*   ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಬೀದಿಗಿಳಿದ ಜನರು *  ಲಂಕಾ ಪ್ರಧಾನಿಯಾಗಿ ವಿಕ್ರಮಸಿಂಘೆ ಅಧಿಕಾರ ಸ್ವೀಕಾರ*  ಪ್ರಧಾನಿ ನೇಮಕಾತಿ ಜನಾದೇಶಕ್ಕೆ ವಿರುದ್ಧ: ವಿಪಕ್ಷಗಳ ಕಿಡಿ 

ನವದೆಹಲಿ(ಮೇ.15):  ಶ್ರೀಲಂಕಾದಲ್ಲಿ(Sri Lanka) ನಡೆಯುತ್ತಿರುವ ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟಿನ ನಡುವೆಯೇ ಜನರು ಸರ್ಕಾರದ ವಿರುದ್ಧ ಮತ್ತೊಮ್ಮೆ ಹೊಸ ಪ್ರತಿಭಟನೆಯನ್ನು ಆರಂಭಿಸಿದ್ದಾರೆ. ರಾಜಧಾನಿ ಕೊಲೊಂಬೊದಲ್ಲಿ ಕರ್ಫ್ಯೂ ಹಿಂಪಡೆದ ಬೆನ್ನಲ್ಲೇ, ಕೈಯಲ್ಲಿ ಖಾಲಿ ಗ್ಯಾಸ್‌ ಸಿಲಿಂಡರ್‌ ಹಿಡಿದು ಜನರು ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗುತ್ತ ಬೀದಿಗಿಳಿದಿದ್ದಾರೆ. ‘ಮನೆಯಲ್ಲಿ ಗ್ಯಾಸ್‌(Gas) ಇಲ್ಲ, ತಿನ್ನಲು ಏನೂ ಇಲ್ಲ. ಕಳೆದ 2 ತಿಂಗಳಿನಿಂದ ನಮಗೆ ಗ್ಯಾಸ್‌ ಪೂರೈಕೆಯನ್ನು ಮಾಡಲಾಗುತ್ತಿಲ್ಲ’ ಎಂದು ಪ್ರತಿಭಟನಾಕಾರರು ದೂರಿದ್ದಾರೆ.

ಪ್ರಧಾನಿ ಮಹಿಂದಾ ರಾಜಪಕ್ಸೆಯವರ(Mahinda Rajapaksa) ರಾಜೀನಾಮೆ ಬೆನ್ನಲ್ಲೇ ದೇಶದಲ್ಲಿ ನಡೆದ ಹಿಂಸಾಚಾರದಲ್ಲಿ(Violence) ಸುಮಾರು 9 ಜನರು ಬಲಿಯಾಗಿದ್ದರು. ಹೊಸ ಪ್ರಧಾನಿ ರನಿಲ್‌ ವಿಕ್ರಮಸಿಂಘೆ(Ranil Wickremesinghe) ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ ಹೊಸ ಸರ್ಕಾರ ರಚನೆ ಮಾಡಲಿದ್ದು, ಈ ನಡುವೆ ಅಗತ್ಯ ವಸ್ತುಗಳ ಖರೀದಿಗೆ ಅನುಮತಿಸಲು ದೇಶಾದ್ಯಂತ ಕರ್ಫ್ಯೂವನ್ನು(Curfew) 12 ಗಂಟೆಗಳ ಕಾಲ ಹಿಂಪಡೆಯಲಾಗಿತ್ತು. ಈ ವೇಳೆ ಪ್ರತಿಭಟನಾಕಾರರು ಖಾಲಿ ಸಿಲಿಂಡರ್‌ ಹಿಡಿದು ಪ್ರತಿಭಟನೆ ನಡೆಸಿದ್ದು, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯ ನೌಕಾನೆಲೆಯಿಂದ ಮಹಿಂದಾ ಹೊರಬರಲ್ಲ!

ಲಂಕಾ ಪ್ರಧಾನಿಯಾಗಿ ವಿಕ್ರಮಸಿಂಘೆ ಅಧಿಕಾರ ಸ್ವೀಕಾರ

ಕೊಲೊಂಬೊ: ದ್ವೀಪರಾಷ್ಟ್ರ ಶ್ರೀಲಂಕಾದ ನೂತನ ಪ್ರಧಾನಿಯಾಗಿ(Prime Minister) ರನಿಲ್‌ ವಿಕ್ರಮಸಿಂಘೆ 6ನೇ ಬಾರಿಗೆ ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ. ಈ ನಡುವೆ ವಿಪಕ್ಷಗಳಾದ ಎಸ್‌ಜೆಪಿ ಹಾಗೂ ಜೆವಿಪಿ ಪ್ರಧಾನಿ ನೇಮಕಾತಿಯು ಜನಾದೇಶಕ್ಕೆ ವಿರುದ್ಧವಾಗಿರುವುದರಿಂದÜ ತಾವು ವಿಕ್ರಮಸಿಂಘೆ ಅವರಿಗೆ ಬೆಂಬಲ ನೀಡುವುದಿಲ್ಲ ಎಂದು ಘೋಷಿಸಿವೆ.

ಭೀಕರ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ನಡೆದ ನಂತರ ಮಹಿಂದಾ ರಾಜಪಕ್ಸೆ ಅವರು ಪ್ರಧಾನಿ ಸ್ಥಾನದಿಂದ ರಾಜೀನಾಮೆ ನೀಡಿದ್ದರು. ಗುರುವಾರ ಯುನೈಟೆಡ್‌ ನ್ಯಾಷನಲ್‌ ಪಕ್ಷದ ನಾಯಕರಾದ ವಿಕ್ರಮಸಿಂಘೆ ಅವರನ್ನು ಶ್ರೀಲಂಕಾದ 26ನೇ ಪ್ರಧಾನಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಮಾತನಾಡಿದ ರನಿಲ್‌, ‘ಗೊಟಗೋಗಮಾ ಹೋರಾಟ (ಅಧ್ಯಕ್ಷ ಗೊಟಬಯ ಅವರ ರಾಜೀನಾಮೆಗೆ ಹೋರಾಟ)ಮುಂದುವರೆಯಬೇಕು. ಈ ಹೋರಾಟದಲ್ಲಿ ತಾವು ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ಹೋರಾಟಗಾರರಿಗೆ ಪೊಲೀಸರು ಯಾವುದೇ ತಡೆಯೊಡ್ಡುವುದಿಲ್ಲ. ಹೋರಾಟ ಮುಂದುವರೆಯಲಿ’ ಎಂದಿದ್ದಾರೆ.

ಶ್ರೀಲಂಕಾ ಜನರ ಕಿಚ್ಚಿಗೆ ಮಹಿಂದಾ ಮನೆ, ಐಷಾರಾಮಿ ಕಾರುಗಳು ಬೂದಿ!

ಈ ನಡುವೆ ‘ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ(General Election) ಒಂದು ಸ್ಥಾನವನ್ನು ಗೆಲ್ಲದ ರನಿಲ್‌ ಅವರನ್ನು ಪ್ರಧಾನಿಯಾಗಿ ನೇಮಿಸಿದ್ದು ಜನಾದೇಶದ ವಿರುದ್ಧವಾಗಿದೆ’ ಎಂದು ವಿಪಕ್ಷಗಳು ಕಿಡಿಕಾರಿವೆ. 54 ಸದಸ್ಯರ ಬಲವುಳ್ಳ ಸಮಾಗಿ ಜನ ಬಲವೇಗಯಾ ಪಕ್ಷ, 3 ಸದಸ್ಯರ ಬಲ ಹೊಂದಿದ ಜನತಾ ವಿಮುಕ್ತಿ ಪೆರುಮಾನಾ ಹಾಗೂ 10 ಸದಸ್ಯರ ಬಲ ಹೊಂದಿದ ತಮಿಳು ನ್ಯಾಷನಲ್‌ ಅಲೈಯನ್ಸ್‌ ಪಕ್ಷಗಳು ತಾವು ರನಿಲ್‌ಗೆ ಬೆಂಬಲ ಸೂಚಿಸುವುದಿಲ್ಲ ಎಂದು ಘೋಷಿಸಿವೆ. ರಾಜಪಕ್ಸೆ ಕುಟುಂಬದೊಂದಿಗೆ ಆಪ್ತ ಸಂಬಂಧ ಹೊಂದಿದ ರನಿಲ್‌ಗೆ ಪ್ರಸ್ತುತ ವಿಪಕ್ಷಗಳಿಂದ ಅಥವಾ ಜನರಿಂದ ಹೆಚ್ಚಿನ ಬೆಂಬಲ ವ್ಯಕ್ತವಾದಂತಿಲ್ಲ. ಹೀಗಾಗಿ ಸಂಸತ್ತಿನಲ್ಲಿ ಅವರು 225 ಸದಸ್ಯರ ಬಹುಮತ ಸಾಬೀತು ಪಡಿಸುವಲ್ಲಿ ಯಶಸ್ವಿಯಾಗುತ್ತಾರೆಯೇ ಎಂಬುದು ಕುತೂಹಲ ಕೆರಳಿಸಿದೆ.

1993-94ರಲ್ಲಿ ಅಧ್ಯಕ್ಷ ರಣಸಿಂಘೆ ಪ್ರೇಮದಾಸ ಅವರ ಹತ್ಯೆಯ ನಂತರ ರನಿಲ್‌ ಮೊಟ್ಟ ಮೊದಲ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ನಂತರ 2001-2004ರ ಅವಧಿಗೆ ಅವರು ಮತ್ತೊಮ್ಮೆ ಪ್ರಧಾನಿಯಾದರು. 2015ರಲ್ಲಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಅವಧಿಯಲ್ಲಿ ರಚನೆಯಾದ ಸಮ್ಮಿಶ್ರ ಸರ್ಕಾರದಲ್ಲಿ ಪ್ರಧಾನಿಯಾಗಿ ರನಿಲ್‌ ನೇಮಕವಾದರು. 2015ರ ಸಾರ್ವತ್ರಿಕ ಚುನಾವಣೆಯಲ್ಲಿ ಜನರು ಅವರನ್ನು ಗೆಲ್ಲಿಸುವ ಮೂಲಕ ನೇಮಕಾತಿಯನ್ನು ಅನುಮೋದಿಸಿದರು. ಡಿ. 2018ರಲ್ಲಿ ಮತ್ತೊಮ್ಮೆ ಪ್ರಧಾನಿಯಾಗಿ ನೇಮಕವಾದರು. ಆದರೆ ನವೆಂಬರ್‌ 2019ರಲ್ಲಿ ಯುಎನ್‌ಪಿ ಅಧ್ಯಕ್ಷೀಯ ಅಭ್ಯರ್ಥಿ ಚುನಾವಣೆಯಲ್ಲಿ ಸೋತ ನಂತರ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.