗಿದೆ. ಅಡ್ಡಲಾಗಿ ಹಡಗು ಸಿಕ್ಕಿಹಾಕಿಕೊಂಡಿರುವುದರಿಂದ ಇತರ ಹಡಗುಗಳು ಮುಂದೆ ಚಲಿಸಲು ಸಾಧ್ಯವಾಗುತ್ತಿಲ್ಲ. ಸುಯೆಜ್‌ ಕಾಲುವೆಯ ಎರಡೂ ಕಡೆಗಳಲ್ಲಿ 156ಕ್ಕೂ ಹೆಚ್ಚು ಹಡಗುಗಳು ಮಾರ್ಗ ತೆರವಾಗುವುದನ್ನು ಎದುರು ನೋಡುತ್ತಿವೆ.

ಹಡಗು ತೆರವಿಗೆ ಭಾರೀ ಯತ್ನ:

2.20 ಲಕ್ಷ ಟನ್‌ನಷ್ಟು ಭಾರ ಇರುವ ಹಡಗಿನ ಮೂತಿ ಪೂರ್ವ ದಂಡೆಯ ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿದೆ. ಹೀಗಾಗಿ ಹಡಗಿನಲ್ಲಿ ತುಂಬಿರುವ ಕಂಟೇನರ್‌ ಅನ್‌ಲೋಡ್‌ ಮಾಡಿದ ಬಳಿಕ ಕ್ರೇನ್‌ನ ಮೂಲಕ ಹಡಗನ್ನು 900 ಅಡಿ ಹಿಂದಕ್ಕೆ ಎಳೆಯಬೇಕಿದೆ.

ಪರಿಣಾಮ ಏನು?

193 ಕಿ.ಮೀ. ಉದ್ದದ ಸುಯೆಜ್‌ ಕಾಲುವೆಯಲ್ಲಿ ಪ್ರತಿನಿತ್ಯ ಸುಮಾರು 73 ಸಾವಿರ ಕೋಟಿ ರು. ಮೌಲ್ಯದ ಸರಕುಗಳನ್ನು ಹೊತ್ತ ಹಡಗು ಸಂಚರಿಸುತ್ತವೆ. ವಿಶ್ವದ ಶೇ.10ರಷ್ಟು ಸರಕು ಸಾಗಣೆ ಈ ಕಾಲುವೆಯ ಮೇಲೆಯೇ ಅವಲಬಿತವಾಗಿದೆ. ಸೂಯೆಜ್‌ ಕಾಲುವೆ ಸ್ಥಗಿತೊಂಡಿದ್ದರಿಂದ ಜಾಗತಿಕ ಕಚ್ಚಾ ತೈಲ ದರ ಬುಧವಾರ ಶೇ.6ರಷ್ಟುಏರಿಕೆ ಕಂಡಿದೆ.

ಏನಿದು ಸೂಯೆಜ್‌ ಕಾಲುವೆ

ಮಡಿಟರೇನಿಯನ್‌ ಸಮುದ್ರ ಮತ್ತು ಕೆಂಪು ಸಮುದ್ರದ ಮಧ್ಯೆ ಈ ಕಾಲುವೆ ಸಂಪರ್ಕ ಕಲ್ಪಿಸುತ್ತದೆ. ಈ ಕಾಲುವೆ ಇಲ್ಲದೇ ಇದ್ದರೆ ಏಷ್ಯಾದಿಂದ ಯುರೋಪ್‌ಗೆ ಸಂಚರಿಸುವ ಹಡಗುಗಳು ಆಫ್ರಿಕಾ ಖಂಡವನ್ನು ಸುತ್ತಿಕೊಂಡು ಹೋಗಬೇಕಾಗುತ್ತದೆ. ಹೀಗಾಗಿ ಪ್ರಯಾಣದ ಅವಧಿ ಹಾಗೂ ಸಮಯವನ್ನು ಉಳಿಸುವ ನಿಟ್ಟಿನಿಂದ ಸೂಯೆಜ್‌ ಕಾಲುವೆಯನ್ನು 1869ರಲ್ಲಿ ತೆರೆಯಲಾಯಿತು. ಈ ಕಾಲುವೆ 24 ಮೀಟರ್‌ ಅಷ್ಟೇ ಆಳವಿದೆ. ಹೀಗಾಗಿ ಬೃಹತ್‌ ಹಡಗುಗಳು ಸಿಕ್ಕಿಹಾಕಿಕೊಳ್ಳುವ ಅಪಾಯ ಇರುತ್ತದೆ.

ಎವರ್‌ ಗ್ರೀನ್‌ ಹಡಗಿನ ವಿಶೇಷತೆ

400 ಮೀಟರ್‌: ಎವರ್‌ ಗ್ರೀನ್‌ ಹಡಗಿನ ಉದ್ದ

2.20 ಲಕ್ಷ ಟನ್‌: ಹಡಗಿನ ಒಟ್ಟು ಭಾರ

59 ಮೀಟರ್‌: ಹಡಗಿನ ಅಗಲ

156 ಹಡಗು: ಸಂಚಾರಕ್ಕೆ ಕಾದಿರುವ ಹಡಗುಗಳು

Follow Us:
Download App:
  • android
  • ios