ಜಿನೆವಾ(ಮೇ.18):: ಕೊರೋನಾ ವೈರಸ್‌ ನಾಶಪಡಿಸಲು ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಮನುಷ್ಯರ ಮೇಲೆ ರಾಸಾಯನಿಕ ಮಿಶ್ರಿತ ದ್ರಾವಣ ಸಿಂಪಡಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಮತ್ತು ಅದು ಅಪಾಯಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದೆ.

ಈ ಕುರಿತು ವರದಿಯೊಂದನ್ನು ಬಿಡುಗಡೆ ಮಾಡಿರುವ ಸಂಸ್ಥೆ, ‘ಬೀದಿಗಳು ಅಥವಾ ಮಾರುಕಟ್ಟೆಯಂತಹ ಪ್ರದೇಶಗಳಿಗೆ ದ್ರಾವಣ ಸಿಂಪಡಣೆ ಮಾಡುವುದು ಅಥವಾ ಫ್ಯೂಮಿಗೇಶನ್‌ ಮಾಡುವುದರಿಂದ ಕೊರೋನಾ ವೈರಸ್‌ ಸೇರಿದಂತೆ ಯಾವ ವೈರಾಣುವೂ ಸಾಯುವುದಿಲ್ಲ. ಏಕೆಂದರೆ ಈ ರಾಸಾಯನಿಕದ ಶಕ್ತಿ ಬೀದಿಯಲ್ಲಿರುವ ಕೊಳಕಿನಿಂದಲೇ ನಾಶವಾಗಿಹೋಗುತ್ತದೆ. ಮೇಲಾಗಿ ಇಂತಹ ದ್ರಾವಣ ಎಲ್ಲ ಕಡೆಗೂ ತಾಗುವುದಿಲ್ಲ. ಇನ್ನು, ಕ್ಲೋರೀನ್‌ ಹಾಗೂ ಇನ್ನಿತರ ರಾಸಾಯನಿಕಗಳಿರುವ ಈ ದ್ರಾವಣವನ್ನು ಮನುಷ್ಯರ ಮೇಲಂತೂ ಸಿಂಪಡಣೆ ಮಾಡಲೇಬಾರದು. ಅದು ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದಲ್ಲ. ಇಂತಹ ರಾಸಾಯನಿಕ ಸಿಂಪಡಣೆಯಿಂದ ಕೊರೋನಾಪೀಡಿತ ವ್ಯಕ್ತಿ ಇನ್ನೊಬ್ಬರಿಗೆ ಕೊರೋನಾ ಹರಡುವುದನ್ನು ತಪ್ಪಿಸಲು ಅಥವಾ ಆರೋಗ್ಯವಂತ ವ್ಯಕ್ತಿ ಕೊರೋನಾ ಸೋಂಕು ತಗಲಿಸಿಕೊಳ್ಳುವುದನ್ನು ತಪ್ಪಿಸಲು ಸಾಧ್ಯವಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದೆ.

ಸ್ಯಾನಿಟೈಸರ್‌ ಬಳಕೆ ಹೇಗಿರಬೇಕು? ಬೇಕಾಬಿಟ್ಟಿ ಸ್ಯಾನಿಟೈಸರ್‌ ಬಳಸೋದು ಡೇಂಜರ್!

ಭಾರತ, ಚೀನಾ ಸೇರಿದಂತೆ ಅನೇಕ ದೇಶಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕೊರೋನಾ ವೈರಸ್‌ ನಾಶಪಡಿಸುವ ಉದ್ದೇಶದಿಂದ ರಾಸಾಯನಿಕ ಸಿಂಪಡಣೆ ಹಾಗೂ ಫ್ಯೂಮಿಗೇಶನ್‌ ಮಾಡಲಾಗುತ್ತಿದೆ. ಮಾರುಕಟ್ಟೆಯಂತಹ ಪ್ರದೇಶಗಳಿಗೆ ಪ್ರವೇಶಿಸುವ ಸಾರ್ವಜನಿಕರ ಮೇಲೂ ರಾಸಾಯನಿಕ ಸಿಂಪಡಣೆ ಮಾಡುವ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಎಚ್ಚರಿಕೆ ಮಹತ್ವ ಪಡೆದಿದೆ.