*ಪರಿಣಾಮ ಏನೇ ಆದರೂ ಎದುರಿಸಲು ಸಿದ್ಧ: ರಷ್ಯಾ ಅಧ್ಯಕ್ಷ ಗುಡುಗು*ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರೋನ್‌ ಜೊತೆ 90 ನಿಮಿಷ ಸುದೀರ್ಘ ಮಾತುಕತೆ 

ಮಾಸ್ಕೋ (ಮಾ. 04): ಉಕ್ರೇನಿನಲ್ಲಿ ನಮ್ಮ ಗುರಿ ಈಡೇರುವವರೆಗೂ ಯುದ್ಧವನ್ನು ನಿಲ್ಲಿಸುವುದಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಗುರುವಾರ ದೃಢ ಸ್ವರಗಳಲ್ಲಿ ಹೇಳಿದ್ದಾರೆ. ಈ ಮೂಲಕ ಈ ಯುದ್ಧವನ್ನು ಸದ್ಯಕ್ಕೆ ನಿಲ್ಲಿಸುವುದಿಲ್ಲ ಎಂಬುದನ್ನು ಪರೋಕ್ಷವಾಗಿ ಸಾರಿದ್ದಾರೆ.ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರೋನ್‌ ಜೊತೆಗೆ ಫೋನಿನಲ್ಲಿ 90 ನಿಮಿಷಗಳ ಕಾಲ ಮಾತುಕತೆ ನಡೆಸಿದ ಪುಟಿನ್‌ ಈ ವಿಷಯನ್ನು ಸ್ಪಷ್ಟಪಡಿಸಿದ್ದಾರೆ.

‘ಉಕ್ರೇನ್‌ ಸೇನೆಯನ್ನು ಉಗ್ರಗಾಮಿಗಳ ಸಶಸ್ತ್ರ ಪಡೆ’ ಎಂದು ಪುಟಿನ್‌ ಕರೆದಿದ್ದಾರೆ. ‘ಯಾವುದೇ ರಾಜಿ ಮಾಡಿಕೊಳ್ಳದೇ ರಷ್ಯಾ ಉಕ್ರೇನಿನ ರಾಷ್ಟ್ರವಾದಿ ಸಶಸ್ತ್ರ ಉಗ್ರರ ಗುಂಪಿನ ವಿರುದ್ಧ ಹೋರಾಟವನ್ನು ಮುಂದುವರೆಸಲು ರಷ್ಯಾ ಉದ್ದೇಶಿಸಿದೆ. ಸಂಘರ್ಷವನ್ನು ನಿಧಾನಗೊಳಿಸಲು ಉಕ್ರೇನ್‌ ಮಾತುಕತೆಗೆ ಪ್ರಯತ್ನ ನಡೆಸಿದರೆ, ರಷ್ಯಾ ಇನ್ನಷ್ಟುಬೇಡಿಕೆಯನ್ನು ಉಕ್ರೇನ್‌ ಮುಂದಿಡಲಿದೆ. ಇದರ ಪರಿಣಾಮ ಏನೇ ಆದರೂ ಎದುರಿಸಲು ಸಿದ್ಧ’ ಎಂದು ಹೇಳಿದ್ದಾರೆ. ಅಲ್ಲದೆ, ಇತ್ತೀಚೆಗೆ ಉಕ್ರೇನ್‌ ಪರ ವಹಿಸಿ ಮ್ಯಾಕ್ರಾನ್‌ ಆಡಿದ ಮಾತುಗಳ ಬಗ್ಗೆ ಕೂಡ ಪುಟಿನ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿRussia Ukraine War: ಉಕ್ರೇನಿಯನ್ನರಿಗೆ 18 ತಿಂಗಳ ಅವಧಿಗೆ ಅಮೆರಿಕಾದಲ್ಲಿ ಕಾನೂನುಬದ್ಧವಾಗಿ ಉಳಿಯಲು ಅವಕಾಶ

ಉಕ್ರೇನ್‌ಗೆ ಇನ್ನಷ್ಟುಭೀಕರ ಸ್ಥಿತಿ: ಮ್ಯಾಕ್ರೋನ್‌ ಆಪ್ತ:  ಈಗಾಗಲೇ ರಷ್ಯಾ ಯುದ್ಧದಿಂದ ಸಾಕಷ್ಟುನಲುಗಿರುವ ಉಕ್ರೇನ್‌, ಮತ್ತಷ್ಟುಭೀಕರ ಸ್ಥಿತಿ ಎದುರಿಸಲಿದೆ ಎಂದು ಫ್ರೆಂಚ್‌ ಅಧ್ಯಕ್ಷ ಇಮ್ಯಾನ್ಯುಯೆಲ್‌ ಮ್ಯಾಕ್ರೋನ್‌ ಅವರು ಅಂದಾಜಿಸಿದ್ದಾರೆ ಎಂದು ಮ್ಯಾಕ್ರೋನ್‌ ಅವರ ಆಪ್ತರೊಬ್ಬರು ಹೇಳಿದ್ದಾರೆ.

ಮ್ಯಾಕ್ರೋನ್‌ ಹಾಗೂ ರಷ್ಯಾ ಅಧ್ಯಕ್ಷ ಪುಟಿನ್‌ ನಡುವಿನ ಮಾತುಕತೆ ಬಳಿಕ ಮಾತನಾಡಿದ ಈ ಆಪ್ತರು, ‘ರಷ್ಯಾ ಇಡೀ ಉಕ್ರೇನನ್ನೇ ವಶಪಡಿಸಿಕೊಳ್ಳುವ ಉದ್ದೇಶ ಹೊಂದಿದೆ. ರಷ್ಯಾ ಮಾತುಕತೆಯ ಬದಲು ಸೇನಾ ಕಾರ್ಯಾಚರಣೆಯನ್ನೇ ಮುಂದುವರೆಸಲು ನಿರ್ಧರಿಸಿದೆ. ಉಕ್ರೇನ್‌ ಶೀಘ್ರ ಇನ್ನಷ್ಟುಭೀಕರ ಪರಿಣಾಮಗಳನ್ನು ಎದುರಿಸಲಿದೆ ಎಂದು ಮಾಕ್ರೋನ್‌ ಅಂದಾಜಿಸಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

‘ಪುಟಿನ್‌ ನಮಗೆ ಆಶಾದಾಯಕ ಭರವಸೆಯನ್ನೇನೂ ನೀಡಲಿಲ್ಲ. ಅವರು ಯುದ್ಧ ಮುಂದುವರಿಸುವ ದೃಢನಿಶ್ಚಯ ಪ್ರಕಟಿಸಿದರು. ಇಡೀ ಉಕ್ರೇನನ್ನೇ ವಶಪಡಿಸಿಕೊಳ್ಳುವ ಉದ್ದೇಶ ಪ್ರಕಟಿಸಿದರು ಹಾಗೂ ಉಕ್ರೇನನ್ನು ‘ನಾಜಿ ವಾದ’ದಿಂದ ಮುಕ್ತ ಮಾಡುವರೆಗೂ ವಿರಮಿಸುವುದಿಲ್ಲ ಎಂದು ಹೇಳಿದರು. ಪುಟಿನ್‌ ಮಾತು ಆಘಾತಕಾರಿಯಾಗಿದ್ದವು’ ಎಂದಿದ್ದರೆ.

ಇದನ್ನೂ ಓದಿ: Russia- Ukraine Crisis: ಏನಿವು ವಾರ್ಸಾ ಮತ್ತು ನ್ಯಾಟೋ? ರಷ್ಯಾಗೇಕೆ ಉಕ್ರೇನ್ ಮೇಲೆ ಸಿಟ್ಟು.?

ಮಾಕ್ರೋನ್‌ ನಾಗರಿಕರ ಮೇಲೆ ದಾಳಿ ಮಾಡದಂತೆ ಪುಟಿನ್‌ಗೆ ಮನವಿ ಮಾಡಿದರು. ಇದಕ್ಕೆ ಪುಟಿನ್‌ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿದರೂ ಯಾವುದೇ ಬದ್ಧತೆ ತೋರಲಿಲ್ಲ. ಪುಟಿನ್‌ ಯುದ್ಧ ಮುಂದುವರೆಸುವ ಜಿದ್ದಿಗೆ ಬಿದ್ದಿದ್ದಾರೆ. ತಾಳ್ಮೆಯನ್ನೂ ಕಳೆದುಕೊಂಡು ಕೆಲವೊಮ್ಮೆ ಮಾತನಾಡಿದರು. ಫ್ರಾನ್ಸ್‌ ಶೀಘ್ರವೇ ರಷ್ಯಾ ವಿರುದ್ಧ ಇನ್ನಷ್ಟುಕಠಿಣ ನಿರ್ಬಂಧ ಹೇರಲು ಒತ್ತಡ ಹೇರಲಿದೆ ಎಂದು ಆಪ್ತರು ತಿಳಿಸಿದ್ದಾರೆ.

ರಷ್ಯಾ ಗೆಲ್ಲಲು ಬಿಡಲ್ಲ, ಉಕ್ರೇನ್‌ ಮರುನಿರ್ಮಾಣಕ್ಕೆ ಪಣ: ಜೆಲೆನ್‌ಸ್ಕಿ : ವಿಶ್ವಸಂಸ್ಥೆಯ ಮನವಿಯನ್ನೂ ನಿರ್ಲಕ್ಷಿಸಿ ರಷ್ಯಾ ದಿನೇ ದಿನೇ ಉಕ್ರೇನಿನ ಮೇಲೆ ಆಕ್ರಮಣವನ್ನು ತೀವ್ರಗೊಳಿಸುತ್ತಿರುವುದನ್ನು ಖಂಡಿರುವ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಜೆಲೆನ್‌ಸ್ಕಿ, ‘ನಮಗೆ ಸ್ವಾತಂತ್ರ್ಯದ ಹೊರತಾಗಿ ಕಳೆದುಕೊಳ್ಳುವುದಕ್ಕೆ ಏನೂ ಇಲ್ಲ. ರಷ್ಯಾ ಗೆಲ್ಲಲು ಬಿಡುವುದಿಲ್ಲ. ರಷ್ಯಾ ದಾಳಿಯಲ್ಲಿ ಹಾನಿಗೀಡಾದ ಪ್ರತಿ ಮನೆ, ಬೀದಿ, ಪ್ರತಿ ನಗರವನ್ನೂ ನಾವು ಪುನಾಸ್ಥಾಪನೆ ಮಾಡಲಿದ್ದೇವೆ’ ಎಂದು ಹೇಳಿದ್ದಾರೆ.

‘ಉಕ್ರೇನೀಯರು, ಅವರ ದೇಶ, ಅದರ ಇತಿಹಾಸ ಅಳಿಸಿಹಾಕಲು ರಷ್ಯಾ ಯತ್ನಿಸುತ್ತಿದೆ. ರಷ್ಯಾ ಪಡೆಗಳು ಬೃಹತ್‌ ಕ್ಷಿಪಣಿ ಹಾಗೂ ರಾಕೆಟ್‌ ದಾಳಿಯ ಮೂಲಕ ಉಕ್ರೇನಿನ ಪ್ರಮುಖ ನಗರಗಳನ್ನು ಸುತ್ತುವರಿದಿವೆ. ಈ ದಾಳಿಗೆ ರಷ್ಯಾ ಸೂಕ್ತ ಬೆಲೆ ತೆರಬೇಕಾಗಿ ಬರಲಿದೆ’ ಎಂದು ಜೆಲೆನ್‌ಸ್ಕಿ ಎಚ್ಚರಿಕೆ ನೀಡಿದ್ದಾರೆ.