* ದಿನೇ ದಿನೇ ಹೊಸ ಕೇಸು ಭಾರೀ ಇಳಿಕೆ* ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರೋನ್‌ ಅಂತ್ಯ?* ಕಳೆದ ವಾರ 27,000, ಮೊನ್ನೆ 15,000

ಜೊಹಾನ್ಸ್‌ಬರ್ಗ್‌(ಡಿ.23): ಜಗತ್ತಿನಲ್ಲೇ ಮೊದಲು ಒಮಿಕ್ರೋನ್‌ ಕೊರೋನಾ ರೂಪಾಂತರಿ ತಳಿ ಪತ್ತೆಯಾಗಿ ಇಡೀ ವಿಶ್ವಕ್ಕೆ ಆತಂಕ ಹುಟ್ಟಿಸಿದ್ದ ದಕ್ಷಿಣ ಆಫ್ರಿಕಾದಲ್ಲಿ ಇದೀಗ ‘ಒಮಿಕ್ರೋನ್‌ ಅಲೆ’ ಹೆಚ್ಚು ಹಾನಿ ಮಾಡದೆ ತನ್ನ ಗರಿಷ್ಠ ಮಟ್ಟಮುಟ್ಟಿಇಳಿಕೆಯ ಹಾದಿಯಲ್ಲಿ ಸಾಗಿರುವ ಶುಭ ಸುದ್ದಿ ಬಂದಿದೆ.

ಕೋವಿಡ್‌ ಲಸಿಕೆ ವಿತರಣೆಯಲ್ಲಿ ವಿಶ್ವದಲ್ಲೇ ಅತ್ಯಂತ ಕಳಪೆ ಸಾಧನೆ ಮಾಡಿರುವ ಮತ್ತು ಮೊದಲ ಒಮಿಕ್ರೋನ್‌ ವೈರಸ್‌ ಪತ್ತೆಯಾಗಿದ್ದ ಅಲ್ಲಿನ ಬೆಳವಣಿಗೆಯನ್ನು ಇಡೀ ವಿಶ್ವ ಭಾರೀ ಕುತೂಹಲದಿಂದ ಗಮನಿಸಿತ್ತು.

ಈ ಹಿಂದಿನ ಡೆಲ್ಟಾರೂಪಾಂತರಿ ಕಳೆದ 6 ತಿಂಗಳಿನಿಂದ ವಿಶ್ವದ ಹಲವು ರಾಷ್ಟ್ರಗಳಲ್ಲಿ ಭಾರೀ ಅನಾಹುತಕ್ಕೆ ಕಾರಣವಾಗಿತ್ತು. ಆದರೆ ಒಮಿಕ್ರೋನ್‌ ಕಳೆದ ನವೆಂಬರ್‌ನಲ್ಲಿ ಕಾಣಿಸಿಕೊಂಡು, ಕೇವಲ ಒಂದು ತಿಂಗಳಲ್ಲೇ ತನ್ನ ತೀವ್ರತೆ ಕಳೆದುಕೊಂಡಿದ್ದು, ಇದು ಖಚಿತಪಟ್ಟರೆ ಅದು ವಿಶ್ವದ ಇತರೆ ದೇಶಗಳಿಗೂ ಶುಭ ಸುದ್ದಿಯೇ ಸರಿ. ಹೀಗಾಗಿ ದಕ್ಷಿಣ ಆಫ್ರಿಕಾದ ಬೆಳವಣಿಗೆ ಭಾರೀ ಮಹತ್ವ ಪಡೆದಿದೆ.

ದಿನೇ ದಿನೇ ಇಳಿಕೆ:

ಕಳೆದ ಗುರುವಾರ ದಕ್ಷಿಣ ಆಫ್ರಿಕಾದಲ್ಲಿ ಗರಿಷ್ಠ 27000 ಹೊಸ ಕೋವಿಡ್‌ ಸೋಂಕಿತರು (ಒಮಿಕ್ರೋನ್‌ ಸೋಂಕಿತರು ಸೇರಿ) ಪತ್ತೆಯಾಗಿದ್ದರು. ನಂತರ ದಿನೇ ದಿನೇ ಆ ಪ್ರಮಾಣ ಇಳಿಕೆ ಹಾದಿಯಲ್ಲಿದ್ದು, ಮಂಗಳವಾರ 15424ಕ್ಕೆ ತಲುಪಿದೆ. 1.6 ಕೋಟಿ ಜನಸಂಖ್ಯೆಯೊಂದಿಗೆ ದ.ಆಫ್ರಿಕಾದ ಅತಿದೊಡ್ಡ ಪ್ರಾಂತ್ಯ ಎನ್ನಿಸಿಕೊಂಡಿರುವ, ಅತಿ ಹೆಚ್ಚು ಒಮಿಕ್ರೋನ್‌ ಕೇಸು ಪತ್ತೆಯಾಗಿದ್ದ ಗೌಟೆಂಗ್‌ ಪ್ರಾಂತ್ಯ, ಅತಿದೊಡ್ಡ ನಗರ ಜೊಹಾನ್ಸ್‌ಬರ್ಗ್‌, ರಾಜಧಾನಿ ಪ್ರಿಟೋರಿಯಾ ಸೇರಿದಂತೆ ಬಹುತೇಕ ಕಡೆ ಹೊಸ ಕೇಸುಗಳಲ್ಲಿ ಇಳಿಕೆ ಕಂಡುಬಂದಿದೆ.

ದೇಶದಲ್ಲಿ ಒಮಿಕ್ರೋನ್‌ ಹಾಟ್‌ಸ್ಪಾಟ್‌ ಎನ್ನಿಸಿದ್ದ ಗೌಟೆಂಗ್‌ ಪ್ರಾಂತ್ಯದಲ್ಲಿನ ಹಂತಹಂತ ಇಳಿಕೆ, ದೇಶದಲ್ಲಿ ಒಮಿಕ್ರೋನ್‌ ಅಲೆ ಮುಗಿದಿರುವ ಸುಳಿವಾಗಿರಬಹುದು. ಡಿ.12ರಂದು ಗೌಟೆಂಗ್‌ನಲ್ಲಿ 16000 ಕೇಸು ಪತ್ತೆಯಾಗಿದ್ದರೆ, ಮಂಗಳವಾರ ಅದು 3300ಕ್ಕೆ ಇಳಿದಿದೆ. ಇದು ಅತ್ಯಂತ ಮಹತ್ವದ ಬೆಳವಣಿಗೆ. ಬಹುಶಃ ಇದೊಂದು ಸಣ್ಣ ಅಲೆ. ಒಳ್ಳೆಯ ಸುದ್ದಿಯೆಂದರೆ ಒಮಿಕ್ರೋನ್‌ ಸೋಂಕಿತರ ಆಸ್ಪತ್ರೆ ದಾಖಲಾತಿ ಮತ್ತು ಸಾವು ಗಂಭೀರವಾಗಿರಲಿಲ್ಲ ಎಂದು ವಿಟ್‌ವಾಟ​ರ್‍ಸ್ರಾರ‍ಯಂಡ್‌ ವಿವಿಯ ಸಾಂಕ್ರಾಮಿಕ ರೋಗ ವಿಶ್ಲೇಷಣಾ ವಿಭಾಗದ ಹಿರಿಯ ಸಂಶೋಧಕಿ ಮಾರ್ಟಾ ನ್ಯುನೆಸ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೋಂಕು ಇಳಿಕೆಯ ಇನ್ನೊಂದು ಸೂಚಕವೆಂದರೆ, ಸೊವೇಟೋದಲ್ಲಿನ ಕ್ರಿಸ್‌ ಹನಿ ಬರಗ್ವನಾಥ್‌ ಆಸ್ಪತ್ರೆಯಲ್ಲಿನ ಆರೋಗ್ಯ ಕಾರ್ಯಕರ್ತರ ಅಧ್ಯಯನದ ಅನ್ವಯ, ಎರಡು ವಾರಗಳ ಹಿಂದೆ ನಿತ್ಯ 20 ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಕಾಣಿಸುತ್ತಿತ್ತು. ಅದು ಈಗ 5-6ಕ್ಕೆ ಇಳಿದಿದೆ ಎಂದು ಮಾರ್ಟಾ ಹೇಳಿದ್ದಾರೆ.

ಅತ್ಯಂತ ತೀವ್ರಗತಿಯಲ್ಲಿ ಏರಿಕೆ ಕಂಡಿದ್ದ ಸೋಂಕು, ಅಷ್ಟೇ ತೀವ್ರಗತಿಯಲ್ಲಿ ಇಳಿಕೆ ಕಾಣುತ್ತಿರುವುದು ಹೊಸ ಅಲೆಯ ಇಳಿಮುಖದ ಸೂಚನೆಯಾಗಿರಬಹುದು ಎಂದು ಸ್ಟೀವ್‌ ಬಿಕೋ ಅಕಾಡೆಮಿಕ್‌ ಹಾಸ್ಪಿಟಲ್‌ನ ಡಾ. ಫರೀದ್‌ ಅಬ್ದುಲ್ಲಾ ಹೇಳಿದ್ದಾರೆ.

ಆದರೆ ಇದೀಗ ದಕ್ಷಿಣ ಆಫ್ರಿಕಾದಲ್ಲಿ ಒಂದು ತಿಂಗಳ ರಜಾ ಅವಧಿ. ಜನರು ಕುಟುಂಬ ಸಮೇತ ಪ್ರವಾಸಕ್ಕೆ ತೆರಳುತ್ತಾರೆ. ಅದರಲ್ಲೂ ಗ್ರಾಮೀಣ ಭಾಗಗಳಿಗೆ ಹೆಚ್ಚಾಗಿ ತೆರಳುತ್ತಾರೆ. ಈ ಅವಧಿಯಲ್ಲಿ ಮತ್ತೆ ಸೋಂಕು ಹೆಚ್ಚಳದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ.

ಬೇಗ ಅಂತ್ಯದತ್ತ, ಹಾನಿಯೂ ಕಡಿಮೆ

- ಡೆಲ್ಟಾಅಲೆ 3-4 ತಿಂಗಳು ಇತ್ತು, ಆದರೆ ಒಮಿಕ್ರೋನ್‌ ಒಂದೇ ತಿಂಗಳಲ್ಲಿ ಇಳಿಯುತ್ತಿದೆ

- ಒಮಿಕ್ರೋನ್‌ ಸೋಂಕಿತರು ಆಸ್ಪತ್ರೆಗೆ ದಾಖಲಾದ ಪ್ರಮಾಣ ಡೆಲ್ಟಾಗಿಂತ ಬಹಳ ಕಡಿಮೆ

- ಒಮಿಕ್ರೋನ್‌ ಸೋಂಕಿತರ ಸಾವಿನ ಸಂಖ್ಯೆ ಡೆಲ್ಟಾಗೆ ಹೋಲಿಸಿದರೆ ಹಲವು ಪಟ್ಟು ಕಡಿಮೆ

- ಕೋವಿಡ್‌ ಲಸಿಕೆ ವಿತರಣೆಯಲ್ಲಿ ಜಗತ್ತಿನಲ್ಲೇ ಕಳಪೆ ಸಾಧನೆ ಮಾಡಿರುವ ದೇಶ ದ.ಆಫ್ರಿಕಾ

- ಮೊದಲ ಒಮಿಕ್ರೋನ್‌ ಕೇಸ್‌ ಪತ್ತೆಯಾಗಿದ್ದ ದ.ಆಫ್ರಿಕಾದ ಬೆಳವಣಿಗೆ ಜಗತ್ತಿಗೇ ಶುಭಸುದ್ದಿ