* 3 ಜಿಲ್ಲೆಗಳನ್ನು ಉಗ್ರರಿಂದಲೇ ವಾಪಸ್ ಕಿತ್ತುಕೊಂಡ ನಾಗರಿಕರು* ತಾಲಿಬಾನ್ ಉಗ್ರ ರಾಕ್ಷಸರ ವಿರುದ್ಧ ಆಫ್ಘನ್ ಜನ ದಂಗೆ* ಘೋರ ಕಾಳಗದಲ್ಲಿ 60 ಉಗ್ರರಿಗೆ ಗಾಯ ಅಥವಾ ಸಾವು: ವರದಿ
ಕಾಬೂಲ್(ಆ.22): ನಾಗರಿಕ ಸರ್ಕಾರವನ್ನು ಪತನಗೊಳಿಸಿ ಇಡೀ ದೇಶವನ್ನು ಕೈವಶ ಮಾಡಿಕೊಂಡು, ಜನರನ್ನು ಆತಂಕದ ಮಡುವಿಗೆ ದೂಡಿರುವ ತಾಲಿಬಾನ್ ಉಗ್ರರ ವಿರುದ್ಧ ಅಫ್ಘಾನಿಸ್ತಾನದ ಸ್ಥಳೀಯರು ದಂಗೆ ಏಳಲು ಆರಂಭಿಸಿದ್ದಾರೆ. ಈಗಾಗಲೇ ಸ್ಥಳೀಯ ಪ್ರತಿರೋಧ ಗುಂಪುಗಳು ಅಫ್ಘಾನಿಸ್ತಾನದ ಮೂರು ಜಿಲ್ಲೆಗಳನ್ನು ತಾಲಿಬಾನ್ ತೆಕ್ಕೆಯಿಂದ ಕಸಿದುಕೊಂಡಿವೆ ಎಂದು ವರದಿಗಳು ತಿಳಿಸಿವೆ.
ಖೈರ್ ಮುಹಮ್ಮದ್ ಅಂದರಾಬಿ ಎಂಬುವರ ನಾಯಕತ್ವದಲ್ಲಿ ಸ್ಥಳೀಯರು ತಾಲಿಬಾನ್ ಉಗ್ರರ ವಿರುದ್ಧ ಹೋರಾಟ ನಡೆಸಿದ್ದಾರೆ. ಈ ವೇಳೆ 60 ಉಗ್ರರು ಗಾಯಗೊಂಡಿದ್ದಾರೆ ಅಥವಾ ಸಾವಿಗೀಡಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ತಿಕ್ಕಾಟದಿಂದಾಗಿ ಪೊಲ್-ಎ-ಹೆಸರ್, ದೆಹ್ ಸಲಾಹ್ ಹಾಗೂ ಬಾನು ಜಿಲ್ಲೆಗಳು ಸ್ಥಳೀಯರ ಕೈವಶವಾಗಿವೆ.
"
ಇತರೆ ಜಿಲ್ಲೆಗಳನ್ನೂ ತಾಲಿಬಾನ್‌ನಿಂದ ಕಸಿಯಲು ಸ್ಥಳೀಯರು ಸ್ಥಾಪಿಸಿಕೊಂಡಿರುವ ಪ್ರತಿರೋಧ ಪಡೆಗಳು ಮುನ್ನುಗ್ಗುತ್ತಿವೆ. ಪೊಲ್-ಎ-ಹೆಸರ್ ಜಿಲ್ಲೆ ಕಾಬೂಲ್‌ನಿಂದ ಉತ್ತರ ದಿಕ್ಕಿಗಿದೆ. ತಾಲಿಬಾನಿಗಳಿಗೆ ಅಭೇದ್ಯ ಕೋಟೆಯಂತಾಗಿರುವ ಪಂಜ್‌ಶೀರ್ ಕಣಿವೆಗೆ ಇದು ಸನಿಹದಲ್ಲಿದೆ ಎಂದು ವರದಿಗಳು ಹೇಳಿವೆ.
ತಾಲಿಬಾನಿಗಳು ದೇಶವನ್ನು ಆಕ್ರಮಿಸಿಕೊಂಡ ಬಳಿಕ ಜಲಾಲಾಬಾದ್ ಸೇರಿದಂತೆ ಕೆಲವೆಡೆ ಸಣ್ಣಪುಟ್ಟಪ್ರತಿಭಟನೆಗಳು ನಡೆದಿತ್ತಾದರೂ, ಉಗ್ರರು ವಶಪಡಿಸಿಕೊಂಡಿದ್ದ ಪ್ರದೇಶವನ್ನು ಅವರೊಂದಿಗೆ ಹೋರಾಡಿ ಮರಳಿ ತಮ್ಮ ತೆಕ್ಕೆಗೆ ತೆಗೆದುಕೊಂಡ ಮೊದಲ ಉದಾಹರಣೆ ಇದಾಗಿದೆ. ಹೀಗಾಗಿ ಈ ಬೆಳವಣಿಗೆ ಸಾಕಷ್ಟುಕುತೂಹಲ ಮೂಡಿಸಿದೆ. ಈ ಹೋರಾಟದ ಮನೋಭಾವ ದೇಶದ ಇತರೆ ಪ್ರಾಂತ್ಯಗಳಿಗೂ ಹಬ್ಬಿದರೆ, ಅದು ದೇಶವನ್ನು ಮರಳಿ ಆಳುವ ತಾಲಿಬಾನಿಗಳ ಆಶಯಕ್ಕೆ ದೊಡ್ಡ ಪೆಟ್ಟು ನೀಡುವ ಸಾಧ್ಯತೆ ಇದೆ.
ಯಾವ್ಯಾವ ಜಿಲ್ಲೆಗಳು ನಾಗರಿಕರ ವಶಕ್ಕೆ?
* ಪೊಲ್-ಎ-ಹೆಸರ್
* ದೆಹ್ ಸಲಾಹ್
* ಬಾನು
