ಇಸ್ಲಾಮಾಬಾದ್(ನ.04): ಫ್ರಾನ್ಸ್‌ನ ಶಿಕ್ಷಕರೊಬ್ಬರು ಪ್ರವಾದಿ ಮಹಮ್ಮದ್‌ರ ವ್ಯಂಗ್ಯಚಿತ್ರ ಪ್ರದರ್ಶಿಸಿದ್ದಕ್ಕೆ ಬಲಿಯಾದ ಬೆನ್ನಲ್ಲೇ, ಪಾಕಿಸ್ತಾನದ ಶಾಲೆಯೊಂದರಲ್ಲಿ ಹೆಣ್ಣು ಮಕ್ಕಳಿಗೆ ಶಿರಚ್ಛೇದದ ಕುರಿತು ಪಾಠ ಮಾಡಿರುವ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಕುರಿತ 2 ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದೆ. ಜೊತೆಗೆ ಪಾಕ್‌ನ ಧಾರ್ಮಿಕ ಶಾಲೆಯೊಂದರಲ್ಲಿ ನಡೆದ ಈ ಬೆಳವಣಿಗೆ ಕುರಿತು ವ್ಯಾಪಕ ಖಂಡನೆಯೂ ವ್ಯಕ್ತವಾಗಿದೆ.

ಮೊದಲ ವಿಡಿಯೋದಲ್ಲಿ ಶಿಕ್ಷಕಿಯೊಬ್ಬಳು ‘ಪ್ರವಾದಿ ಮಹಮ್ಮದ್‌ರಿಗೆ ಅವಮಾನ ಮಾಡುವವರಿಗೆ ಶಿರಚ್ಛೇದವೊಂದೇ ಸರಿಯಾದ ಶಿಕ್ಷೆ ಎಂದು ಬಾಲಕಿಯರಿಗೆ ಹೇಳಿಕೊಡುತ್ತಾಳೆ. ಬಳಿಕ ಕೈಯಲ್ಲಿ ಖಡ್ಗವೊಂದನ್ನು ಹಿಡಿದಿರುವ ಶಿಕ್ಷಕಿ ಅದರ ಮೂಲಕ ಪ್ರತಿಕೃತಿಯೊಂದರ ಶಿರಚ್ಛೇದ ಮಾಡುತ್ತಾಳೆ. ಅದರ ಬೆನ್ನಲ್ಲೇ ಗುಲಾಬಿ ಬಣ್ಣದ ಬಟ್ಟೆಧರಿಸಿರುವ ಬಾಲಕಿಯರು ಶಿರಚ್ಛೇದಕ್ಕೆ ಸಂಬಂಧಿಸಿದ ಘೋಷಣೆಗಳನ್ನು ಕೂಗುವುದು ಕಂಡುಬರುತ್ತದೆ.

ಈ ವಿಡಿಯೋದ ಎರಡನೇ ಭಾಗದಲ್ಲಿ ಮಹಿಳೆಯೊಬ್ಬಳು ದ್ವೇಷದ ಭಾಷಣ ಮಾಡಿ, ಪ್ರವಾದಿ ಮಹಮ್ಮದ್‌ರನ್ನು ಅವಮಾನ ಮಾಡಿದವರು ಮುಂದೆ ಬಂದು ತನ್ನ ಅನುಯಾಯಿಗಳನ್ನು ಎದುರಿಸುವಂತೆ ಸವಾಲು ಹಾಕಿದ್ದಾಳೆ. ಅಲ್ಲದೇ ಪ್ರವಾದಿ ಮಹಮ್ಮದ್‌ರ ಮೇಲಿನ ದಾಳಿ ಸಾವು ಮತ್ತು ಬದುಕಿನ ವಿಷಯವಾಗಿದ್ದು, ಪ್ರತೀಕಾರ ತೀರಿಸಿಕೊಳ್ಳಲು ರಕ್ತ ಹರಿಸಲೂ ಸಿದ್ಧವಿರುವುದಾಗಿ ಆಕೆ ಘೋಷಿಸಿದ್ದಾಳೆ.