ಮಾಸ್ಕೋ(ನ.30): ದೇಶ, ದೇಶಭಕ್ತಿಗೆ ಭಾರತ ತವರೂರು. ಈ ಮಣ್ಣಿನಲ್ಲಿ ಹುಟ್ಟಿದ ಪ್ರತಿಯೊಬ್ಬ ಭಾರತೀಯ ತಾಯಿ ಭಾರತಾಂಬೆಯ ಋಣಿ. ತನ್ನನ್ನು ಹೆತ್ತು, ಸಾಕಿ ಸಲುಹಿದ ಈ ತಾಯಿಯ ರಕ್ಷಣೆಗಾಗಿ ಆತ ಪ್ರಾಣವನ್ನೇ ಕೊಡಬಲ್ಲ.

ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯ ನಂತರದ ಭಾರತದಲ್ಲಿ ಅನೇಕ ವೀರ ಪುತ್ರರು ಈ ಮಾತನ್ನು ನಿಜ ಮಾಡಿ ಸಾಧಿಸಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಹಲವು ಮಹನೀಯರು ತಮ್ಮ ಪ್ರಾಣವನ್ನು ತೆತ್ತರೆ, ಈ ಸ್ವಾತಂತ್ರ್ಯ ರಕ್ಷಣೆಗಾಗಿ ನಡೆದ ಹಲವು ಯುದ್ಧಗಳಲ್ಲಿ ನಮ್ಮ ವೀರ ಸೈನಿಕರು ತಮ್ಮ ಪ್ರಾಣದ ಹಂಗು ತೊರೆದು ಹೋರಾಡಿದ್ದಾರೆ.

ಭಾರತೀಯರ ಈ ದೇಶಭಕ್ತಿ ಇಡೀ ವಿಶ್ವಕ್ಕೆ ಮಾದರಿಯಾಗಿದ್ದು, ಅದರಲ್ಲೂ ರಷ್ಯಾದಲ್ಲಿ ಭಾರತೀಯ ತತ್ವಾದರ್ಶಗಳಿಗೆ ವಿಶೇಷ ಮಹತ್ವವಿದೆ. ಭಾರತೀಯ ಸಿನಿಮಾ ಹಾಡುಗಳು ರಷ್ಯಾದಲ್ಲಿ ಅತ್ಯಂತ ಜನಮನ್ನಣೆ ಗಳಿಸುವುದು ಸಾಮಾನ್ಯ.

ಬಾಲಿವುಡ್ ಶೋ ಮ್ಯಾನ್ ರಾಜಕಪೂರ್ ಸಿನಿಮಾಗಳು ಹಾಗೂ ಹಾಡುಗಳು ರಷ್ಯಾದಲ್ಲಿ ಇಂದಿಗೂ ಜನಪ್ರಿಯ. ಅದರಂತೆ ರಷ್ಯನ್ ಮಿಲಿಟಿ ಪಡೆಗಳಲ್ಲೂ ಹಿಂದಿ ಚಿತ್ರ ಗೀತೆಗಳು ಸ್ಥಾನ ಪಡೆದಿವೆ.

ರಷ್ಯನ್ ಮಿಲಿಟರಿಯಲ್ಲಿ ತರಬೇತಿ ಪಡೆಯುತ್ತಿರುವ ಯುವ ಕೆಡೆಟ್‌ಗಳು 1965ರ ಜನಪ್ರಿಯ ಹಿಂದಿ ಚಿತ್ರ 'ಶಹೀದ್'ನ 'ಏ ವತನ್ ಏ ವತನ್..'ಹಾಡನ್ನು ಹಾಡುವ ಮೂಲಕ ಗಮನ ಸೆಳೆದಿದ್ದಾರೆ.

ಭಗತ್ ಸಿಂಗ್ ಹಾಗೂ ಅವರ ಸಂಗಾತಿಗಳ ಬದುಕು ಮತ್ತು ಹೋರಾಟದ ಕುರಿತಾದ ಶಹೀದ್ ಚಿತ್ರದ ಏ ವತನ್ ಏ ವತನ್ ಹಾಡು ಇಂದಿಗೂ ಭಾರೀ ಜನಮನ್ನಣೆಯನ್ನು ಗಳಿಸಿರುವ ಹಾಡು. ಈ ಹಾಡನ್ನು ಭಾರತೀಯ ಚಿತ್ರರಂಗದ  ದಂತಕತೆ ಮೊಹ್ಮದ್ ರಫಿ ಹಾಡಿದ್ದರು.

ರಷ್ಯನ್ ಮಿಲಿಟರಿ ಕೆಡೆಟ್‌ಗಳು ಈ ಹಾಡನ್ನು ಹಾಡುವಾಗ ಭಾರತೀಯ ಧೂತಾವಾಸದ ರಕ್ಷಣಾ ಸಲಹೆಗಾರ ಬ್ರಿಗೆಡಿಯರ್ ರಾಜೇಶ್ ಪುಷ್ಕರ್ ಕೂಡ ಹಾಜರಿದ್ದರು.

ರಷ್ಯನ್ ಮಿಲಿಟರಿ ಕೆಡೆಟ್‌ಗಳು ಏ ವತನ್ ಹಾಡನ್ನು ಹಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ರಷ್ಯನ್ನರಿಗೆ ಭಾರತ ಮತ್ತು ಭಾರತೀಯ ಸಿನಿಮಾ ಹಾಡುಗಳ ಮೇಲಿರುವ ಪ್ರೀತಿಗೆ ಎಲ್ಲರೂ ಮಾರು ಹೋಗಿದ್ದಾರೆ.