* ರಷ್ಯಾದಿಂದ ಪರಮಾಣು ಸಬ್‌ಮರೀನ್‌, ಕ್ಷಿಪಣಿ ನಿಯೋಜನೆ ಆರಂಭ* ಪುಟಿನ್‌ ಅಣ್ವಸ್ತ್ರಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಸೂಚಿಸಿದ್ದೇ ಈ ಕ್ರಮ

ಮಾಸ್ಕೋ(ಮಾ.02): ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಉಕ್ರೇನ್‌ ವಿರುದ್ಧ ದಾಳಿ ನಡೆಸಲು ಅಣ್ವಸ್ತ್ರಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲು ಸೂಚನೆ ನೀಡಿದ ಬೆನ್ನಲ್ಲೇ, ರಷ್ಯಾ ಸೇನೆ ಪರಮಾಣು ಜಲಾಂತರ್ಗಾಮಿ ನೌಕೆಗಳು ಬಾರೆಂಟ್ಸ್‌ ಸಮುದ್ರದಲ್ಲಿ ಯುದ್ಧಾಭ್ಯಾಸವನ್ನು ಆರಂಭಿಸಿವೆ. ಅದೇ ರೀತಿ ಸೈಬೀರಿಯಾದ ಹಿಮಚ್ಛಾದಿತ ಕಾಡುಗಳಲ್ಲಿ ರಷ್ಯಾದ ಮೊಬೈಲ್‌ ಕ್ಷಿಪಣಿ ಲಾಂಚರ್‌ಗಳು ಸಂಚರಿಸುತ್ತಿವೆ ಎನ್ನಲಾಗಿದೆ.

ಸಮುದ್ರದಲ್ಲಿ ಬಿರುಗಾಳಿಯಂತಹ ಕಠಿಣ ಪರಿಸ್ಥಿತಿಯಲ್ಲೂ ಸಮರ್ಥವಾಗಿ ಕಾರ್ಯನಿರ್ವಹಿಸಲು ಪರಮಾಣು ಜಲಾಂತರ್ಗಾಮಿ ನೌಕೆಗಳು ಅಭ್ಯಾಸ ಆರಂಭಿಸಿವೆ. ವಾಯುವ್ಯ ರಷ್ಯಾದ ಕೋಲಾ ಪರ್ಯಾಯ ದ್ವೀಪದ ರಕ್ಷಣೆಗೆ ನಿಯೋಜಿಸಲಾಗುವ ಜಲಾಂತರ್ಗಾಮಿ ನೌಕೆಗಳು ಈ ಸಾಮರ್ಥ್ಯ ಹೊಂದಿರುತ್ತವೆ ಎಂದು ರಷ್ಯಾದ ಉತ್ತರದ ನೌಕಾಪಡೆಗಳು ಹೇಳಿವೆ. ಪೂರ್ವ ಸೈಬೀರಿಯಾದ ಇರ್ಕುಟ್ಸ್‌ಕ್‌ ಕಾಡುಗಳಲ್ಲಿ ಕಾರ್ಯತಂತ್ರದ ಕ್ಷಿಪಣಿ ಪಡೆಗಳ ಘಟಕಗಳು ಯಾರ್ಸ್‌ ಖಂಡಾಂತರ ಕ್ಷಿಪಣಿ ಲಾಂಚರ್‌ಗಳನ್ನು ರಹಸ್ಯವಾಗಿ ನಿಯೋಜಿಸಿ ತಾಲೀಮು ಆರಂಭಿಸಿವೆ ಎಂದು ಮೂಲಗಳು ತಿಳಿಸಿವೆ.

ರಷ್ಯಾ ಪರಮಾಣು ಜಲಾಂತರ್ಗಾಮಿ ನೌಕೆಗಳು ಹಾಗೂ ಕ್ಷಿಪಣಿಗಳ ಅಭ್ಯಾಸವನ್ನು ಉಕ್ರೇನಿನ ಮೇಲೆ ದಾಳಿ ನಡೆಸಲೆಂದೇ ಆರಂಭಿಸಿದೆ ಎನ್ನಲಾಗುತ್ತಿದ್ದು, ಈ ಕುರಿತು ರಷ್ಯಾ ಸೇನೆ ಯಾವುದೇ ಸ್ಪಷ್ಟನೆ ನೀಡಿಲ್ಲ.

ಸೈಬೀರಿಯಾದ ಭೂಗರ್ಭ ನಗರಕ್ಕೆ ಪುಟಿನ್‌ ಕುಟುಂಬ ಸ್ಥಳಾಂತರ?

ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಇತ್ತೀಚಿಗೆ ಅವರ ಕುಟುಂಬವನ್ನು ಸೈಬೀರಿಯಾದಲ್ಲಿರುವ ಭೂಗರ್ಭ ನಗರಕ್ಕೆ ಸ್ಥಳಾಂತರಿಸಿದ್ದಾರೆ ಎಂದು ವರದಿಯಾಗಿದೆ. ಇದೊಂದು ಐಶಾರಾಮಿ ಬಂಕರ್‌ ಆಗಿದ್ದು ಅಣುಬಾಂಬ್‌ ದಾಳಿ ನಡೆದರೂ ಸಹ ಈ ಬಂಕರ್‌ ಹಾನಿಗೊಳಗಾಗುವುದಿಲ್ಲ. ಉಕ್ರೇನ್‌ ಮೇಲೆ ಯುದ್ಧ ನಡೆಸುತ್ತಿರುವ ಬೆನ್ನಲ್ಲೇ ಪುಟಿನ್‌ ಅವರು ತಮ್ಮ ಕುಟುಂಬವನ್ನು ಸೈಬಿರಿಯಾಗೆ ಸ್ಥಳಾಂತರಿಸಲಾಗಿದೆ ಎಂದು ಮಾಸ್ಕೋದ ಮಾಜಿ ಪ್ರೊಫೆಸರ್‌ ಒಬ್ಬರು ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ಪುಟಿನ್‌ ಅವರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಈ ಸಮಯದಲ್ಲಿ ಸಾರ್ವಜನಿಕರಿಂದ ದೂರ ಉಳಿದುಕೊಳ್ಳುವ ಸಲುವಾಗಿ ಅವರು ಈ ಬಂಕರ್‌ನಲ್ಲಿ ಆಶ್ರಯ ಪಡೆದುಕೊಂಡಿದ್ದರು ಎಂದೂ ಅವರು ಹೇಳಿದ್ದಾರೆ.

ರಷ್ಯಾ ಅಣ್ವಸ್ತ್ರ ಸನ್ನದ್ಧತೆ ಆತಂಕಕಾರಿ ಬೆಳವಣಿಗೆ: ವಿಶ್ವಸಂಸ್ಥೆ

 ರಷ್ಯಾ ಅಣ್ವಸ್ತ್ರವನ್ನು ಬಳಕೆಗೆ ಸನ್ನದ್ಧ ಸ್ಥಿತಿಯಲ್ಲಿ ಇಟ್ಟಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್‌ ಸೋಮವಾರ ಹೇಳಿದ್ದಾರೆ.

ಉಕ್ರೇನ್‌ ಬಿಕ್ಕಟ್ಟಿನಿಂದಾಗಿ ವಿಶ್ವಸಂಸ್ಥೆಯ ಸಾಮಾನ್ಯಸಭೆ ನಡೆದ ತುರ್ತು ಅಧಿವೇಶನದಲ್ಲಿ ಮಾತನಾಡಿದ ಗುಟೆರಸ್‌ ‘ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅಣ್ವಸ್ತ್ರಗಳನ್ನು ಬಳಕೆಗೆ ಸಿದ್ಧವಾಗಿಡಲು ಸೇನೆ ಸೂಚನೆ ನೀಡಿದ್ದಾರೆ. ಈ ಬೆಳವಣಿಗೆಯು ವಿಶ್ವ ಮತ್ತೊಮ್ಮೆ ಪರಮಾಣು ಯುದ್ಧದ ಗಂಭೀರ ಪರಿಣಾಮ ಎದುರಿಸಬೇಕಾಗಬಹುದು ಎಂಬ ಭೀತಿ ಸೃಷ್ಟಿಸಿದೆ. ಅಣ್ವಸ್ತ್ರದ ಬಳಕೆಯನ್ನು ಯಾವುದೇ ಕಾರಣಕ್ಕೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಉಕ್ರೇನ್‌ನಲ್ಲಿ ಯುದ್ಧ ತಕ್ಷಣ ನಿಲ್ಲಬೇಕು. ಉಕ್ರೇನ್‌ ಹಾಗೂ ರಷ್ಯಾದ ನಡುವಿನ ನೇರ ಮಾತುಕತೆ ನಡೆದಾಗಲೇ ಯುದ್ಧವು ನಿಲ್ಲಬಹುದು’ ಎಂದು ಅಭಿಪ್ರಾಯಪಟ್ಟರು.