ವೆಲ್ಲಿಂಗ್ಟನ್(ಜೂ.16)‌: ಹದಿಹರೆಯದವರಲ್ಲಿ ಲೈಂಗಿಕತೆಯ ಬಗ್ಗೆ ಜಾಗೃತಿ ಮೂಡಿಸಲು ನೀಲಿ ಚಿತ್ರತಾರೆಯರನ್ನು ಬಳಸಿ ನ್ಯೂಜಿಲೆಂಡ್‌ ಸರ್ಕಾರ ತಯಾರಿಸಿರುವ ಜಾಹೀರಾತಿಗೆ ಭಾರಿ ಮೆಚ್ಚುಗೆ ಕೇಳಿಬರುತ್ತಿದೆ. ಪೋರ್ನ್‌ ಸಿನಿಮಾಗಳಲ್ಲಿ ನೈಜ ಲೈಂಗಿಕತೆಯನ್ನು ತೋರಿಸುವುದಿಲ್ಲ, ಪೋರ್ನ್‌ಗೂ ವಾಸ್ತವದ ಲೈಂಗಿಕ ಕ್ರಿಯೆಗೂ ವ್ಯತ್ಯಾಸವಿದೆ. ಸೆಕ್ಸ್‌ಗೂ ಮುನ್ನ ಸಂಗಾತಿಯ ಒಪ್ಪಿಗೆ ಕೇಳುವುದು ಮುಖ್ಯ ಎಂಬುದನ್ನು ಈ ಜಾಹೀರಾತು ಹೇಳುತ್ತದೆ.

ಜಾಹೀರಾತಿನಲ್ಲಿ ಇಬ್ಬರು ಪೋರ್ನ್‌ ನಟಿಯರು ಬೆತ್ತಲೆಯಾಗಿ ಮನೆಮನೆಗೆ ಹೋಗುತ್ತಾರೆ. ಬಾಗಿಲು ತೆರೆದು ಇವರನ್ನು ನೋಡಿ ಕಂಗಾಲಾದ ತಾಯಿಯೊಬ್ಬಳ ಬಳಿ ‘ನಿಮ್ಮ ಮಗನನ್ನು ಭೇಟಿ ಮಾಡಬೇಕು. ಅವನು ಯಾವಾಗಲೂ ನಮ್ಮನ್ನು ನೋಡುತ್ತಿರುತ್ತಾನೆ’ ಎನ್ನುತ್ತಾರೆ. ನಂತರ ಪೋರ್ನ್‌ ಚಿತ್ರಗಳು ಹೇಗೆ ಅವಾಸ್ತವಿಕವೆಂದೂ, ಅದರಲ್ಲಿ ಪರಸ್ಪರರ ಅನುಮತಿ ಕೂಡ ಕೇಳದೆ ನೇರವಾಗಿ ಲೈಂಗಿಕ ಕ್ರಿಯೆ ನಡೆಸುತ್ತಾರೆಂದೂ ವಿವರಿಸುತ್ತಾರೆ.

ನ್ಯೂಜಿಲೆಂಡ್‌ ಸರ್ಕಾರವು ಯುವಜನರಲ್ಲಿ ಲೈಂಗಿಕತೆಯ ಬಗ್ಗೆ ಜಾಗೃತಿ ಮೂಡಿಸಲು ಕೈಗೊಂಡ ಈ ಜಾಹೀರಾತು ಆಂದೋಲನದ ಬಗ್ಗೆ ಆನ್‌ಲೈನ್‌ನಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.