* ಸಾಲ ಮರುಪಾವತಿ ಸದ್ಯಕ್ಕೆ ಮಾಡಲ್ಲ: ಘೋಷಣೆ* ವಿದೇಶಿ ಸಾಲ ಕಟ್ಟಲೂ ಶ್ರೀಲಂಕಾ ಬಳಿ ದುಡ್ಡಿಲ್ಲ!* ದ್ವೀಪರಾಷ್ಟ್ರದ ಆರ್ಥಿಕ ಸ್ಥಿತಿ ಮತ್ತಷ್ಟುವಿಕೋಪಕ್ಕೆ

ಕೊಲಂಬೋ(ಏ.13): 70 ವರ್ಷಗಳಲ್ಲೇ ಕಂಡು ಕೇಳರಿಯದ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾ ವಿದೇಶಗಳು, ವಿದೇಶಿ ಹಣಕಾಸು ಸಂಸ್ಥೆಗಳಿಂದ ಪಡೆದಿರುವ 3.88 ಲಕ್ಷ ಕೋಟಿ ರು. (51 ಶತಕೋಟಿ ಡಾಲರ್‌) ಸಾಲ ಮರುಪಾವತಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಣೆ ಮಾಡಿದೆ. ಇದರೊಂದಿಗೆ ಶ್ರೀಲಂಕಾದ ದುಸ್ಥಿತಿ ಮತ್ತೊದು ಮಜಲು ತಲುಪಿದೆ.

ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್‌)ನಿಂದ ಪರಿಹಾರದ ನಿರೀಕ್ಷೆಯಲ್ಲಿದ್ದು, ಅದು ಬರುವವರೆಗೂ ತನ್ನ ಯಾವುದೇ ವಿದೇಶಿ ಸಾಲವನ್ನು ಮರುಪಾವತಿಸುವುದಿಲ್ಲ ಎಂದು ಪ್ರಕಟಿಸಿದೆ. ಪರಿಹಾರ ಪಡೆಯುವ ಸಂಬಂಧ ಐಎಂಎಫ್‌ ಜತೆ ಮುಂದಿನ ವಾರದಿಂದ ಲಂಕಾ ಮಾತುಕತೆ ನಡೆಸಲಿದೆ.

ಪ್ರವಾಸೋದ್ಯಮದ ಮೇಲೆಯೇ ಅವಲಂಬಿತವಾಗಿರುವ ಶ್ರೀಲಂಕಾ, ಒಟ್ಟಾರೆ 3.88 ಲಕ್ಷ ಕೋಟಿ ರು. ಸಾಲದ ಪೈಕಿ ಈ ವರ್ಷ 30 ಸಾವಿರ ಕೋಟಿ ರು. ಸಾಲ ಮರುಪಾವತಿಸಬೇಕಾಗಿದೆ. ಇದಕ್ಕೆ ಸಂಬಂಧಿಸಿದ ಎರಡು ಕಂತುಗಳನ್ನು ಸೋಮವಾರ ಚುಕ್ತಾ ಮಾಡಬೇಕಾಗಿತ್ತು. ಆದರೆ ವಿದೇಶಿ ಸಾಲ ಮರುಪಾವತಿಸಲು ಸಾಧ್ಯವಿಲ್ಲದ ಹಾಗೂ ಸವಾಲಿನ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ಶ್ರೀಲಂಕಾದ ಕೇಂದ್ರೀಯ ಬ್ಯಾಂಕ್‌ ಹೇಳಿದೆ. ವಿದೇಶಿ ಸಾಲ ಮರುಪಾವತಿಸುವ ಬದಲು ಅದೇ ಹಣವನ್ನು ತೈಲ ಖರೀದಿಯಂತಹ ದೇಶದ ಅತ್ಯಾವಶ್ಯಕ ವಸ್ತುಗಳ ಖರೀದಿಗೆ ಬಳಸಿಕೊಳ್ಳುವ ಉದ್ದೇಶವನ್ನು ಲಂಕಾ ಹೊಂದಿದೆ.

ಇಂಧನ, ವಿದ್ಯುತ್‌, ಆಹಾರ ಹಾಗೂ ಔಷಧಕ್ಕಾಗಿ ಶ್ರೀಲಂಕಾದಾದ್ಯಂತ ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಂಡಿರಬಹುದು ಎಂದು ಹೇಳಲಾಗುತ್ತಿದೆ.

ಮುಂದೇನು?:

ಯಾವುದೇ ದೇಶ ವಿದೇಶದಿಂದ ಸಾಲ ಪಡೆದು ಅದರ ಬಡ್ಡಿಯನ್ನೂ ಮರುಪಾವತಿಸಲು ವಿಫಲವಾದರೆ ಮತ್ತೆ ಅಂತಹ ದೇಶಕ್ಕೆ ಸಾಲ ಸಿಗುವುದಿಲ್ಲ. ಸಿಕ್ಕರೂ ಹಿಂದೆಂದಿಗಿಂತ ಅಧಿಕ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ನೂರಾರು ದೇಶಗಳು ಈ ರೀತಿ ಸಾಲ ಮರುಪಾವತಿ ವೈಫಲ್ಯವನ್ನು ಬಹಿರಂಗವಾಗಿ ಘೋಷಿಸಿ ಬಳಿಕ ಸುಸ್ಥಿತಿಗೆ ಬಂದ ನಿದರ್ಶನಗಳಿವೆ. ಅಂತಹ ಸಂದರ್ಭದಲ್ಲಿ ಹಳೆಯದನ್ನು ಮರೆತು ವಿದೇಶಿ ಸಂಸ್ಥೆಗಳು ಸಾಲ ನೀಡಿದ ಉದಾಹರಣೆಗಳು ಇವೆ. ಶ್ರೀಲಂಕಾ ಸದ್ಯ ತಾತ್ಕಾಲಿಕವಾಗಿ ಸಾಲ ಮರುಪಾವತಿ ಸ್ಥಗಿತಗೊಳಿಸಿದೆ.