Elon Musk vs Putin ಚಾಲೆಂಜ್ ಗೆದ್ದವರಿಗೆ ಉಕ್ರೇನ್, ರಷ್ಯಾ ಅಧ್ಯಕ್ಷ ಪುಟಿನ್‌ಗೆ ನೇರ ಸವಾಲು ಹಾಕಿದ ಎಲಾನ್ ಮಸ್ಕ್!
- ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ಗೆ ಎಲಾನ್ ಮಸ್ಕ್ ಚಾಲೆಂಜ್
- ಉಕ್ರೇನ್ ಮೇಲೆ ರಷ್ಯಾ ಸಾರಿರುವ ಯುದ್ಧದ ವಿರುದ್ಧ ಮಸ್ಕ್ ಹೋರಾಟ
- ಚಾಲೆಂಜ್ ಗೆದ್ದವರಿಗೆ ಉಕ್ರೇನ್, ಟ್ವೀಟ್ ಮೂಲಕ ಸವಾಲು
ಟೆಕ್ಸಾಸ್(ಮಾ.14): ಉಕ್ರೇನ್ ಮೇಲಿನ ರಷ್ಯಾ ಯುದ್ಧವನ್ನು(Russia Ukraine war) ಖಂಡಿಸುತ್ತಲೇ ಬಂದಿರುವ ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್(Elon Musk) ಇದೀಗ ನೇರ ಚಾಲೆಂಜ್ ಹಾಕಿ ಗಮನಸೆಳೆದಿದ್ದಾರೆ. ಉಕ್ರೇನ್ ಪರ ನಿಂತಿರುವ ಎಲಾನ್ ಮಸ್ಕ್ ಈಗಾಗಲೇ ಸ್ಟಾರ್‌ಲಿಂಕ್ ಸೇರಿದಂತೆ ಹಲವು ನೆರವು ಘೋಷಿಸಿದ್ದಾರೆ. ಇದೀಗ ರಷ್ಯಾ ಅಧ್ಯಕ್ಷ ವ್ಲಾದಿಮಿರ್(Vladimir Putin) ಪುಟಿನ್‌ಗೆ ಚಾಲೆಂಜ್ ಮಾಡಿದ್ದಾರೆ. ನನ್ನ ಚಾಲೆಂಜ್ ಗೆದ್ದವರಿಗೆ ಉಕ್ರೇನ್ ಎಂದು ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ.
ಎಲಾನ್ ಮಸ್ಕ್ ನೇರವಾಗಿ ವ್ಲಾದಿಮಿರ್ ಪುಟಿನ್ ಹೆಸರನ್ನು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ನಾನು ಈ ಮೂಲಕ ವ್ಲಾದಿಮಿರ್ ಪುಟಿನ್‌ಗೆ ಒಂದೇ ಯುದ್ಧಕ್ಕೆ ಸವಾಲು ಹಾಕುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಇದೇ ಟ್ವೀಟ್‌ನಲ್ಲಿ ಇದು ಉಕ್ರೇನ್ ಹಕ್ಕು ಎಂದಿದ್ದಾರೆ.
ಈ ಟ್ವೀಟ್ ಬಳಿಕ ಮತ್ತೊಂದು ಟ್ವೀಟ್ ಮಾಡಿರುವ ಎಲಾನ್ ಮಸ್ಕ್, ಈ ಯುದ್ಧಕ್ಕೆ ಸಿದ್ಧವಿದ್ದೀರಾ ಎಂದು ರಷ್ಯಾ ಅಧ್ಯಕ್ಷರ ಟ್ವಿಟರ್ ಖಾತೆ ಟ್ಯಾಗ್ ಮಾಡಿ ಪ್ರಶ್ನಿಸಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಎಲಾನ್ ಮಸ್ಕ್ ರಷ್ಯಾಕೆ ನೇರ ಸವಾಲು ಹಾಕುವ ಮೂಲಕ ಇದೀಗ ಭಾರಿ ಸಂಚಲನ ಸೃಷ್ಟಿಸಿದ್ದಾರೆ.
ರಷ್ಯಾ ದಾಳಿಯನ್ನು ನೇರವಾಗಿ ಖಂಡಿಸಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ಧ ಧ್ವನಿ ಎತ್ತಿರುವ ಎಲಾನ್ ಮಸ್ಕ್, ಉಕ್ರೇನ್‌ಗೆ ಎಲ್ಲಾ ನೆರವು ನೀಡುವುದಾಗಿ ಹೇಳಿದ್ದಾರೆ. ಈಗಾಗಲೇ ರಷ್ಯಾ ದಾಳಿಯಿಂದ ಉಕ್ರೇನ್‌ನಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಂಡಿದೆ. ಹೀಗಾಗಿ ಉಕ್ರೇನ್ ಅಧಿಕಾರಿಗಳ ಮನವಿ ಬೆನ್ನಲ್ಲೇ ತನ್ನ ಸ್ಪೇಸ್ ಎಕ್ಸ್ ಸಂಸ್ಥೆ ನೀಡುವ ಸ್ಟಾರ್ ಲಿಂಕ್ ಬ್ರಾಂಡ್ ಬ್ಯಾಂಡ್ ಸೇವೆಯನ್ನು ಉಕ್ರೇನ್‌ನಲ್ಲಿ ಸಕ್ರೀಯಗೊಳಿಸಲಾಗಿದೆ.
ಉಕ್ರೇನ್ ಕೋರಿಕೆ ಮೇರೆಗೆ ತುರ್ತು ಇಂಟರ್‌ನೆಟ್ ಸೇವೆ ಕಲ್ಪಿಸಿದ ಮಸ್ಕ್
ರಷ್ಯಾ ದಾಳಿಯ ಬಳಿಕ ಇಂಟರ್‌ನೆಟ್ ಸೇವೆಯಲ್ಲಿ ಭಾರೀ ವ್ಯತ್ಯಯ ಅನುಭವಿಸುತ್ತಿದ್ದ ಉಕ್ರೇನ್ ನೆರವಿಗೆ ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್ ಕಂಪನಿ ಧಾವಿಸಿದೆ. ಉಕ್ರೇನ್ ಕೋರಿಕೆ ಬಂದ ಕೇವಲ 10 ಗಂಟೆಯಲ್ಲಿ ಸ್ಟಾರ್‌ಲಿಂಕ್ ಕಂಪನಿ ದೇಶದಲ್ಲಿ ಉಪಗ್ರಹ ಬ್ರಾಡ್‌ಬ್ಯಾಂಡ್ ಸೇವೆ ಆರಂಭಿಸಿದೆ.
‘ನೀವು ಮಂಗಳ ಗ್ರಹವನ್ನು ವಸತಿ ಪ್ರದೇಶ ಮಾಡಲು ಹೊರಟಿರುವ ವೇಳೆ, ಇತ್ತ ರಷ್ಯಾ ಉಕ್ರೇನ್ ಅನ್ನು ಆಕ್ರಮಿಸಿಕೊಳ್ಳುತ್ತಿದೆ. ನಿಮ್ಮ ರಾಕೆಟ್‌ಗಳು ಬಾಹ್ಯಾಕಾಶದಲ್ಲಿ ಯಶಸ್ವಿಯಾಗಿ ಇಳಿಯುತ್ತಿದ್ದರೆ, ಇತ್ತ ರಷ್ಯಾದ ರಾಕೆಟ್‌ಗಳು ಉಕ್ರೇನಿ ಜನರ ಮೇಲೆ ಆಗಸದಿಂದ ದಾಳಿ ನಡೆಸುತ್ತಿವೆ. ಹೀಗಾಗಿ ಉಕ್ರೇನ್‌ನಲ್ಲಿ ನಿಮ್ಮ ಸ್ಟಾರ್‌ಲಿಂಕ್ ಸ್ಟೇಷನ್ ಆರಂಭಕ್ಕೆ ಮನವಿ ಮಾಡುತ್ತಿದ್ದೇವೆ’ ಎಂದು ಉಕ್ರೇನಿನ ಸಚಿವ ಮಿಖಾಹಿಲೋ ಫೆಡ್ರೋವ್, ಟ್ವೀಟ್ ಮೂಲಕ ಎಲಾನ್ ಮಸ್ಕ್‌ಗೆ ಮನವಿ ಮಾಡಿದ್ದರು. ಅದರ ಬೆನ್ನಲ್ಲೇ ತುರ್ತಾಗಿ ಸ್ಟಾರ್‌ಲಿಂಕ್ ಇಂಟರ್‌ನೆಟ್ ಸೇವೆ ಆರಂಭಿಸಲಾಗಿದೆ.
Tesla in India: ಎಲೆಕ್ಟ್ರಿಕ್ ಕಾರಿಗೆ ತೆರಿಗೆ ವಿನಾಯ್ತಿ ಕೋರಿದ್ದ ಎಲಾನ್ ಮಸ್ಕ್ ಮನವಿ ತಿರಸ್ಕೃತ!
ನಾವು ರಕ್ಷಿಸುತ್ತೇವೆ
ಈ ನಡುವೆ ಅಮೆರಿಕದ ಗಗನಯಾತ್ರಿಯನ್ನು ರಷ್ಯಾ ಬಾಹ್ಯಾಕಾಶದಲ್ಲೇ ಬಿಟ್ಟು ಬಂದರೆ ತಮ್ಮ ಸ್ಪೇಸ್‌ಎಕ್ಸ್ ಕಂಪನಿಯ ರಾಕೆಟ್ ಕಳಿಸಿ ಅವರನ್ನು ರಕ್ಷಿಸಲಾಗುವುದು ಎಂದು ಜಗತ್ತಿನ ಶ್ರೀಮಂತ ವ್ಯಕ್ತಿಯಾದ ಎಲಾನ್ ಮಸ್ಕ್ ಭರವಸೆ ನೀಡಿದ್ದಾರೆ.
ಅಮೆರಿಕ ತನ್ನ ವಿರುದ್ಧ ನಿರ್ಬಂಧಗಳನ್ನು ಹೇರಿದ್ದಲ್ಲದೇ ಉಕ್ರೇನಿಗೆ ಯುದ್ಧದಲ್ಲಿ ಸಹಾಯ ಮಾಡುತ್ತಿರುವುದಕ್ಕೆ ರಷ್ಯಾ ಕಿಡಿಕಾರಿದ್ದು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿದ್ದ ಅಮೆರಿಕದ ಗಗನಯಾತ್ರಿಯನ್ನು ಅಲ್ಲಿಯೇ ಬಿಟ್ಟು ಬರುವ ಬೆದರಿಕೆ ಹಾಕಿತ್ತು. ಇದರ ಬೆನ್ನಲ್ಲೇ ಮಸ್ಕ್ ನಾವು ರಕ್ಷಿಸುತ್ತೇವೆ ಎಂದು ಭರವಸೆ ನೀಡಿದ್ದರು.
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಗಗನಯಾತ್ರಿ ಮಾರ್ಕ್ ವಂಡೇ ಹೈ (55), ರಷ್ಯಾದ ಇಬ್ಬರು ಗಗನಯಾತ್ರಿಗಳೊಂದಿಗೆ 355 ದಿನಗಳ ನಂತರ ಮಾ.30 ರಂದು ರಷ್ಯಾದ ಸೂಯೆಜ್ ನೌಕೆಯಲ್ಲಿ ಕಜಕಸ್ತಾನಕ್ಕೆ ಮರಳಬೇಕಾಗಿತ್ತು. ಆದರೆ ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್‌ಕಾಶ್ಮೋಸ್ ಮುಖ್ಯಸ್ಥ ಡಿಮಿಟ್ರಿ ರೊಗೊಝಿನ್, ರಷ್ಯಾ ವಿರುದ್ಧ ಉಕ್ರೇನಿಗೆ ಸಹಾಯ ಮಾಡಿದರೆ ವಂಡೇ ಹೈಯನ್ನು ತನ್ನ ಬಾಹ್ಯಾಕಾಶ ನೌಕೆಯಲ್ಲಿ ಕರೆತರದೇ ನಿಲ್ದಾಣದಲ್ಲೇ ಬಿಟ್ಟು ಬರುವುದಾಗಿ ಅಮೆರಿಕಕ್ಕೆ ಎಚ್ಚರಿಕೆ ನೀಡಿತ್ತು.