ಚಂಡೀಗಢ[ಡಿ.15]: ಪೌರತ್ವ ತಿದ್ದುಪಡಿ ವಿಧೇಯಕ ಸಂಸತ್ತಿನ ಒಪ್ಪಿಗೆ ಪಡೆದು, ರಾಷ್ಟ್ರಪತಿಗಳ ಸಹಿ ಬೀಳುತ್ತಿದ್ದಂತೆ ಈಶಾನ್ಯ ರಾಜ್ಯಗಳು, ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಆದರೆ ಹರ್ಯಾಣದ ಫತೇಹಾಬಾದ್‌ ಜಿಲ್ಲೆಯಲ್ಲಿ ಬೀದಿ ಬದಿ ಕಡಲೆಕಾಯಿ ಮಾರುವ ವ್ಯಾಪಾರಿಯೊಬ್ಬರು ಭಾರಿ ಸಂತೋಷ ಪಡುತ್ತಿದ್ದಾರೆ. ಭಾರತದ ಬಾವುಟವನ್ನು ಹಾರಿಸಿ ಸಂಭ್ರಮಿಸುತ್ತಿದ್ದಾರೆ.

ಅಂದಹಾಗೆ, ಈ ವ್ಯಕ್ತಿ ಪಾಕಿಸ್ತಾನದ ಮಾಜಿ ಸಂಸದ ದಿವ್ಯಾರಾಮ್‌ (74). ಅಲ್ಲಿನ ಧಾರ್ಮಿಕ ಹಿಂಸಾಚಾರದಿಂದ ಬೇಸತ್ತು 2000ನೇ ಇಸ್ವಿಯಲ್ಲಿ ಕುಟುಂಬ ಸಮೇತ ಭಾರತಕ್ಕೆ ಬಂದವರು. ಬೇನಜೀರ್‌ ಭುಟ್ಟೋ ಸರ್ಕಾರದಿಂದ ಸಂಸತ್ತಿಗೆ ನಾಮನಿರ್ದೇಶನಗೊಂಡಿದ್ದ ಅವರು ಪೌರತ್ವ ತಿದ್ದುಪಡಿ ಕಾಯ್ದೆಯಿಂದ ತಮಗೆ ಭಾರತೀಯ ಪೌರತ್ವ ಸಿಗಲಿದೆ ಎಂದು ಸಂತೋಷ ಪಡುತ್ತಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಆಗಿದ್ದರಿಂದ ಹರ್ಯಾಣದ ಫತೆಹಾಬಾದ್‌ನ ರತ್ತನ್‌ಗಢ್‌ ಎಂಬ ಗ್ರಾಮದಲ್ಲಿ ರಸ್ತೆಬದಿಯಲ್ಲಿ ಕಡ್ಲೇಕಾಯಿ ಮಾರಾಟ ಮಾರುವ ವ್ಯಕ್ತಿಯೊಬ್ಬರು ಸಂತಸಗೊಂಡಿದ್ದಾರೆ. ಅಂದಹಾಗೆ ಇವರೊಬ್ಬ ಪಾಕ್‌ ಮಾಜಿ ಸಂಸದ. 19 ವರ್ಷದ ಹಿಂದೆ ಭಾರತಕ್ಕೆ ವಲಸೆ ಬಂದ 74 ವರ್ಷದ ದಿವ್ಯಾರಾಮ್‌ ಈಗ ಭಾರತದ ಪ್ರಜೆ ಎನಿಸಿಕೊಳ್ಳುವ ಸಮಯ ದೂರ ಇಲ್ಲ.

ಬೆನಿಜಿರ್‌ ಬುಟ್ಟೋ ಅವರು ಪಾಕಿಸ್ತಾನದ ಪ್ರಧಾನಿ ಆಗಿದ್ದಾಗ, ಮುಸ್ಲಿಂ ಏತರ ಪ್ರತಿನಿಧಿಯಾಗಿ ದಿವ್ಯಾರಾಮ್‌ ಸಂಸತ್ತಿಗೆ ಆಯ್ಕೆ ಆಗಿದ್ದರು. ಆದರೆ, ಸಂಸದರಾಗಿದ್ದೇ ಅವರಿಗೆ ಮುಳುವಾಯಿತು. ಮುಸ್ಲಿಂ ಮುಖಂಡರು ಲಾಬಿ ಮಾಡಿ ರಾಜೀನಾಮೆಗೆ ಒತ್ತಡ ಹಾಕಿದರು. ಇದಕ್ಕೆ ಒಪ್ಪದೇ ಇದ್ದಾಗ ಮಗಳ ಸಮಾನವಾಗಿದ್ದ ಸೋದರ ಸೊಸೆಯನ್ನು ಅಪಹರಣ ಮಾಡಲಾಯಿತು. ದಿವ್ಯಾರಾಮ್‌ ಕೋರ್ಟ್‌ ಮೆಟ್ಟಿಲೇರಿದರೂ ಪ್ರಯೋಜನ ಆಗಲಿಲ್ಲ. ಬಳಿಕ ಅವರು ಸಂಸತ್‌ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.

ಪಾಕಿಸ್ತಾನದಲ್ಲಿ ದಿವ್ಯಾರಾಮ್‌ ಕುಟುಂಬ 25 ಎಕರೆ ಜಮೀನು ಹೊಂದಿದ್ದರೂ ಅದೀಗ ಸ್ಥಳೀಯರ ಪಾಲಾಗಿದೆ. ನಿರಂತರ ಕಿರುಕುಳದಿಂದ ಬೇಸತ್ತು ದಿವ್ಯಾರಾಮ್‌ ಮತ್ತು ಅವರ ಕುಟುಂಬದ 12 ಮಂದಿ ಸದಸ್ಯರು 2000ರಲ್ಲಿ ಭಾರತಕ್ಕೆ ಬಂದಿದ್ದರು. ಪಾಕಿಸ್ತಾನದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ವಿವರಿಸಿ ಭಾರತದಲ್ಲಿ ಒಂದು ತಿಂಗಳ ಮಟ್ಟಿಗೆ ಉಳಿಯಲು ಅನುಮತಿ ಪಡೆದುಕೊಂಡಿದ್ದರು. ಬಳಿಕ ಕಾಲ ಕಾಲಕ್ಕೆ ವೀಸಾ ಅವಧಿಯನ್ನು ವಿಸ್ತರಿಕೊಂಡು ಭಾರತದಲೇ ನೆಲೆಯೂರಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಆಗಿರುವುದು ಇದೀಗ ದಿವ್ಯಾರಾಮ್‌ ಅವರ ಸಂತಸಕ್ಕೆ ಕಾರಣವಾಗಿದೆ. ‘ಇಂದು ನಾನು ಸಂತಸಗೊಂಡಿದ್ದೇನೆ. ನನ್ನ ಕುಟುಂಬ ಮತ್ತು ಮಕ್ಕಳು ಪುನಃ ಸೌಲಭ್ಯಗಳನ್ನು ಪಡೆದುಕೊಳ್ಳಲಿದ್ದಾರೆ’ ಎಂದು ಹೇಳಿದ್ದಾರೆ.