ಮಂಗಗಳ ಮೇಲೆ ಆಕ್ಸಫರ್ಡ್‌ ಲಸಿಕೆ ಪ್ರಯೋಗ ವಿಫಲ|  ಮಾನವನ ಮೇಲೆ ಕೊರೋನಾ ಲಸಿಕೆ ಪ್ರಯೋಗಕ್ಕೆ ಹಿನ್ನಡೆ| ಸೆಪ್ಟೆಂಬರ್‌ ವೇಳೆಗೆ ಲಸಿಕೆ ಮಾರುಕಟ್ಟೆಗೆ ಬಿಡುಗಡೆ ಆಗುವ ಆಶಾವಾದ ಮೂಡಿತ್ತು.

ಲಂಡನ್‌(ಮೇ.20): ಕೊರೋನಾ ವೈರಸ್‌ಗೆ ಲಸಿಕೆ ಕಂಡುಹಿಡಿಯುವ ನಿಟ್ಟಿನಲ್ಲಿ ಭಾರೀ ಭರವಸೆಯನ್ನು ಹುಟ್ಟುಹಾಕಿದ್ದ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಸಂಶೋಧಕರು ಮಂಗಗಳ ಮೇಲೆ ನಡೆಸಿದ ಲಸಿಕೆ ಪ್ರಯೋಗ ನಿರೀಕ್ಷಿತ ಫಲಿತಾಂಶ ನೀಡಿಲ್ಲ. ಈ ಲಸಿಕೆ ಮಂಗಗಳು ವೈರಸ್‌ಗೆ ತುತ್ತಾಗದಂತೆ ರಕ್ಷಿಸಲು ವಿಫಲವಾಗಿದೆ.

ಈ ಮುನ್ನ ಆಕ್ಸ್‌ಫರ್ಡ್‌ ವಿಶ್ವ ವಿದ್ಯಾಲಯದ ಸಂಶೋಧಕರ ತಂಡ ಮಕಾಕ್‌ ಕೋತಿಗಳ ಮೇಲೆ ಲಸಿಕೆ ಪ್ರಯೋಗ ಯಶಸ್ವಿಯಾಗಿದೆ ಹಾಗೂ ಅವುಗಳ ರೋಗನಿರೋಧಕ ವ್ಯವಸ್ಥೆ ಚೆನ್ನಾಗಿ ಕೆಲಸ ಮಾಡಿ, ವೈರಸ್‌ನಿಂದ ಅವುಗಳ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗಿಲ್ಲ ಎಂದು ಹೇಳಿತ್ತು. ಹೀಗಾಗಿ ಮೇ ಅಂತ್ಯದ ವೇಳೆಗೆ ದೊಡ್ಡ ಪ್ರಮಾಣದಲ್ಲಿ ಛಡಾಕ್ಸ್‌1 ಲಸಿಕೆಗೆ ಉತ್ಪಾದನೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಸೆಪ್ಟೆಂಬರ್‌ ವೇಳೆಗೆ ಲಸಿಕೆ ಮಾರುಕಟ್ಟೆಗೆ ಬಿಡುಗಡೆ ಆಗುವ ಆಶಾವಾದ ಮೂಡಿತ್ತು.

ಆದರೆ, ಬಯೋ ಆರ್‌ಎಕ್ಸ್‌ಐವಿ ಡಾಟ್‌ ಒಆರ್‌ಜಿಯಲ್ಲಿ ಲಭ್ಯವಿರುವ ಮುದ್ರಣ ಪೂರ್ವ ವರದಿಯ ಪ್ರಕಾರ, ಲಸಿಕೆಯನ್ನು ಹಾಕಲಾದ ಮಂಗಗಳು ವೈರಸ್‌ಗೆ ತೆರೆದುಕೊಂಡ ಸಂದರ್ಭದಲ್ಲಿ ಅವುಗಳಿಗೆ ಸೋಂಕು ತಗುಲಿರುವುದು ಕಂಡು ಬಂದಿದೆ.

ಈ ಫಲಿತಾಂಶವನ್ನು ಆಧರಿಸಿ ಛಡಾಕ್ಸ್‌1 ಲಸಿಕೆ ಮಾನವರು ವೈರಸ್‌ಗೆ ತುತ್ತಾಗುವುದರಿಂದ ರಕ್ಷಿಸಲು ಮತ್ತು ಒಬ್ಬರಿಂದ ಇನ್ನೊಬ್ಬರಿಗೆ ಸೋಂಕು ಹರಡದಂತೆ ತಡೆಯುವಲ್ಲಿ ವಿಫಲವಾಗಬಹುದು ಎಂದು ವಿಶ್ಲೇಷಿಸಲಾಗಿದೆ. ಇದೇ ವೇಳೆ ಪ್ರಾಣಿಗಳ ಮೇಲೆ ಈ ಲಸಿಕೆಯನ್ನು ಪ್ರಯೋಗಿಸಿದ ವೇಳೆ ನ್ಯೂಮೋನಿಯಾದಿಂದ ರಕ್ಷಣೆ ನೀಡಿರುವುದು ಕಂಡು ಬಂದಿದೆ.