* ಫೈಜರ್, ಆಸ್ಟ್ರಾಜೆನೆಕಾ ಲಸಿಕೆಗಳ ಅಧ್ಯಯನದಲ್ಲಿ ಪತ್ತೆ* ಲಸಿಕೆ ಪಡೆದಿದ್ದರೂ 6 ತಿಂಗಳಲ್ಲೇ ರೋಗನಿರೋಧಕ ಶಕ್ತಿ ಕುಂಠಿತ: ಅಧ್ಯಯನ
ಲಂಡನ್(ಆ.26): ಫೈಜರ್ ಹಾಗೂ ಆಸ್ಟ್ರಾಜೆನೆಕಾದ 2 ಡೋಸ್ ಲಸಿಕೆಯನ್ನು ಪಡೆದವರಲ್ಲಿಯೂ ಕೊರೋನಾ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ ಆರು ತಿಂಗಳ ಒಳಗಾಗಿಯೇ ನಶಿಸಲು ಆರಂಭಿಸುತ್ತದೆ ಎಂಬುದನ್ನು ಬ್ರಿಟನ್ ಸಂಶೋಧಕರು ನಡೆಸಿದ ಅಧ್ಯಯನವೊಂದು ತಿಳಿಸಿದೆ. ಹೀಗಾಗಿ ಕೊರೋನಾದಿಂದ ರಕ್ಷಣೆಗೆ ಬೂಸ್ಟರ್ ಡೋಸ್ ನೀಡಬೇಕು ಎಂಬ ತಜ್ಞರ ಅಭಿಪ್ರಾಯಕ್ಕೆ ಇನ್ನಷ್ಟುಬಲ ಬಂದಿದೆ.
ಬ್ರಿಟನ್‌ನ ಎನ್‌ಜಿಒ ಝಡ್‌ಒಇ ಕೋವಿಡ್ ಅಧ್ಯಯನ ಕೇಂದ್ರದ ಸಂಶೋಧಕರು 12 ಲಕ್ಷ ಪರೀಕ್ಷಾ ಮಾದರಿಗಳನ್ನು ವಿಶ್ಲೇಷಿಸಿ ವರದಿಯನ್ನು ಸಿದ್ಧಪಡಿಸಿದ್ದಾರೆ. 2 ಡೋಸ್ ಫೈಝರ್ ಲಸಿಕೆ ಪಡೆದವರಲ್ಲಿ ಕೊರೋನಾ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ 5ರಿಂದ 6 ತಿಂಗಳ ಬಳಿಕ ಶೇ. 88ರಿಂದ ಶೇ.74ಕ್ಕೆ ಇಳಿಕೆ ಆಗಿರುವುದು ಕಂಡುಬಂದಿದೆ. ಅದೇ ರೀತಿ ಆಸ್ಟ್ರಾಜೆನೆಕಾದ ಪ್ರಭಾವ ಶೇ.74ರಿಂದ ಶೇ.74ಕ್ಕೆ ಇಳಿಕೆ ಕಂಡಿದೆ.
ಇದೇ ವೇಳೆ ಭಾರತದಲ್ಲಿ ಬಳಕೆ ಆಗುತ್ತಿರುವ ಕೋವಿಶೀಲ್ಡ್‌ನ ಪ್ರಭಾವ 4ರಿಂದ 5 ತಿಂಗಳಿನಲ್ಲಿ ಶೇ.77ರಿಂದ ಶೇ.67ಕ್ಕೆ ಇಳಿಕೆ ಆಗಿದೆ. ಆದಾಗ್ಯೂ ಅತ್ಯಂತ ವೇಗವಾಗಿ ಹರಡಬಲ್ಲ ಡೆಲ್ಟಾಪ್ರಭೇದದಿಂದ ಈಗಲೂ ಲಸಿಕೆ ಅತ್ಯುತ್ತಮ ರಕ್ಷಣೆಯನ್ನು ಒದಗಿಸುತ್ತಿದೆ. ಗಂಭೀರ ಪ್ರಕರಣಗಳನ್ನು ತಗ್ಗಿಸುದರಲ್ಲಿ ಲಸಿಕೆ ಪ್ರಮುಖ ಪಾತ್ರವಹಿಸುತ್ತಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
