-ಸೈಬರ್ ದಾಳಿ ಸಾಧ್ಯತೆ ಹಿನ್ನೆಲೆ ಉಕ್ರೇನಲ್ಲಿ ಹೈ ಅಲರ್ಟ್- ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಎಚ್ಚರಿಕೆ- ರಾಸಾಯನಿಕ ಮತ್ತು ಜೈವಿಕ ಶಸ್ತ್ರಾಸ್ತ್ರ ಬಳಸಿ ಆಕ್ರಮಣ
ಕೀವ್(ಮಾ.23): ಉಕ್ರೇನ್ ವಶಕ್ಕೆ ಪಡೆಯುವ ಪಟ್ಟು ಹಿಡಿದು ಭೀಕರ ಭೂ ಮತ್ತು ವಾಯು ದಾಳಿ ಮುಂದುವರೆಸಿರುವ ರಷ್ಯಾ ಮುಂದಿನ ದಿನಗಳಲ್ಲಿ ರಾಸಾಯನಿಕ ಮತ್ತು ಜೈವಿಕ ಶಸ್ತ್ರಾಸ್ತ್ರ ಬಳಸಿ ಆಕ್ರಮಣ ಮಾಡುವ ಸಾಧ್ಯತೆ ಇದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಎಚ್ಚರಿಸಿದ್ದಾರೆ. ಇತ್ತ ಉಕ್ರೇನ್ ಕಂಪ್ಯೂಟರ್ ಎಮರ್ಜೆಸ್ಸಿ ತಂಡ ಸಹ ರಷ್ಯಾ ಸೈಬರ್ ದಾಳಿ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಹೈಅಲರ್ಟ್ ಘೋಷಿಸಿದೆ.
ಮಂಗಳವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬೈಡೆನ್, ‘ಯುರೋಪಿನಲ್ಲಿ ಅಮೆರಿಕ ಜೈವಿಕ ಮತ್ತು ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದೆ ಎನ್ನುವುದು ಸಂಪೂರ್ಣ ಸುಳ್ಳು. ಅದೇ ರೀತಿ ಉಕ್ರೇನ್ ಜೈವಿಕ ಮತ್ತು ರಾಸಾಯನಿಕ ಅಸ್ತ್ರಗಳನ್ನು ಹೊಂದಿದೆ ಎಂಬ ರಷ್ಯಾದ ಸುಳ್ಳು ಆರೋಪ ಸ್ವತಃ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವುಗಳನ್ನು ಬಳಸಲು ಯೋಜನೆ ರೂಪಿಸುತ್ತಿದ್ದಾರೆ ಎಂಬುದರ ಸೂಚಕ’ ಎಂದು ಹೇಳಿದರು. ಆದರೆ ಈ ಬಗ್ಗೆ ವಾಷಿಂಗ್ಟನ್‌ನಲ್ಲಿರುವ ರಷ್ಯಾದ ರಾಯಭಾರ ಕಚೇರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ರಷ್ಯಾ ಉಕ್ರೇನ್ ಸಮರದಲ್ಲಿ ಭಾರತದ ನಿಲುವು ಅಸ್ಥಿರ: ಕ್ವಾಡ್, ನ್ಯಾಟೋ ಶ್ಲಾಘಿಸಿದ ಜೋ ಬೈಡೆನ್!
ಕಳೆದ ನಾಲ್ಕು ವಾರಗಳಿಂದ ರಷ್ಯಾ ಪಡೆಗಳು ದಾಳಿ ನಡೆಸುತ್ತಿದ್ದರೂ ಉಕ್ರೇನಿನ ಯಾವುದೇ ಪ್ರಮುಖ ನಗರವನ್ನು ವಶಕ್ಕೆ ಪಡೆಯಲು ವಿಫಲವಾಗಿವೆ. ಹೀಗಾಗಿ ಬೇಸತ್ತ ರಷ್ಯಾ ಭಾರೀ ಪ್ರಮಾಣದ ಕ್ಷಿಪಣಿಗಳು ಮತ್ತು ಫಿರಂಗಿಗಳನ್ನು ಬಳಸಿಕೊಂಡು ವಸತಿ ಪ್ರದೇಶದ ಮೇಲೆ ಆಕ್ರಮಣ ಮಾಡಿ ವಿನಾಶ ಮಾಡುವ ಸಂಚು ರೂಪಿಸಿದೆ. ಮಾರಿಯುಪೋಲ್‌ನ ದಕ್ಷಿಣದ ಬಂದರು ಮತ್ತು ಖಾರ್ಕೀವ್ ನಗರ ರಷ್ಯಾ ಆಕ್ರಮಣದ ಗುರಿಯಾಗಿದೆ ಎಂದು ವರದಿಯಾಗಿದೆ.
ಈ ನಡುವೆ ‘ರಷ್ಯಾದ ಪಡೆಗಳು ಹೆಚ್ಚು ನಿಖರವಾದ ಶಸ್ತ್ರಾಸ್ತ್ರಗಳು ಮತ್ತು ವಿವೇಚನಾರಹಿತ ಯುದ್ಧಸಾಮಗ್ರಿಗಳನ್ನು ಬಳಸಿಕೊಂಡು ಮೂಲಸೌಕರ್ಯಗಳ ಮೇಲೆ ದಾಳಿ ಮುಂದುವರಿಸುವ ನಿರೀಕ್ಷೆಯಿದೆ’ ಎಂದು ಉಕ್ರೇನ್ ಸೇನಾ ಪಡೆ ಮಂಗಳವಾರ ಎಂದು ಹೇಳಿದೆ.
ರಷ್ಯಾ ಆಕ್ರಮಣ ಖಂಡನೆಗೆ ಭಾರತ ಹೆದರಿದಂತಿದೆ: ಬೈಡೆನ್
ಉಕ್ರೇನ್ ಮೇಲಿನ ರಷ್ಯಾ ದಾಳಿಯನ್ನು ಅಮೆರಿಕದ ಬಹುತೇಕ ಮಿತ್ರ ರಾಷ್ಟ್ರಗಳು ಖಂಡಿಸಿವೆ. ಆದರೆ ಈ ವಿಷಯದಲ್ಲಿ ಭಾರತ ಅಸ್ಥಿರ ನಿಲುವು ಹೊಂದಿದಂತೆ ಕಾಣುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ಈ ಮೂಲಕ ರಷ್ಯಾ-ಉಕ್ರೇನ್ ಯುದ್ಧ ವಿಚಾರದಲ್ಲಿ ಸ್ಪಷ್ಟನಿಲುವಿಗೆ ಭಾರತವನ್ನು ಒತ್ತಾಯಿಸಿದ್ದಾರೆ.
Russia Ukraine war ಮರಿಯುಪೋಲ್ ಶರಣಾಗತಿಗೆ ಉಕ್ರೇನ್ ನಕಾರ
ಸಿಇಒಗಳ ದುಂಡುಮೇಜಿನ ಸಭೆಯಲ್ಲಿ ಮಾತನಾಡಿದ ಬೈಡೆನ್, ‘ಪುಟಿನ್ ಅವರ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ಅವರು ನ್ಯಾಟೋವನ್ನು ವಿಭಜಿಸಲು ಸಾಧ್ಯ ಎಂದು ಎಣಿಸಿದ್ದರು. ಆದರೆ ನ್ಯಾಟೋ ಹಿಂದೆಂದಿಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿದೆ ಮತ್ತು ಒಗ್ಗೂಡಿದೆ. ಅದಕ್ಕೆ ಕಾರಣ ವ್ಲಾದಿಮಿರ್ ಪುಟಿನ್’ ಎಂದು ತಿರುಗೇಟು ನೀಡಿದರು.
ಇದೇ ವೇಳೆ ಪುಟಿನ್ ಆಕ್ರಮಣಶೀಲತೆಯನ್ನು ಖಂಡಿಸುವ ನಿಟ್ಟಿನಲ್ಲಿ ಜಪಾನ್, ಆಸ್ಪ್ರೇಲಿಯಾ ಸೇರಿದಂತೆ ಕ್ವಾಡ್ ರಾಷ್ಟ್ರಗಳು ಸ್ಪಷ್ಟನಿಲುವು ಹೊಂದಿವೆ. ಆದರೆ ಭಾರತ ಮಾತ್ರ ರಷ್ಯಾ ಆಕ್ರಮಣವನ್ನು ಖಂಡಿಸಲು ಹೆದರಿದಂತೆ ಕಾಣುತ್ತಿದೆ, ಅಸ್ಥಿರ ನಿಲುವು ಹೊಂದಿದೆ ಎಂದು ಹೇಳಿದರು.
ರಷ್ಯಾ ಶಸ್ತ್ರಾಸ್ತ್ರಗಳನ್ನೇ ರಷ್ಯಾ ದಾಳಿ ತಡೆಗೆ ಕೊಟ್ಟಅಮೆರಿಕ
ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಗೆ ಪ್ರತಿಯಾಗಿ ಅಮೆರಿಕ ಉಕ್ರೇನ್‌ಗೆ ಮಿಲಿಟರಿ ಸಹಾಯ ಒದಗಿಸುತ್ತಿದೆ. ಈ ಬಾರಿ ಅಮೆರಿಕ ಒದಗಿಸಿರುವ ಮಿಲಿಟರಿ ಸಹಾಯ ರಷ್ಯಾದ ಶಸ್ತ್ರಾಸ್ತ್ರಗಳನ್ನು ಒಳಗೊಂಡಿದೆ. ರಷ್ಯಾದ ತಂತ್ರಜ್ಞಾನವನ್ನು ತಿಳಿದುಕೊಳ್ಳಲು ಗುಪ್ತವಾಗಿ ಇತರ ದೇಶಗಳಿಂದ ಅಮೆರಿಕ ಪಡೆದುಕೊಂಡಿದ್ದ ರಷ್ಯಾದ ಶಸ್ತ್ರಾಸ್ತ್ರಗಳನ್ನು ಉಕ್ರೇನ್‌ಗೆ ಪೂರೈಸುತ್ತಿದೆ ಎಂದು ವಾಲ್‌ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಈ ಎಲ್ಲಾ ಶಸ್ತ್ರಾಸ್ತ್ರಗಳನ್ನು ರಷ್ಯಾದ ಮಿಲಿಟರಿ ತಂತ್ರಜ್ಞಾನವನ್ನು ಅಧ್ಯಯನ ಮಾಡುವ ಉದ್ದೇಶದಿಂದ ರಷ್ಯಾ ಇತರ ದೇಶಗಳಿಂದ ಗುಪ್ತವಾಗಿ ಖರೀದಿಸಿತ್ತು.
