* 6 ವಾರ ಕಳೆದರೂ ಮುಂದುವರೆದ ರಷ್ಯಾ ಯುದ್ಧ* ಫೆ.24ರಂದು ಆರಂಭ ಆಗಿದ್ದ ಆಕ್ರಮಣ ಇನ್ನೂ ಮುಗಿದಿಲ್ಲ* ಗುರಿ ಮುಟ್ಟುವವರೆಗೆ ಯುದ್ಧ ನಿಲ್ಲಿಸಲ್ಲ: ಪುಟಿನ್‌

ಕೀವ್‌(ಏ.14); ವಿಶೇಷ ಮಿಲಿಟರಿ ಕಾರ್ಯಾಚರಣೆ ಹೆಸರಿನಲ್ಲಿ ರಷ್ಯಾ ಉಕ್ರೇನ್‌ ಆರಂಭಿಸಿದ ಆಕ್ರಮಣ ಗುರುವಾರ 50 ದಿನ ಪೂರೈಸಲಿದೆ.

ಈಗಲೂ ಕೀವ್‌, ಖಾರ್ಕೀವ್‌, ಮರಿಯುಪೋಲ್‌ ನಗರಗಳ ಮೇಲೆ ರಷ್ಯಾದ ದಾಳಿ ಮುಂದುವರೆದಿದೆ. ಖಾರ್ಕೀವ್‌ನಲ್ಲಿ ನಡೆದ ಹೊಸ ದಾಳಿಯಲ್ಲಿ ಬುಧವಾರ 7 ಮಂದಿ ಹತರಾಗಿದ್ದಾರೆ. ಈ ನಡುವೆ ಮರಿಯುಪೋಲ್‌ನಲ್ಲಿ ಇನ್ನೂ 1 ಲಕ್ಷ ಜನರು ರಷ್ಯಾ ದಾಳಿಯಿಂದಾಗಿ ಸಿಕ್ಕಿಹಾಕಿಕೊಂಡಿದ್ದು, ಈ ನಗರವನ್ನು ರಷ್ಯಾ ತನ್ನ ವಶಕ್ಕೆ ಪಡೆದುಕೊಂಡಿದೆ.

ಉಕ್ರೇನನ್ನು ಸುಲಭವಾಗಿ ವಶಕ್ಕೆ ಪಡೆದುಕೊಳ್ಳಬಹುದು ಎಂದು ಆಕ್ರಮಣ ಆರಂಭಿಸಿದ ರಷ್ಯಾಗೆ ಉಕ್ರೇನ್‌ ಪ್ರಬಲ ಪೈಪೋಟಿ ನೀಡಿದೆ. ಆದರೆ ರಷ್ಯಾದ ದಾಳಿಯಿಂದಾಗಿ ಸಾವಿರಾರು ಸೈನಿಕರು, ನಾಗರಿಕರು ಸಾವಿಗೀಡಾಗಿದ್ದಾರೆ. ಅಮಾಯಕರ ನರಮೇಧವೂ ನಡೆದಿದೆ. ದಾಳಿಗೆ ಅಂಜಿ 8.7 ಲಕ್ಷಕ್ಕೂ ಹೆಚ್ಚು ಜನರು ಸ್ಥಳಾಂತರವಾಗಿದ್ದಾರೆ.

ರಷ್ಯಾ ತನ್ನ ಗುರಿ ಮುಟ್ಟುವರರೆಗೂ ಈ ಕಾರ್ಯಾಚರಣೆ ನಿಲ್ಲಿಸುವುದಿಲ್ಲ ಎಂದು ಪುಟಿನ್‌ ಹೇಳಿದ್ದಾರೆ. ಹಾಗಾಗಿ ಯುದ್ಧ ಸಧ್ಯದಲ್ಲೇ ಕೊನೆಗೊಳ್ಳುವುದಿಲ್ಲ ಎಂಬುದು ಸ್ಪಷ್ಟವಾದಂತಾಗಿದೆ. ಈವರೆಗಿನ ಯುದ್ಧದಲ್ಲಿ ಉಕ್ರೇನ್‌ ಸರ್ಕಾರದ ಪ್ರಕಾರ ಸುಮಾರು 23 ಸಾವಿರ ನಾಗರಿಕರು, ಉಕ್ರೇನಿನ 1,300 ಸೈನಿಕರು ಹಾಗೂ ರಷ್ಯಾದ 19,800 ಸೈನಿಕರು ಮೃತ ಪಟ್ಟಿದ್ದಾರೆ.