* ರಷ್ಯಾ-ಉಕ್ರೇನ್ ನಡುವಣ ಬಿಕ್ಕಟ್ಟು* ಬಿಕ್ಕಟ್ಟು ಪರಿಹಾರಕ್ಕೆ ಯಾವುದೇ ರೀತಿಯಲ್ಲಿ ಮಧ್ಯಸ್ಥಿಕೆ ವಹಿಸಲು ಭಾರತ ಸಿದ್ಧ * ರಷ್ಯಾ ವಿದೇಶಾಂಗ ಸಚಿವ ಸೆರ್ಗೇಯ್ ಲಾವ್ರೊವ್‌ಗೆ ಮೋದಿ ಭರವಸೆ
ನವದೆಹಲಿ(ಏ.02): ರಷ್ಯಾ-ಉಕ್ರೇನ್ ನಡುವಣ ಬಿಕ್ಕಟ್ಟು ಪರಿಹಾರಕ್ಕೆ ಯಾವುದೇ ರೀತಿಯಲ್ಲಿ ಮಧ್ಯಸ್ಥಿಕೆ ವಹಿಸಲು ಭಾರತ ಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ರಷ್ಯಾ ವಿದೇಶಾಂಗ ಸಚಿವ ಸೆರ್ಗೇಯ್ ಲಾವ್ರೊವ್ ಅವರಿಗೆ ತಿಳಿಸಿದ್ದಾರೆ. ಇದೇ ವೇಳೆ ಉಕ್ರೇನ್ ಮೇಲಿನ ಯುದ್ಧವನ್ನು ಕೂಡಲೇ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.
ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ್ದ ಲಾವ್ರೊವ್, ಭಾರತವು ಸಮಸ್ಯೆಗೆ ಪರಿಹಾರವನ್ನು ಒದಗಿಸುವ ಉದ್ದೇಶದಿಂದ ಮಧ್ಯಸ್ಥಿಕೆ ವಹಿಸಲು ಇಚ್ಛಿಸಿದರೆ, ಅಂತಾರಾಷ್ಟ್ರೀಯ ಸಮಸ್ಯೆಗಳಿಗೆ ನ್ಯಾಯಸಮ್ಮತವಾದ ಮತ್ತು ತರ್ಕಬದ್ಧವಾದ ವಿಧಾನದ ಮೂಲಕ ಪರಿಹಾರ ನೀಡುವುದಾದರೆ ಮಧ್ಯಸ್ಥಿಕೆ ವಹಿಸುವುದನ್ನು ರಷ್ಯಾ ಬೆಂಬಲಿಸುತ್ತದೆ’ ಎಂದು ಹೇಳಿದ್ದರು.
ಚೆರ್ನೋಬಿಲ್‌ನಿಂದ ಕಾಲ್ತೆಗೆದ ರಷ್ಯಾ ಸೇನೆ
ಷ್ಯಾ ಪಡೆಗಳು ಚೆರ್ನೋಬಿಲ್ ಪರಮಾಣು ಸ್ಥಾವರದಿಂದ ನಿರ್ಗಮಿಸುತ್ತಿವೆ ಮತ್ತು ಉಕ್ರೇನಿನ ಗಡಿ ಬೆಲಾರಸ್ ಕಡೆಗೆ ತೆರಳುತ್ತಿವೆ ಎಂದು ಉಕ್ರೇನ್ ಪರಮಾಣು ಘಟಕ ಕಂಪನಿಯ ಕಾರ‍್ಯನಿರ್ವಹಣಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ ನ್ಯೂಕ್ಲಿಯರ್ ಘಟಕದ ಕಾರ್ಮಿಕರು ನೆಲೆಸಿರುವ ಸ್ಲಾವುಟಿಚ್ ನಗರದಿಂದಲೂ ರಷ್ಯಾ ಸೇನೆ ನಿರ್ಗಮನಕ್ಕೆ ಸಿದ್ಧತೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಚೆರ್ನೋಬಿಲ… ಸ್ಥಾವರದ ಸುತ್ತಲಿನ 10 ಚ. ಕಿ.ಮೀ ಪ್ರದೇಶದ ಕೆಂಪು ಅರಣ್ಯದಲ್ಲಿ ರಷ್ಯನ್ನರು ಕಂದಕಗಳನ್ನು ಅಗೆದಿದ್ದಾರೆ ಎಂದು ವರದಿಗಳು ದೃಢಪಡಿಸಿವೆ. ವಿಕಿರಣ ಸೋರಿಕೆಯಿಂದ ರಷ್ಯಾ ಸೈನಿಕರಲ್ಲಿ ಅನಾರೋಗ್ಯ ಕಾಣಿಸಿಕೊಂಡಿದೆ. ಹೀಗಾಗಿ ಗಾಬರಿಗೊಂದು ಸ್ಥಳದಿಂದ ನಿರ್ಗಮಿಸಲು ನಿರ್ಧರಿಸಿವೆ ಎಂದು ಹೇಳಿದರು.
ರಷ್ಯಾ ತೈಲ ಡಿಪೋ ಮೇಲೆ ಉಕ್ರೇನ್ ದಾಳಿ
ಇಷ್ಟುದಿನಗಳಿಂದ ರಷ್ಯಾ ದಾಳಿಗೆ ತುತ್ತಾಗಿದ್ದ ಉಕ್ರೇನ್ ಇದೀಗ ರಷ್ಯಾದ ತೈಲ ಡಿಪೊವೊಂದರ ಮೇಲೆ ಹೆಲಿಕಾಪ್ಟರ್‌ಗಳ ಮೂಲಕ ದಾಳಿ ನಡೆಸಿದೆ. ಬೆಲ್ಗೊರೋಡ್‌ನಲ್ಲಿರುವ ತೈಲ ಡಿಪೋ ಸಂಪೂರ್ಣವಾಗಿ ಸುಟ್ಟುಹೋಗಿದೆ. ಈ ದುರ್ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ
ಕೀವ್, ಚೆರ್ನಿಹಿವ್ ಮೇಲೆ ದಾಳಿ ಮುಂದುವರಿಕೆ
ರಾಜಧಾನಿ ಕೀವ್ ಮತ್ತು ಚೆರ್ನಿಹಿವ್‌ನಿಂದ ಸೇನೆ ಹಿಂಪಡೆಯುವುದಾಗಿ ರಷ್ಯಾ ಭರವಸೆ ನೀಡಿದ್ದರೂ ಈ 2 ಪ್ರದೇಶಗಳ ಮೇಲಿನ ದಾಳಿಯನ್ನು ಕಡಿಮೆ ಮಾಡಿಲ್ಲ. ಇದರೊಂದಿಗೆ ಉಕ್ರೇನ್ ಪೂರ್ವಭಾಗದಲ್ಲಿ ದಾಳಿಯನ್ನು ಮರು ಸಂಘಟಿಸಲು ಬೇಕಿರುವ ಪ್ರಯತ್ನಗಳನ್ನು ರಷ್ಯಾ ಆರಂಭಿಸಿದೆ ಎಂದು ಬ್ರಿಟನ್ ರಕ್ಷಣಾ ಸಚಿವಾಲಯ ಹೇಳಿದೆ.
ರಷ್ಯಾ ಸೇನೆ ಹಿಂಪಡೆದಿರುವುದು ಕೇವಲ ಸೈನಿಕ ತಂತ್ರ: ಜೆಲೆನ್‌ಸ್ಕಿ
ಉಕ್ರೇನ್‌ನ ಮಧ್ಯ ಮತ್ತು ಉತ್ತರ ಭಾಗದಿಂದ ರಷ್ಯಾ ಸೇನೆಯನ್ನು ಹಿಂಪಡೆಯುತ್ತಿರುವುದು ಆಗ್ನೇಯ ಭಾಗದಲ್ಲಿ ದಾಳಿಯನ್ನು ಮರುಸಂಘಟಿಸಲು ಸೇನೆಯನ್ನು ನಿರ್ಮಿಸುವ ತಂತ್ರವಾಗಿದೆ ಎಂದು ಅಧ್ಯಕ್ಷ ಜೆಲೆನ್‌ಸ್ಕಿ ಹೇಳಿದ್ದಾರೆ. 5 ವಾರಗಳ ದಾಳಿಯಲ್ಲಿ ಸಾವಿರಾರು ಜನರನ್ನು ಕೊಂದಿದ್ದಾರೆ. ಲಕ್ಷಾಂತರ ಜನ ದೇಶ ಬಿಡುವಂತೆ ಮಾಡಿದ್ದಾರೆ. ಹಾಗಾಗಿ ಅವರ ಉದ್ದೇಶ ನಮಗೆ ತಿಳಿದಿದೆ. ಇನ್ನಷ್ಟುಪ್ರದೇಶಗಳ ಮೇಲೆ ದಾಳಿ ನಡೆಸಲು ಈ ಸ್ಥಳಗಳಿಂದ ಹಿಂದೆ ಸರಿಯುತ್ತಿದ್ದಾರೆ. ಈ ಯುದ್ಧ ಮುಂದುವರೆಯುತ್ತದೆ ಎಂದು ಜೆನ್‌್ನಸ್ಕಿ ಹೇಳಿದ್ದಾರೆ.
ಆಸ್ಪ್ರೇಲಿಯಾದಿಂದ ಶಸ್ತ್ರಾಸ್ತ್ರ ಪೂರೈಕೆ: ಮಾರಿಸನ್
ಜೆಲೆನ್‌ಸ್ಕಿ ಅವರ ಬೇಡಿಕೆಯಂತೆ ಸ್ಫೋಟ ನಿಯಂತ್ರಕ ಶಸ್ತ್ರಾಸ್ತ್ರಗಳನ್ನು ಒದಗಿಸಲು ಆಸ್ಪ್ರೇಲಿಯಾ ಒಪ್ಪಿಕೊಂಡಿದೆ ಎಂದು ಪ್ರಧಾನಿ ಸ್ಕಾಟ್ ಮಾರಿಸನ್ ಹೇಳಿದ್ದಾರೆ. ನಾವು ಉಕ್ರೇನ್‌ಗಾಗಿ ಪ್ರಾರ್ಥಿಸುತ್ತಿದ್ದೇವೆ. ಗನ್‌ಗಳನ್ನು ಪೂರೈಸುತ್ತಿದ್ದೇವೆ. ಶಸ್ತ್ರ ಹೊಂದಿದ ವಾಹನಗಳನ್ನು ಕಳುಹಿಸಿದ್ದೇವೆ ಎಂದು ಹೇಳಿದ್ದಾರೆ.
