ನವ​ದೆ​ಹ​ಲಿ(ಮಾ.18): ಮಾಸ್ಕ್‌ ಧರಿ​ಸದ ಪ್ರಯಾ​ಣಿ​ಕ​ರನ್ನು ವಿಮಾ​ನ​ದಿಂದ ಕೆಳ​ಗಿ​ಳಿ​ಸು​ವಂತೆ ವಿಮಾನ ಸಂಸ್ಥೆ​ಗ​ಳಿಗೆ ನಾಗ​ರಿಕ ವಿಮಾ​ನ​ಯಾನ ಪ್ರಧಾನ ನಿರ್ದೇ​ಶ​ನಾ​ಲ​ಯ​(​ಡಿಜಿ​ಸಿ​ಎ) ನಿರ್ದೇ​ಶಿ​ಸಿದ ಬೆನ್ನಲ್ಲೇ, ಸರಿ​ಯಾಗಿ ಮಾಸ್ಕ್‌ ಧರಿ​ಸ​ದಿದ್ದ ನಾಲ್ವರು ಪ್ರಯಾ​ಣಿ​ಕ​ರನ್ನು ಜಮ್ಮು ವಿಮಾನ ನಿಲ್ದಾ​ಣ​ದಲ್ಲಿ ವಿಮಾ​ನ​ದಿಂದ ಕೆಳ​ಕ್ಕಿ​ಳಿಸಿ ಭದ್ರತಾ ಏಜೆ​ನ್ಸಿ​ಗ​ಳ ವಶಕ್ಕೆ ನೀಡ​ಲಾ​ಗಿದೆ.

ಅಲ್ಲದೆ ಪ್ರಯಾ​ಣಿ​ಕರ ಈ ವರ್ತ​ನೆ​ಯನ್ನು ದುರ್ವ​ರ್ತನೆ ಎಂದು ಪರಿ​ಗ​ಣಿಸಿ ಇವ​ರನ್ನು 3 ತಿಂಗ​ಳಿಂದ 24 ತಿಂಗ​ಳು​ಗಳ ಕಾಲ ತನ್ನ ವಿಮಾನ ಹತ್ತ​ದಂತೆ ಅಲ​ಯನ್ಸ್‌ ಏರ್‌ ವಿಮಾನ ಸಂಸ್ಥೆ ನಿರ್ಬಂಧಿ​ಸ​ಬ​ಹು​ದಾಗಿದೆ.

ಅಲ​ಯನ್ಸ್‌ ವಿಮಾ​ನದ ಮೂಲಕ ಜಮ್ಮು​ವಿ​ನಿಂದ ದೆಹ​ಲಿಗೆ ಪ್ರಯಾ​ಣಿ​ಸಲು ಮುಂದಾ​ಗಿದ್ದ ನಾಲ್ವರು ಪ್ರಯಾ​ಣಿ​ಕರು ಸರಿ​ಯಾಗಿ ಮಾಸ್ಕ್‌ ಧರಿ​ಸಿ​ರ​ಲಿ​ಲ್ಲ. ಈ ವೇಳೆ ಸರಿ​ಯಾಗಿ ಮಾಸ್ಕ್‌ ಧರಿ​ಸು​ವಂತೆ ವಿಮಾನ ಸಿಬ್ಬಂದಿ ಪದೇ-ಪದೇ ಸೂಚಿ​ಸು​ತ್ತಲೇ ಇದ್ದರು.

ಆದರೆ ಸಿಬ್ಬಂದಿ ಎಚ್ಚ​ರಿ​ಕೆ​ಯನ್ನು ಉಡಾಫೆ ಮಾಡಿದ ಪ್ರಯಾ​ಣಿ​ಕರು ಇದೀಗ ವಿಮಾ​ನ​ದಿಂದ ಹೊರ​ಬಿದ್ದು, ಭದ್ರತಾ ಸಿಬ್ಬಂದಿ ವಶಕ್ಕೆ ಸಿಲು​ಕಿ​ದ್ದಾರೆ.