ರಷ್ಯಾದಲ್ಲಿ 'ಬ್ಲ್ಯಾಕ್ ವಿಡೋಸ್' ಎಂಬ ಮಹಿಳೆಯರು, ಯುದ್ಧಕ್ಕೆ ಹೊರಟ ಅಥವಾ ಸಾಯುವ ಸ್ಥಿತಿಯಲ್ಲಿರುವ ಸೈನಿಕರನ್ನು ಹಣಕ್ಕಾಗಿ ಮದುವೆಯಾಗುತ್ತಿದ್ದಾರೆ. ಸೈನಿಕರು ಮೃತಪಟ್ಟರೆ ಸರ್ಕಾರ ನೀಡುವ ಕೋಟ್ಯಂತರ ರೂಪಾಯಿ ಪರಿಹಾರವನ್ನು ಪಡೆಯುವುದೇ ಇವರ ಉದ್ದೇಶವಾಗಿದ್ದು, ಈ ಅಮಾನವೀಯ ಜಾಲದಲ್ಲಿ ಕೆಲವು ಸೇನಾಧಿಕಾರಿಗಳೂ ಶಾಮೀಲಾಗಿದ್ದಾರೆ ಎಂಬ ಆರೋಪವಿದೆ.

ರಷ್ಯಾ ಮತ್ತು ಉಕ್ರೇನ್ ನಡುವಿನ ರಕ್ತಸಿಕ್ತ ಯುದ್ಧ (Russia-Ukraine War) ಒಂದೆಡೆ ಜಗತ್ತನ್ನೇ ಆತಂಕಕ್ಕೆ ದೂಡಿದ್ದರೆ, ಇನ್ನೊಂದೆಡೆ ಸ್ವತಃ ರಷ್ಯಾದಲ್ಲೇ (Russia) ಅತಿ ಭೀಕರ ಹಾಗೂ ಅಮಾನವೀಯ ಜಾಲವೊಂದು ಬಯಲಿಗೆ ಬಂದಿದೆ! 

ಯುದ್ಧದ ಮುಂಚೂಣಿಗೆ ಹೊರಡಲಿರುವ ಯೋಧರು ಅಥವಾ ಆಸ್ಪತ್ರೆಯಲ್ಲಿ ಸಾವಿನೊಡನೆ ಹೋರಾಡುತ್ತಿರುವ ಸೈನಿಕರನ್ನೇ ಹುಡುಕಿ ಹುಡುಕಿ ಮದುವೆಯಾಗುವ 'ಕಾಳಿ ವಿಧವೆಯರು' ಅಥವಾ 'ಬ್ಲ್ಯಾಕ್ ವಿಡೋಸ್' (Black Widows) ರಷ್ಯಾದಲ್ಲಿ ಸೃಷ್ಟಿಯಾಗಿದ್ದಾರೆ. ಪ್ರೀತಿ ಅಥವಾ ಜೀವನಪರ್ಯಂತ ಜೊತೆಯಾಗಿರುವ ಉದ್ದೇಶದಿಂದಲ್ಲ, ಬದಲಾಗಿ ಯೋಧರು ಸಾವನ್ನಪ್ಪಿದರೆ ಸರ್ಕಾರ ನೀಡುವ ಕೋಟ್ಯಂತರ ರೂಪಾಯಿ ಹಣಕ್ಕಾಗಿ ಈ ಮದುವೆಗಳು ನಡೆಯುತ್ತಿವೆ!

ಹಣದ ಮೇಲಷ್ಟೇ ಕಣ್ಣು!

ರಷ್ಯಾ ಸರ್ಕಾರದ ನಿಯಮಾವಳಿಗಳ ಪ್ರಕಾರ, ಯುದ್ಧಭೂಮಿಯಲ್ಲಿ ಯಾವುದೇ ಸೈನಿಕ ಪ್ರಾಣ ಕಳೆದುಕೊಂಡರೆ, ಅವರ ಕುಟುಂಬಕ್ಕೆ ಒಂದೇ ಕಂತಿನಲ್ಲಿ ಕನಿಷ್ಠ 50 ಲಕ್ಷ ರೂಬಲ್ಸ್ (ಸುಮಾರು 60 ಲಕ್ಷ ಭಾರತೀಯ ರೂಪಾಯಿಗಳು - ₹60 Lakhs INR) ಪರಿಹಾರ ನೀಡಲಾಗುತ್ತದೆ. ಸೈನಿಕರು ರಣರಂಗದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದರೆ ಅವರ ಹೆಂಡತಿ ಮತ್ತು ಮಕ್ಕಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಬಾರದು ಎಂಬ ಒಳ್ಳೆಯ ಉದ್ದೇಶದಿಂದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಸರ್ಕಾರ ಈ ಯೋಜನೆ ತಂದಿತ್ತು. ಆದರೆ, ಈ ಹಣವನ್ನೇ ಆಸರೆಯಾಗಿಟ್ಟುಕೊಂಡು ರಷ್ಯಾದಲ್ಲಿ ಕೆಲವು ಕ್ರೂರ ಮನಸ್ಥಿತಿಯ ಯುವತಿಯರು ಹಾಗೂ ಮಹಿಳೆಯರು ಬಲೆ ಬೀಸುತ್ತಿದ್ದಾರೆ.

ತಂದೆಯ ಸಾವಿನ ಬಳಿಕ ಮಗಳಿಗೆ ಕಾದಿತ್ತು ಶಾಕ್!

ಸಿಎನ್‌ಎನ್‌ (CNN Report) ವರದಿ ಮಾಡಿರುವ ಪ್ರಕಾರ, ಮಾರಿಯಾ ಎಂಬ ರಷ್ಯಾದ ಯುವತಿಗೆ ಆಕೆಯ 59 ವರ್ಷದ ತಂದೆ ಯೂರಿ ಯುದ್ಧದಲ್ಲಿ ಮೃತಪಟ್ಟಿದ್ದಾರೆ ಎಂಬ ಕರೆ ಬರುತ್ತದೆ. ಆಶ್ಚರ್ಯ ಎಂದರೆ, ತನ್ನ ತಂದೆ ಸೇನೆಗೆ ಸೇರಿದ ವಿಷಯವೇ ಮಗಳಿಗೆ ತಿಳಿದಿರಲಿಲ್ಲ! ಅದಕ್ಕಿಂತಲೂ ಆಘಾತಕಾರಿ ವಿಷಯವೆಂದರೆ, ಯುದ್ಧಕ್ಕೆ ಹೊರಡುವ ಎರಡು ದಿನಗಳಷ್ಟೇ ಮುಂಚಿತವಾಗಿ ತಂದೆ ತನಗಿಂತ 22 ವರ್ಷ ಕಿರಿಯ ಯುವತಿಯನ್ನು ಮದುವೆಯಾಗಿದ್ದರು. ತಂದೆಯ ಸಾವಿನ ನಂತರ ಸರ್ಕಾರ ನೀಡಿದ ₹60 ಲಕ್ಷಕ್ಕೂ ಹೆಚ್ಚು ಪರಿಹಾರ ಹಣ ಪೂರ್ತಿಯಾಗಿ ಆ 2 ದಿನಗಳ ಮದುಮಗಳಿಗೆ (Bride) ತಲುಪಿತ್ತು. ಮಗಳು ಹಾಗೂ ತಂದೆಯ ನಿಜವಾದ ರಕ್ತಸಂಬಂಧಿಕರಿಗೆ ಬಿಡಿಗಾಸೂ ಸಿಗಲಿಲ್ಲ!

ಸಾಯುವ ಹಂತದಲ್ಲಿದ್ದ 5 ಯೋಧರನ್ನೇ ಮದುವೆಯಾದ ನರ್ಸ್!

ಇದು ಕೇವಲ ಒಬ್ಬ ಯುವತಿಯ ಕಥೆಯಲ್ಲ, ಇಡೀ ರಷ್ಯಾದಲ್ಲಿ ಇದೊಂದು ದೊಡ್ಡ ಮಾಫಿಯಾ ಅಥವಾ ಸ್ಕ್ಯಾಮ್ (Scam) ಆಗಿ ರೂಪಾಂತರಗೊಂಡಿದೆ. ಕಳೆದ ವರ್ಷ ರಷ್ಯಾದ ಮಿಲಿಟರಿ ಆಸ್ಪತ್ರೆಯೊಂದರಲ್ಲಿ (Military Hospital) ಕಾರ್ಯನಿರ್ವಹಿಸುತ್ತಿದ್ದ ನರ್ಸ್‌ ಒಬ್ಬಳು, ತೀವ್ರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ 5 ಸೈನಿಕರನ್ನು ಸಾಲು ಸಾಲಾಗಿ ಮದುವೆಯಾಗಿದ್ದಳು! ಅವರು ಸತ್ತ ತಕ್ಷಣ ಬಂದ ಕೋಟ್ಯಂತರ ರೂಪಾಯಿ ಹಣವನ್ನು ಈಕೆಯೇ ಕಬಳಿಸಿದ್ದಳು. ಬಳಿಕ ವಿಷಯ ತಿಳಿಯುತ್ತಿದ್ದಂತೆ ಆಕೆಯನ್ನು ಕೆಲಸದಿಂದ ವಜಾಗೊಳಿಸಲಾಯಿತು.

ಸೇನಾಧಿಕಾರಿಗಳೇ ಶಾಮೀಲು? 

ಮತ್ತಷ್ಟು ದಿಗಿಲುಗೊಳಿಸುವ ಸಂಗತಿ ಎಂದರೆ, ರಷ್ಯಾದ ಕೆಲವು ಭದ್ರತಾ ಸಿಬ್ಬಂದಿ ಹಾಗೂ ಸೇನಾಧಿಕಾರಿಗಳೇ ಈ 'ಬ್ಲ್ಯಾಕ್ ವಿಡೋ'ಗಳ ಜೊತೆ ಶಾಮೀಲಾಗಿದ್ದಾರೆ. ಯೋಧರಿಗೆ ಬಲೆ ಬೀಸಿ ಮದುವೆ ಮಾಡಿಸುವುದು, ನಂತರ ಅವರನ್ನು ಅತ್ಯಂತ ಅಪಾಯಕಾರಿ ಕಮಾಂಡೋ ಮಿಷನ್‌ಗಳಿಗೆ (Dangerous Missions) ಕಳುಹಿಸಿ ಅಲ್ಲಿ ಎದುರಾಳಿಗಳಿಗೆ ನೇರವಾಗಿ ಸಿಗುವಂತೆ ಮಾಡಿ ಕೊಲ್ಲಿಸಲಾಗುವುದು. ಬಳಿಕ ಬರುವ ಪರಿಹಾರ ಹಣದಲ್ಲಿ ಕಮಿಷನ್ ಪಡೆಯುವ ದಂಧೆಯೂ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಪವಿತ್ರವಾದ ಮದುವೆ ಎಂಬ ಸಂಬಂಧವನ್ನು ಹಾಗೂ ಸೈನಿಕರ ತ್ಯಾಗವನ್ನು ರಷ್ಯಾದಲ್ಲಿ ಈ 'ಬ್ಲ್ಯಾಕ್ ವಿಡೋ' ಮಹಿಳೆಯರು ದುಡ್ಡು ಮಾಡುವ ದಂಧೆಯನ್ನಾಗಿ ಮಾಡಿಕೊಂಡಿರುವುದು ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದೆ.