ಪರಿಣಾಮ ಎದುರಿಸುತ್ತೀರಿ: ನ್ಯಾಟೋಗೆ ರಷ್ಯಾ ಗಂಭೀರ ಎಚ್ಚರಿಕೆ
* ಫಿನ್ಲೆಂಡ್, ಸ್ವೀಡನ್ ನ್ಯಾಟೋ ಸೇರ್ಪಡೆ ಯತ್ನಕ್ಕೆ ಮತ್ತೆ ವಿರೋಧ
* ಪರಿಣಾಮ ಎದುರಿಸುತ್ತೀರಿ: ನ್ಯಾಟೋಗೆ ರಷ್ಯಾ ಗಂಭೀರ ಎಚ್ಚರಿಕೆ
* ಯುದ್ಧಹಡಗು ನಾಶಕ್ಕೂ ಕಿಡಿ: 3ನೇ ವಿಶ್ವಸಮರದ ಬಗ್ಗೆ ರಷ್ಯಾ ಸರ್ಕಾರಿ ಟೀವಿ ಎಚ್ಚರಿಕೆ
ಮಾಸ್ಕೋ/ಕೀವ್(ಏ.16): ಪಾಶ್ಚಾತ್ಯ ದೇಶಗಳಾದ ಫಿನ್ಲೆಂಡ್ ಹಾಗೂ ಸ್ವೀಡನ್‌ಗಳು ನ್ಯಾಟೋ ದೇಶಗಳ ಕೂಟವನ್ನು ಸೇರಲು ನಡೆಸಿರುವ ಯತ್ನಗಳನ್ನು ಶುಕ್ರವಾರವೂ ರಷ್ಯಾ ವಿರೋಧಿಸಿದೆ. ಇದರೊಂದಿಗೆ ಈವರೆಗೆ ಉಕ್ರೇನ್ ದೇಶವು ನ್ಯಾಟೋ ಸೇರಲು ನಡೆಸುತ್ತಿದ್ದ ಯತ್ನವನ್ನು ವಿರೋಧಿಸುತ್ತಿದ್ದ ರಷ್ಯಾ ಈಗ ಸ್ವೀಡನ್ ಹಾಗೂ ನೆರೆ ದೇಶವಾದ ಫಿನ್ಲೆಂಡ್‌ಗಳ ನ್ಯಾಟೋ ಸೇರ್ಪಡೆಯನ್ನೂ ವಿರೋಧಿಸುತ್ತಿದ್ದು, ಸಮರಕ್ಕೆ ಹೊಸ ತಿರುವು ನೀಡುವ ಲಕ್ಷಣಗಳಿವೆ.
ಈ ನಡುವೆ, ತನ್ನ ಯುದ್ಧನೌಕೆ ಉಕ್ರೇನಿ ಪಡೆಗಳ ಹೊಡೆತಕ್ಕೆ ಸಿಲುಕಿ ನಾಶವಾಗಿ ಕಪ್ಪು ಸಮುದ್ರದಲ್ಲಿ ಮುಳುಗಡೆ ಆಗಿರುವ ಕಾರಣ ರಷ್ಯಾ ಕ್ರುದ್ಧಗೊಂಡಿದೆ. ಹೀಗಾಗಿ ಉಕ್ರೇನ್‌ನ ಈ ನಡೆಗೆ ನ್ಯಾಟೋ ದೇಶಗಳ ಬೆಂಬಲ ಇದೆ ಎಂಬುದು ರಷ್ಯಾ ಗುಮಾನಿ. ಹೀಗಾಗಿ, ‘ಇದು 3ನೇ ವಿಶ್ವಯುದ್ಧಕ್ಕೆ ಕಾರಣ ಆಗಬಹುದು’ ಎಂದು ರಷ್ಯಾದ ಸರ್ಕಾರಿ ಟೀವಿ ಚಾನೆಲ್ ಎಚ್ಚರಿಕೆ ನೀಡಿದೆ.
‘ಫಿನ್ಲೆಂಡ್ ಹಾಗೂ ಸ್ವೀಡನ್ ನಿರ್ಧಾರಗಳು ಆ ದೇಶಗಳಿಗೆ ಸೇರಿದ್ದು. ಆದರೆ ನ್ಯಾಟೋ ಸೇರುವ ಅವುಗಳ ಯತ್ನವು ಯುರೋಪ್‌ನ ಭದ್ರತಾ ಸ್ವರೂಪದ ಮೇಲೆ ಬದಲಾವಣೆ ಬೀರುವ ಹಾಗೂ ದ್ವಿಪಕ್ಷೀಯ ಸಂಬಂಧದ ಮೇಲೆ ಪರಿಣಾಮ ಬೀರುವುದಕ್ಕೆ ನಾಂದಿ ಆಗಬಹುದು. ಪರಿಣಾಮಗಳು ತೀವ್ರವಾಗಬಹುದು ಎಂಬುದನ್ನು ಆ ದೇಶಗಳು ಅರಿಯಬೇಕು’ ಎಂದು ರಷ್ಯಾ ವಿದೇಶಾಂಗ ವಕ್ತಾರೆ ಮಾರಿಯಾ ಜಕಾರೋವಾ ಶುಕ್ರವಾರ ಹೇಳಿದ್ದಾರೆ. ಈ ಮೂಲಕ ಎರಡೂ ದೇಶಗಳಿಗೆ ತೀಕ್ಷ$್ಣ ಎಚ್ಚರಿಕೆ ನೀಡಿದ್ದಾರೆ.
ಫಿನ್ಲೆಂಡ್ ರಷ್ಯಾಗೆ ಹೊಂದಿಕೊಂಡ ದೇಶ. ಇದರ ಜತೆಗೆ ಸ್ವೀಡನ್ ಕೂಡ ಅಮೆರಿಕ ನೇತೃತ್ವದ ನ್ಯಾಟೋಗೆ ಸೇರಿದರೆ ತನ್ನ ಅಸ್ತಿತ್ವಕ್ಕೆ ಭಂಗ ಬರಬಹುದು ಎಂಬದು ರಷ್ಯಾ ಆತಂಕ. ಹೀಗಾಗಿಯೇ ಅದು ನ್ಯಾಟೋ ಸೇರುವ ಯತ್ನ ವಿರೋಧಿಸುತ್ತಿದೆ.
ಹಡಗು ಧ್ವಂಸಕ್ಕೆ ಆಕ್ರೋಶ: ಕೀವ್ ಮೇಲೆ ರಷ್ಯಾ ದಾಳಿ ತೀವ್ರ
ಕಪ್ಪು ಸಮುದ್ರದಲ್ಲಿ ತನ್ನ ಹಡಗನ್ನು ರಷ್ಯಾ ಧ್ವಂಸ ಮಾಡಿದ್ದರಿಂದ ಹಾಗೂ ತನ್ನ ಗಡಿಯಲ್ಲಿ ಉಕ್ರೇನಿ ಸೇನೆ ದಾಳಿ ನಡೆಸುತ್ತಿರುವುದರಿಂದ ರಷ್ಯಾಆಕ್ರೋಶಗೊಂಡಿದೆ. ಹೀಗಾಗಿ ಗುರುವಾರ ರಾತ್ರಿಯಿಂದಲೇ ರಾಜಧಾನಿ ಕೀವ್, ಖಾರ್ಕೀವ್, ಮರಿಯುಪೋಲ್ ಮೇಲೆ ಮತ್ತೆ ದಾಳಿ ಆರಂಭಿಸಿದ್ದು, ಮತ್ತಷ್ಟುತೀವ್ರಗೊಳಿಸುವ ಎಚ್ಚರಿಕೆ ನೀಡಿದೆ. ಗುರುವಾರ 2 ಪ್ರತ್ಯೇಕ ದಾಳಿಯಲ್ಲಿ 14 ಮಂದಿ ಅಸುನೀಗಿದ್ದಾರೆ.
ಹೀಗಾಗಿ 51 ದಿನ ಪೂರೈಸಿ, ಸಾವಿರಾರು ಜನರನ್ನು ಬಲಿಪಡೆದಿರುವ ರಷ್ಯಾ- ಉಕ್ರೇನ್ ಯುದ್ಧ ಮತ್ತಷ್ಟುಭೀಕರ ಸ್ವರೂಪ ಪಡೆಯುವ ಆತಂಕ ಎದುರಾಗಿದೆ.
ತನ್ನ ಗಡಿ ಭಾಗಗಳಾದ ಬ್ರಿಯಾನ್ಸ್$್ಕ ಮತ್ತು ಪ್ರದೇಶಗಳ ಮೇಲೆ ಉಕ್ರೇನ್ ಅಪ್ರಚೋದಿತ ದಾಳಿ ನಡೆಸಿದೆ ಎಂದು ಆರೋಪಿಸಿರುವ ರಷ್ಯಾ ಸೇನೆ, ಇದಕ್ಕೆ ಪ್ರತಿಯಾಗಿ ಗುರುವಾರ ಕೀವ್ ಮೇಲೆ ಭಾರೀ ನಡೆಸಿದ ದಾಳಿಯ ಪರಿಣಾಮ ನಗರದಲ್ಲಿ ದೊಡ್ಡ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಮರಿಯುಪೋಲ್ ನಗರದ ಇಲಿಚ್ ಉಕ್ಕು ಘಟಕವನ್ನು ಪೂರ್ಣವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿರುವುದಾಗಿ ರಷ್ಯಾ ಸೇನೆ ಪ್ರಕಟಿಸಿದೆ. ಅಲ್ಲದೆ ಏ.14ರಂದು ಬ್ರಿಯಾನ್ಸ್$್ಕ ಪ್ರಾಂತ್ಯದ ಕ್ಲಿಮೋವೋ ನಗರದ ಮೇಳೆ ದಾಳಿ ನಡೆಸಿದ್ದ ಉಕ್ರೇನ್‌ನ ಎಂಐ-8 ಹೆಲಿಕಾಪ್ಟರ್ ಮತ್ತು ಒಂದು ಸುಖೋಯ್-27 ವಿಮಾನವನ್ನು ಹೊಡೆದುರುಳಿಸಿರುವುದಾಗಿ ರಷ್ಯಾ ಸೇನೆ ಹೇಳಿಕೊಂಡಿದೆ.
ಖಾರ್ಕಿವ್‌ನಲ್ಲಿ ಮತ್ತೆ ದೊಡ್ಡ ಮಟ್ಟದಲ್ಲಿ ಸ್ಫೋಟ ಸಂಭವಿಸಿದ್ದು, 7 ಮಂದಿ ಮೃತಪಟ್ಟಿದ್ದಾರೆ ಹಾಗೂ 50 ಮಂದಿ ಗಾಯಗೊಂಡಿದ್ದಾರೆ. ಖಾರ್ಕೀವ್ ಬಳಿಯ ಬೊರೊವಯಾ ಗ್ರಾಮದಲ್ಲಿ ಸಾರ್ವಜನಿಕ ಸಾರಿಗೆಯ ಮೇಲೆ ಗುಂಡಿನ ದಾಳಿ ಮಾಡಿವೆ. ಈ ದುರ್ಘಟನೆಯಲ್ಲಿ 7 ನಾಗರಿಕರು ಮೃತಪಟ್ಟಿದ್ದು 27 ಜನರು ಗಾಯಗೊಂಡಿದ್ದಾರೆ.