* ಸುತ್ತಲಿನ ಆಮ್ಲಜನಕ ಸೆಳೆದು ಸ್ಫೋಟಿಸುವ ಬಾಂಬ್‌* ರಷ್ಯಾದಿಂದ ‘ವ್ಯಾಕ್ಯೂಂ ಬಾಂಬ್‌’ ದಾಳಿ!

ವಾಷಿಂಗ್ಟನ್‌(ಮಾ.02): ಅನಿರೀಕ್ಷಿತ ಪ್ರತಿರೋಧ ತೋರುತ್ತಿರುವ ಹಾಗೂ ಪ್ರತಿ ದಾಳಿ ತೀವ್ರಗೊಳಿಸಲು ವಿದೇಶಗಳಿಂದ ಶಸ್ತ್ರಾಸ್ತ್ರ ನೆರವು ಪಡೆಯುತ್ತಿರುವ ಉಕ್ರೇನನ್ನು ಹೊಸಕಿ ಹಾಕಲು ರಷ್ಯಾ ಭಯಾನಕ ‘ವ್ಯಾಕ್ಯೂಂ ಬಾಂಬ್‌’ ಹಾಗೂ ‘ಕ್ಲಸ್ಟರ್‌ ಬಾಂಬ್‌’ಗಳ ಮೊರೆ ಹೋಗಿದೆ ಎಂದು ಉಕ್ರೇನ್‌ ಹಾಗೂ ಮಾನವ ಹಕ್ಕು ಸಂಘಟನೆಗಳು ಗಂಭೀರ ಆರೋಪ ಮಾಡಿವೆ.

ದಾಳಿ ನಡೆದ ಸ್ಥಳದಲ್ಲಿನ ಸಂಪೂರ್ಣ ಆಮ್ಲಜನಕವನ್ನು ಹೀರಿಕೊಂಡು, ಭಯಾನಕ ರೀತಿಯಲ್ಲಿ ಸ್ಫೋಟಿಸಿ, ಮಾನವರ ದೇಹವನ್ನು ಸುಟ್ಟು ಆವಿಯಾಗಿಸುವ ಅಪಾಯಕಾರಿ ಸ್ಫೋಟಕವನ್ನು ‘ವ್ಯಾಕ್ಯೂಂ (ನಿರ್ವಾತ) ಬಾಂಬ್‌’ ಎಂದು ಕರೆಯುತ್ತಾರೆ. ‘ಈ ಸ್ಫೋಟಕವನ್ನು ಉಕ್ರೇನ್‌ನಲ್ಲಿ ವ್ಯಾಪಕವಾಗಿ ರಷ್ಯಾ ಬಳಸಿದಂತೆ ಕಂಡುಬರುತ್ತಿದೆ. ಯುದ್ಧದ ವೇಳೆ ನಾಗರಿಕರು ಆಶ್ರಯ ಪಡೆದಿದ್ದ ಈಶಾನ್ಯ ಉಕ್ರೇನ್‌ನ ಶಾಲೆಯೊಂದರ ಮೇಲೂ ಬಾಂಬ್‌ ದಾಳಿ ನಡೆದಿದೆ’ ಎಂದು ಅಮ್ನೆಸ್ಟಿಇಂಟರ್‌ನ್ಯಾಷನಲ್‌ ಹಾಗೂ ಹ್ಯೂಮನ್‌ ರೈಟ್ಸ್‌ ವಾಚ್‌ ಸಂಸ್ಥೆಗಳು ದೂರಿವೆ.

ಈ ನಡುವೆ, ವ್ಯಾಕ್ಯೂಂ ಬಾಂಬ್‌ ಎಂದೇ ಕುಖ್ಯಾತಿಗೀಡಾಗಿರುವ ‘ಥರ್ಮೋಬೇರಿಕ್‌’ ಬಾಂಬ್‌ ಅನ್ನು ಯುದ್ಧದ ಸಂದರ್ಭದಲ್ಲಿ ರಷ್ಯಾ ಬಳಸಿದೆ ಎಂದು ಅಮೆರಿಕದಲ್ಲಿನ ಉಕ್ರೇನ್‌ ರಾಯಭಾರಿ ಒಕ್ಸಾನಾ ಮಾರ್ಕರೋವಾ ಕೂಡ ಹೇಳಿದ್ದಾರೆ. ರಷ್ಯಾದ ಥರ್ಮೋಬೇರಿಕ್‌ ರಾಕೆಟ್‌ ಲಾಂಚರ್‌ಗಳನ್ನು ಉಕ್ರೇನ್‌ ಗಡಿ ಭಾಗದಲ್ಲಿ ನೋಡಿರುವುದಾಗಿ ಸಿಎನ್‌ಎನ್‌ ಮಾಧ್ಯಮ ಸಂಸ್ಥೆ ಕೂಡ ವರದಿ ಮಾಡಿದೆ.

ಉಕ್ರೇನ್‌ ಮೇಲೆ ರಷ್ಯಾ ಇಂತಹ ಅಪಾಯಕಾರಿ ಬಾಂಬ್‌ಗಳನ್ನು ಬಳಸುತ್ತಿದೆ ಎಂಬ ಬಗ್ಗೆ ಅಧಿಕೃತವಾಗಿ ತಮಗೆ ಗೊತ್ತಿಲ್ಲ. ಒಂದು ವೇಳೆ ಇದು ನಿಜವೇ ಆಗಿದ್ದರೆ, ಅದು ಯುದ್ಧಾಪರಾಧ ಎನಿಸಿಕೊಳ್ಳುತ್ತದೆ ಎಂದು ಅಮೆರಿಕದ ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೆನ್‌ ಸಾಕಿ ತಿಳಿಸಿದ್ದಾರೆ. ವಾಷಿಂಗ್ಟನ್‌ನಲ್ಲಿರುವ ರಷ್ಯಾ ರಾಯಭಾರ ಕಚೇರಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ನಡುವೆ, ಒಂದೇ ಸ್ಥಳದಲ್ಲಿ ಹಲವು ಬಾರಿ ಸ್ಫೋಟಿಸುವ ಕ್ಲಸ್ಟರ್‌ ಬಾಂಬ್‌ (ಬಾಂಬ್‌ ಗುಚ್ಛ)ಗಳನ್ನೂ ರಷ್ಯಾ ಬಳಸುತ್ತಿದೆ ಎಂದು ವರದಿಗಳು ತಿಳಿಸಿವೆ.

ಅಂತಾರಾಷ್ಟ್ರೀಯ ಮಾನವೀಯ ಕಾನೂನುಗಳ ಪ್ರಕಾರ, ಕ್ಲಸ್ಟರ್‌ ಬಾಂಬ್‌ಗಳನ್ನು ನಿರ್ದಯವಾಗಿ ಬಳಸುವುದಕ್ಕೆ ನಿರ್ಬಂಧವಿದೆ. ಯುದ್ಧದ ಸಂದರ್ಭದಲ್ಲಿ ನಾಗರಿಕರನ್ನು ಕೊಲ್ಲುವುದು ಅಥವಾ ಗಾಯಗೊಳಿಸುವುದು ಕೂಡ ಯುದ್ಧಾಪರಾಧವಾಗಲಿದೆ ಎಂದು ಅಮ್ನೆಸ್ಟಿಸಂಸ್ಥೆ ಹೇಳಿದೆ.

ಏನಿದು ವ್ಯಾಕ್ಯೂಂ ಬಾಂಬ್‌?

ಸಾಮಾನ್ಯ ಬಾಂಬ್‌ ಸ್ಫೋಟಗೊಂಡು ನಿರ್ದಿಷ್ಟಸ್ಥಳವನ್ನು ಧ್ವಂಸಗೊಳಿಸುತ್ತದೆ. ಆದರೆ ಥರ್ಮೋಬೇರಿಕ್‌ ವ್ಯಾಕ್ಯೂಂ ಬಾಂಬ್‌ ಸ್ಫೋಟದ ಸ್ಥಳದ ವಾತಾವರಣದಲ್ಲಿನ ಆಮ್ಲಜನಕವನ್ನು ಸಂಪೂರ್ಣ ಹೀರಿಕೊಂಡು, ಅತ್ಯಧಿಕ ಉಷ್ಣಾಂಶ ಹೊಂದಿರುವ ಸ್ಫೋಟ ಉಂಟು ಮಾಡುತ್ತವೆ. ಇದು ಅಣುಬಾಂಬ್‌ ನಂತರ ಅತ್ಯಂತ ಶಕ್ತಿಶಾಲಿ ಬಾಂಬ್‌ ಎನ್ನಲಾಗಿದೆ. ಇದಕ್ಕೆ ಮನುಷ್ಯ ಸಿಲುಕಿದರೆ ದೇಹ ಸುಟ್ಟು ಆವಿಯಾಗುತ್ತದೆ.