ವಾಷಿಂಗ್ಟನ್‌/ ಸಿಂಗಾಪುರ(ಜೂ.10): ಭಾರತದಲ್ಲಿ ಕೋಟ್ಯಂತರ ಜನರಿಗೆ ವ್ಯಾಪಿಸಿ, ಲಕ್ಷಾಂತರ ಜನರ ಸಾವಿಗೆ ಕಾರಣವಾದ ರೂಪಾಂತರಿ ಕೊರೋನಾ ತಳಿ ಡೆಲ್ಟಾ(ಬಿ.1.617.2) ಇದೀಗ ಅಮೆರಿಕ ಮತ್ತು ಸಿಂಗಾಪುರದಲ್ಲೂ ವ್ಯಾಪಕವಾಗತೊಡಗಿದೆ. ಡೆಲ್ಟಾತಳಿ ಅಮೆರಿಕವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಡಲಾಗದು, ಈ ಬಗ್ಗೆ ಮುನ್ನೆಚ್ಚರಿಕೆ ಅವಶ್ಯಕ ಎಂದು ಅಮೆರಿಕದ ಪ್ರಖ್ಯಾತ ಸಾಂಕ್ರಾಮಿಕ ರೋಗ ತಜ್ಞ ಡಾ.ಆ್ಯಂಟೋನಿ ಫೌಸಿ ಎಚ್ಚರಿಕೆ ನೀಡಿದ್ದರೆ, ಮತ್ತೊಂದೆಡೆ ಸಿಂಗಾಪುರದಲ್ಲಿ ಸ್ಥಳೀಯವಾಗಿ ಹಬ್ಬುತ್ತಿರುವ ಸೋಂಕಿನ ಪೈಕಿ ಡೆಲ್ಟಾಮುಂಚೂಣಿಯಲ್ಲಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

ಭಾರತದಲ್ಲೇ ಮೊದಲ ಬಾರಿಗೆ ಪತ್ತೆಯಾದ ರೂಪಾಂತರಿ ಡೆಲ್ಟಾತಳಿ ಹೆಚ್ಚು ಸಾಂಕ್ರಾಮಿಕ ಮತ್ತು ಸೋಂಕುಕಾರಕ ಎಂದು ಇತ್ತೀಚೆಗೆ ಭಾರತ ಸರ್ಕಾರವೇ ನಡೆಸಿದ್ದ ಸಂಶೋಧನಾ ವರದಿ ಎಚ್ಚರಿಸಿತ್ತು. ಜೊತೆಗೆ ಬ್ರಿಟನ್‌ನಲ್ಲಿ ಪತ್ತೆಯಾದ ಕುಲಾಂತರಿ ತಳಿ ಆಲ್ಫಾಗಿಂತ ಡೆಲ್ಟಾಶೇ.50ರಷ್ಟುಡೇಂಜರ್‌ ಎಂದು ಹೇಳಿತ್ತು. ಮತ್ತೊಂದೆಡೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ವಿಶ್ವದ 60ಕ್ಕೂ ಹೆಚ್ಚು ದೇಶಗಳಲ್ಲಿ ಡೆಲ್ಟಾತಳಿ ಪತ್ತೆಯಾಗಿದೆ ಎಂದು ಹೇಳಿತ್ತು. ಅದರ ಬೆನ್ನಲ್ಲೇ ಇದೀಗ ಈ ರೂಪಾಂತರಿ ಅಮೆರಿಕ, ಸಿಂಗಾಪುರ ದೇಶಗಳಿಗೂ ಆತಂಕ ಹುಟ್ಟುಹಾಕಿದೆ.

ಅಮೆರಿಕ ಹೈಅಲರ್ಟ್‌:

ಡೆಲ್ಟಾವೈರಸ್‌ ಕುರಿತು ಪ್ರತಿಕ್ರಿಯೆ ನೀಡಿರುವ ಡಾ.ಫೌಸಿ, ‘ಭಾರೀ ಸೋಂಕುಕಾರಕವಾದ ಡೆಲ್ಟಾವೈರಸ್‌ ಈಗಾಗಲೇ ಬ್ರಿಟನ್‌ನಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರತೊಡಗಿದೆ. ಈ ತಳಿ ಅಮೆರಿಕವನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳುವುದನ್ನು ತಡೆಯಲು ಈಗಾಗಲೇ ನಮ್ಮ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಬ್ರಿಟನ್‌ನಲ್ಲಿ ಸ್ಥಳೀಯವಾಗಿ ಪತ್ತೆಯಾಗಿದ್ದ ಆಲ್ಫಾಗಿಂತಲೂ ಇದೀಗ ಡೆಲ್ಟಾಹೆಚ್ಚು ಸಕ್ರಿಯವಾಗಿದೆ. ಅಮೆರಿಕದಲ್ಲೂ ಇದೇ ಪರಿಸ್ಥಿತಿ ತಲೆದೋರಲು ನಾವು ಬಿಡಲಾಗದು. ಅದರಲ್ಲೂ ವಿದೇಶಗಳಲ್ಲಿ ವಿಶೇಷವಾಗಿ 12-20ರ ವಯೋಮಾನದವರ ಮೇಲೆ ಡೆಲ್ಟಾವೈರಸ್‌ ತನ್ನ ದಾಳಿ ತೀವ್ರಗೊಳಿಸುತ್ತಿದೆ. ಇದನ್ನು ತಡೆಯುವ ಏಕೈಕ ಮತ್ತು ಶಕ್ತಿಶಾಲಿ ಸಾಧನವೆಂದರೆ ಎಲ್ಲರೂ ಲಸಿಕೆ ಪಡೆಯವುದು. ಜುಲೈ 4ರೊಳಗೆ ದೇಶದ ಶೇ.70ರಷ್ಟುಜನರಿಗೆ ಲಸಿಕೆ ನೀಡುವ ಅಧಿಕಾರಿಗಳ ಗುರಿ ಈಡೇರುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದ್ದಾರೆ.

ಇದೇ ವೇಳೆ ಫೈಝರ್‌ ಮತ್ತು ಆಸ್ಟ್ರಾಜನೆಕಾ ಅಭಿವೃದ್ಧಿಪಡಿಸಿರುವ ಲಸಿಕೆಗಳು ಡೆಲ್ಟಾಮೇಲೆ ಪರಿಣಾಮಕಾರಿ ಎಂದು ಕಂಡುಬಂದಿದೆ. ಹೀಗಾಗಿ ಶೀಘ್ರವೇ ಪ್ರತಿಯೊಬ್ಬರೂ ಲಸಿಕೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಸಿಂಗಾಪುರಕ್ಕೂ ಭೀತಿ:

ದೇಶದಲ್ಲಿ ಸ್ಥಳೀಯವಾಗಿ ಹಬ್ಬುತ್ತಿರುವ ಪ್ರಕರಣಗಳಲ್ಲಿ ಡೆಲ್ಟಾವೈರಸ್‌ ಪಾಲೇ ಅತ್ಯಧಿಕವಾಗಿದೆ. ಮೇ 31ರವರೆಗೆ ದೇಶದಲ್ಲಿ ಪತ್ತೆಯಾದ ಸ್ಥಳೀಯವಾಗಿ ಹಬ್ಬಿದ 449 ಪ್ರಕರಣಗಳ ಪೈಕಿ 428 ಡೆಲ್ಟಾವೈರಸ್‌ನದ್ದೇ ಆಗಿದೆ. ಕೇವಲ 9 ಪ್ರಕರಣ ಮಾತ್ರ ಆಫ್ರಿಕಾದಲ್ಲಿ ಪತ್ತೆಯಾದ ಬೇಟಾ ತಳಿಯದ್ದು ಎಂದು ಅಧಿಕಾರಿಗಳು ಹೇಳಿದ್ದಾರೆ.