ವಾಷಿಂಗ್ಟನ್(ಏ.01)‌: ತನ್ನ ಕೋವಿಡ್‌ ಲಸಿಕೆಯು 12 ವರ್ಷದ ಮಕ್ಕಳ ಮೇಲೆಯೂ ಪರಿಣಾಮಕಾರಿಯಾಗಿದೆ. ಶೇ.100ರಷ್ಟುಫಲಿತಾಂಶವು ಪರೀಕ್ಷೆ ಬಳಿಕ ಹೊರಬಿದ್ದಿದೆ ಎಂದು ಅಮೆರಿಕದ ‘ಫೈಝರ್‌’ ಔಷಧ ತಯಾರಿಕಾ ಕಂಪನಿ ಹೇಳಿಕೊಂಡಿದೆ.

ಫೈಝರ್‌ ಲಸಿಕೆಯನ್ನು ಪ್ರಾಯೋಗಿಕವಾಗಿ ಪಡೆದ 12ರಿಂದ 15 ವರ್ಷದ ಒಳಗಿನ 2,260 ಮಕ್ಕಳಲ್ಲಿ ಯಾರೊಬ್ಬರಿಗೂ ಕೊರೋನಾ ಸೋಂಕು ಹಾಗೂ ಅಡ್ಡ ಪರಿಣಾಮಗಳು ಕಂಡು ಬಂದಿಲ್ಲ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಹೀಗಾಗಿ ಅಮೆರಿಕದಲ್ಲಿ ಶಾಲೆಗಳ ಆರಂಭಕ್ಕೂ ಮುನ್ನ 12 ವರ್ಷ ಮೇಲ್ಪಟ್ಟವಿದ್ಯಾರ್ಥಿಗಳಿಗೆ ಲಸಿಕೆಯನ್ನು ನೀಡುವ ಸಾಧ್ಯತೆ ಇದೆ.

ಈಗಿನ ಮಟ್ಟಿಗೆ ಫೈಜರ್‌ ಲಸಿಕೆಯನ್ನು ಅಮೆರಿಕ ಸೇರಿ ಕೆಲವು ದೇಶಗಳಲ್ಲಿ 16 ವರ್ಷ ಮೇಲ್ಪಟ್ಟವರಿಗೆ ಮಾತ್ರವೇ ನೀಡಲು ಅನುಮತಿ ನೀಡಲಾಗಿದೆ. ವಿಶ್ವದೆಲ್ಲೆಡೆ ಬಳಕೆಯಲ್ಲಿರುವ ಕೋವಿಡ್‌ ಲಸಿಕೆಗಳನ್ನು ವಯಸ್ಕರಿಗೆ ಮಾತ್ರವೇ ನೀಡಲಾಗುತ್ತಿದೆ.