ಅಷ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿರುವ ದ.ಕ. ಮತ್ತು ಶಿವಮೊಗ್ಗ ಮೂಲದ ಇಬ್ಬರು ಪಾದ್ರಿಗಳು ಮಂಗಳೂರಿನ ಫಾ.ಜೆರೋಮ್‌ ಸಿಕ್ವೇರಾ ಮತ್ತು ತೀರ್ಥಹಳ್ಳಿಯ ಫಾ. ರಾಬರ್ಟ್‌ ರೊಡ್ರಿಗಸ್‌ ಅತಂತ್ರ

ಮಂಗಳೂರು (ಆ.19): ತಾಲಿಬಾನ್‌ ಉಗ್ರರ ವಶವಾಗಿರುವ ಅಷ್ಘಾನಿಸ್ತಾನದಲ್ಲಿ ದ.ಕ. ಮತ್ತು ಶಿವಮೊಗ್ಗ ಮೂಲದ ಇಬ್ಬರು ಪಾದ್ರಿಗಳು ಸಿಲುಕಿಕೊಂಡಿದ್ದು, ಇಲ್ಲಿರುವ ಅವರ ಕುಟುಂಬಸ್ಥರು ತೀವ್ರ ಚಿಂತೆಗೀಡಾಗಿದ್ದಾರೆ.

ಮಂಗಳೂರಿನ ಫಾ.ಜೆರೋಮ್‌ ಸಿಕ್ವೇರಾ ಮತ್ತು ತೀರ್ಥಹಳ್ಳಿಯ ಫಾ. ರಾಬರ್ಟ್‌ ರೊಡ್ರಿಗಸ್‌ ಸಿಲುಕಿಕೊಂಡವರು. ಪ್ರಸ್ತುತ ಅವರು ಸುರಕ್ಷಿತವಾಗಿರುವ ಸಂದೇಶ ಕುಟುಂಬಸ್ಥರಿಗೆ ಲಭಿಸಿದೆ. ಆದರೆ ಅಲ್ಲಿಂದ ಸುರಕ್ಷಿತ ಪ್ರದೇಶಕ್ಕೆ ತೆರಳುವ ನಿಟ್ಟಿನಲ್ಲಿ ಇಬ್ಬರೂ ಪ್ರಯತ್ನ ಮುಂದುವರಿಸಿದ್ದಾರೆ.

ಭಾರತೀಯರ ತೆರವಿಗೆ ತಾಲಿಬಾನಿಗಳದ್ದೇ ರಕ್ಷಣೆ: ಕಾಬೂಲ್‌ನಲ್ಲಿ ಅಚ್ಚರಿಯ ಬೆಳವಣಿಗೆ!

ಜೆರೋಮ್‌ ಸಿಕ್ವೇರಾ ಅವರು ಕಾಬೂಲ್‌ನಲ್ಲಿರುವ ಅಂತಾರಾಷ್ಟ್ರೀಯ ಎನ್‌ಜಿಒವೊಂದರ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಾಲಿಬಾನಿಗಳು ದೇಶವನ್ನು ವಶಕ್ಕೆ ಪಡೆದ ಬಳಿಕ ತಮ್ಮ ಸಹೋದರ ವಿನ್ಸೆಂಟ್‌ ಸಿಕ್ವೇರಾ ಜತೆ ದೂರವಾಣಿಯಲ್ಲಿ ಮಾತನಾಡಿದ ಅವರು, ಕಾಬೂಲ್‌ ಬಳಿಯ ಸ್ಥಳದಲ್ಲಿ ಉಳಿದುಕೊಂಡಿರುವುದಾಗಿ ತಿಳಿಸಿದ್ದಾರೆ. ಇದೀಗ ಅವರನ್ನು ವಾಪಸ್‌ ಭಾರತಕ್ಕೆ ಕರೆತರುವ ನಿಟ್ಟಿನಲ್ಲಿ ಕುಟುಂಬಸ್ಥರು ಪ್ರಯತ್ನ ಮುಂದುವರಿಸಿದ್ದಾರೆ.

ಜೆರೋಮ್‌ ಅವರು ಭಾನುವಾರ ಬೆಳಗ್ಗೆ ಕಾಬೂಲ್‌ ವಿಮಾನ ನಿಲ್ದಾಣ ತಲುಪಿದ್ದರೂ ಆ ಹೊತ್ತಿಗೆ ತಾಲಿಬಾನ್‌ ಉಗ್ರರು ವಿಮಾನ ನಿಲ್ದಾಣವನ್ನು ವಶಪಡಿಸಿಕೊಂಡಿದ್ದರು. ದೊಡ್ಡ ಮಟ್ಟದ ಜನಸಂದಣಿ ಸೇರಿತ್ತು. ತಾಲಿಬಾನ್‌ ಉಗ್ರರು ಗಾಳಿಯಲ್ಲಿ ಗುಂಡು ಹಾರಿಸುತ್ತಾ ಗುಂಪನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದರು. ಯಾವುದೇ ಭದ್ರತಾ ತಪಾಸಣೆ ಅಥವಾ ಬೋರ್ಡಿಂಗ್‌ ಪಾಸ್‌ ಇಲ್ಲದೆ ಜನರು ವಿಮಾನಗಳನ್ನು ಹತ್ತುತ್ತಿದ್ದರು ಎಂದು ಜೆರೋಮ್‌ ಹೇಳಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.

ಮಂಗಳೂರು ವಿವಿಯಲ್ಲಿ 53 ಆಫ್ಘನ್‌ ವಿದ್ಯಾರ್ಥಿಗಳು

ಅಷ್ಘಾನಿಸ್ತಾನದ 53 ವಿದ್ಯಾರ್ಥಿಗಳು ಮಂಗಳೂರು ವಿವಿಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದು, ಪ್ರಸ್ತುತ ಅಲ್ಲಿನ ಪ್ರಕ್ಷುಬ್ಧ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಚಿಂತೆಗೀಡಾಗಿದ್ದಾರೆ.

ಒಟ್ಟು 53 ವಿದ್ಯಾರ್ಥಿಗಳ ಪೈಕಿ 18 ಮಂದಿ ಪದವಿ ಶಿಕ್ಷಣ ಪಡೆಯುತ್ತಿದ್ದರೆ, 13 ಮಂದಿ ಸ್ನಾತಕೋತ್ತರ ಪದವಿ, 22 ಮಂದಿ ಪಿಎಚ್‌.ಡಿ ಅಧ್ಯಯನ ನಡೆಸುತ್ತಿದ್ದಾರೆ. ವಿವಿಯ ಹಾಸ್ಟೆಲ್‌ನಲ್ಲಿ ವಾಸವಾಗಿದ್ದಾರೆ. ಅಘಾನಿಸ್ತಾನದಲ್ಲಿ ತಮ್ಮ ಕುಟುಂಬಸ್ಥರನ್ನು ನೆನೆದು ತೀವ್ರ ಚಿಂತೆಗೀಡಾಗಿದ್ದಾರೆ. ಆದರೆ ಸದ್ಯಕ್ಕಂತೂ ಇವರು ಅಲ್ಲಿಗೆ ಹೋಗುವ ಪರಿಸ್ಥಿತಿಯಿಲ್ಲ.

ಮಂಗಳೂರು ವಿವಿಯಲ್ಲಿ 35 ದೇಶಗಳ 147 ವಿದ್ಯಾರ್ಥಿಗಳು ಭಾರತ ಸರ್ಕಾರದ ಸ್ಕಾಲರ್‌ಶಿಪ್‌ ಅನುಕೂಲದಿಂದ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಪ್ರಸ್ತುತ ಅಪ್ಘಾನಿಸ್ತಾನದಲ್ಲಿ ಪರಿಸ್ಥಿತಿ ಉಲ್ಭಣಿಸಿರುವ ಹಿನ್ನೆಲೆಯಲ್ಲಿ ಆತಂಕಿತರಾಗಿದ್ದಾರೆ. ಅವರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಕುಲಪತಿ ಪ್ರೊ.ಯಡಪಡಿತ್ತಾಯ ತಿಳಿಸಿದ್ದಾರೆ.