Asianet Suvarna News Asianet Suvarna News

ಹಲವು ಮೈಲು ಉದ್ದದ, ಜಗತ್ತಿನ ಅತ್ಯಂತ ಬೃಹತ್‌ ಕಟ್ಟಡ ನಿರ್ಮಾಣಕ್ಕೆ ಸೌದಿ ಯೋಜನೆ!

* ಸೌದಿಯ ರಾಜಕುಮಾರ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಕನಸು ಇದು

* 40 ಲಕ್ಷ ಕೋಟಿ ರು. ಮೊತ್ತದ ಹಿಂದೆಂದೂ ಕೇಳರಿಯದ ಯೋಜನೆ

* ನಿಯೋಮ್‌ ಸಿಟಿ ಭಾಗವಾಗಿ ‘ದಿ ಲೈನ್‌’ ಅವಳಿ ಕಟ್ಟಡ ನಿರ್ಮಾಣ

* ಇದು ಬರೀ ಕಟ್ಟಡವಲ್ಲ, ಒಂದಿಡೀ ನಗರವೇ ಇದರೊಳಗೆ ಇರಲಿದೆ!

Saudi Arabia Plans To Build World Biggest Building That Would Stretch Into Miles pod
Author
Bangalore, First Published Jun 2, 2022, 8:35 AM IST | Last Updated Jun 2, 2022, 8:35 AM IST

ರಿಯಾಧ್‌(ಜೂ.02): ಜಗತ್ತಿನಲ್ಲೇ ಹಿಂದೆಂದೂ ಕೇಳರಿಯದ ರೀತಿಯ ಅತ್ಯಂತ ಬೃಹತ್‌ ಅವಳಿ ಕಟ್ಟಡವನ್ನು ನಿರ್ಮಿಸಲು ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಮುಂದಾಗಿದ್ದಾರೆ. ವಿಶೇಷವೆಂದರೆ, 500 ಮೀಟರ್‌ (1,640 ಅಡಿ) ಎತ್ತರವಿರುವ ಈ ಅವಳಿ ಕಟ್ಟಡಗಳು ಹಲವು ಮೈಲುಗಳಷ್ಟುಉದ್ದವಿರಲಿವೆ! ಕೆಂಪು ಸಮುದ್ರದಿಂದ ಆರಂಭಿಸಿ ಮರುಭೂಮಿಯವರೆಗೂ ಈ ಕಟ್ಟಡಗಳನ್ನು ನಿರ್ಮಿಸಲು ಚಿಂತನೆ ನಡೆದಿದೆ.

2017ರಲ್ಲಿ ಸೌದಿ ಸರ್ಕಾರ ನಿಯೋಮ್‌ ಎಂಬ ವಿನೂತನ ನಗರವೊಂದರ ನಿರ್ಮಾಣ ಯೋಜನೆಯನ್ನು ಪ್ರಕಟಿಸಿತ್ತು. ಅದರಲ್ಲಿ ಕೆಲ ಮಾರ್ಪಾಡು ಮಾಡಿ ಈಗ ‘ದಿ ಲೈನ್‌’ ಎಂಬ ಅವಳಿ ಕಟ್ಟಡ ನಿರ್ಮಿಸಲು ಬಹುತೇಕ ನಿರ್ಧರಿಸಲಾಗಿದೆ. ಇದು ಜಗತ್ತಿನ ಅತ್ಯಂತ ದೊಡ್ಡ ಕಟ್ಟಡ ಎಂಬ ಖ್ಯಾತಿ ಗಳಿಸಲಿದೆ. ಸುಮಾರು 500 ಬಿಲಿಯನ್‌ ಡಾಲರ್‌ (ಅಂದಾಜು 40 ಲಕ್ಷ ಕೋಟಿ ರು.) ವೆಚ್ಚದಲ್ಲಿ ಇದನ್ನು ನಿರ್ಮಿಸಲು ನಿರ್ಧರಿಸಲಾಗಿದೆ.

ಅವಳಿ ಕಟ್ಟಡದಲ್ಲಿ ಇಡೀ ನಗರ:

ಸದ್ಯ ಜಗತ್ತಿನ ಅತ್ಯಂತ ಎತ್ತರದ ಕಟ್ಟಡಗಳೆಲ್ಲ ಹೋಟೆಲ್‌, ಮಾಲ್‌ ಹಾಗೂ ವಸತಿ ಸಂಕೀರ್ಣಗಳಾಗಿವೆ. ಸೌದಿಯಲ್ಲಿ ನಿರ್ಮಾಣವಾಗಲಿರುವ ‘ದಿ ಲೈನ್‌’ ಕಟ್ಟಡದಲ್ಲಿ ಒಂದು ನಗರದಲ್ಲಿರುವ ಎಲ್ಲ ವ್ಯವಸ್ಥೆಗಳೂ ಇರಲಿವೆ. ಮನೆಗಳು, ಚಿಲ್ಲರೆ ಮಾರುಕಟ್ಟೆ, ಅಂಗಡಿ, ಕಚೇರಿ, ಮನರಂಜನೆ, ಹೋಟೆಲ್‌, ಮಾಲ್‌, ಶಾಲೆ ಹೀಗೆ ಪ್ರತಿಯೊಂದು ಅಗತ್ಯ ಸೌಕರ್ಯವೂ ಇದರಲ್ಲಿರಲಿದೆ. ಸದ್ಯ ಅರ್ಧ ಮೈಲು ಉದ್ದದ ಮಾದರಿಯೊಂದನ್ನು ವಿನ್ಯಾಸಗೊಳಿಸಿ ಕೊಡಲು ಅಮೆರಿಕ ಮೂಲದ ಆರ್ಕಿಟೆಕ್ಚರ್‌ ಕಂಪನಿಯೊಂದಕ್ಕೆ ಹೇಳಲಾಗಿದೆ. ನಂತರ ನಿರ್ಮಿಸುವ ಕಟ್ಟಡ ಹಲವು ಡಜನ್‌ ಮೈಲುಗಳಷ್ಟುಉದ್ದವಿರಲಿದೆ ಎಂದು ತಿಳಿದುಬಂದಿದೆ.

ಪಾಳುಬಿದ್ದ ಜಾಗದಲ್ಲಿ ನಿರ್ಮಾಣ:

ಕೆಂಪು ಸಮುದ್ರದಿಂದ ಮರುಭೂಮಿಯವರೆಗೆ ಸದ್ಯ ಜನವಸತಿ ಇಲ್ಲದ, ಬಳಕೆಗೂ ಯೋಗ್ಯವಲ್ಲದ ಖಾಲಿ ಜಾಗದಲ್ಲಿ ಈ ಯೋಜನೆ ಕೈಗೊಳ್ಳಲು ನಿರ್ಧರಿಸಲಾಗಿದೆ. ಕಾರ್ಮಿಕರಿಂದ ಹಿಡಿದು ಶತಕೋಟಿ ಡಾಲರ್‌ ಶ್ರೀಮಂತರವರೆಗೆ ಪ್ರತಿಯೊಬ್ಬರಿಗೂ ‘ದಿ ಲೈನ್‌’ನಲ್ಲಿ ಜಾಗವಿರಲಿದೆ. ಹೊಸ ಕಾಲದ ಜಗತ್ತಿನ ಅಗತ್ಯಗಳನ್ನು ಆಧರಿಸಿ ಇದನ್ನು ನಿರ್ಮಿಸಲಾಗುವುದು ಎಂದು ‘ನಿಯೋಮ್‌’ ಸಿಇಒ ನಧಮಿ ಅಲ್‌ ನಸರ್‌ ಹೇಳಿದ್ದಾರೆ.

Latest Videos
Follow Us:
Download App:
  • android
  • ios