* ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ‘ಆಡಳಿತ’ ಆರಂಭ* ಅಫ್ಘಾನಿಸ್ತಾನಕ್ಕೆ ಪಾಕ್‌ನ ಲಷ್ಕರ್‌, ಜೈಷ್‌ ಉಗ್ರರು ಶಿಫ್ಟ್‌* ಅಲ್ಲಿಂದಲೇ ಭಾರತದ ವಿರುದ್ಧ ದಾಳಿಗೆ ಸಂಚು

ಇಸ್ಲಾಮಾಬಾದ್‌(ಆ.23): ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ‘ಆಡಳಿತ’ ಆರಂಭವಾಗಿರುವ ಬೆನ್ನಲ್ಲೇ, ತಾಲಿಬಾನ್‌ಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನದ ಉಗ್ರ ಸಂಘಟನೆಗಳ ನೆಲೆಗಳು ಆಫ್ಘನ್‌ಗೆ ಸ್ಥಳಾಂತರ ಆಗುತ್ತಿರುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಪೂರ್ವ ಅಫ್ಘಾನಿಸ್ತಾನಕ್ಕೆ ಲಷ್ಕರ್‌ ಎ ತೊಯ್ಬಾ ಹಾಗೂ ಜೈಷ್‌ ಎ ಮೊಹಮ್ಮದ್‌ ಸಂಘಟನೆಗಳ ನೆಲೆಗಳು ಸ್ಥಳಾಂತರಗೊಂಡಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ತಾಲಿಬಾನ್‌ನ ‘ಹಕಾನಿ ನೆಟ್‌ವರ್ಕ್’ ಉಗ್ರರೊಂದಿಗೆ ಪಾಕ್‌ ಉಗ್ರರು ಅವಿನಾಭಾವ ಸಂಬಂಧ ಹೊಂದಿದ್ದು, ಹಕಾನಿ ಸಹಾಯ ಪಡೆದುಕೊಂಡು ಭಯೋತ್ಪಾದಕ ಜಾಲ ಆರಂಭಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿ ತಿಳಿಸಿದೆ.

ಇನ್ನು ತಾಲಿಬಾನ್‌ನಲ್ಲಿ ಕೆಲವು ಲಷ್ಕರ್‌ ಕಮಾಂಡರ್‌ಗಳು ಕೂಡ ಕಾರ್ಯನಿರ್ವಹಿಸಲು ಆರಂಭಿಸಿದ್ದಾರೆ. ಪೇಶಾವರದಲ್ಲಿ ತರಬೇತಿಯೂ ನಡೆಯುತ್ತಿದೆ. ತಾಲಿಬಾನ್‌ ಕೈಗೆ ಬಂದ ಶಸ್ತ್ರಗಳು ಲಷ್ಕರ್‌ಗೆ ಹಸ್ತಾಂತರ ಆಗುತ್ತಿವೆ. ಜಮ್ಮು-ಕಾಶ್ಮೀರದಲ್ಲಿ ಈ ಮೂಲಕ ದಾಳಿ ನಡೆಸಲು ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐ ಹುನ್ನಾರ ನಡೆಸಿದೆ ಎಂದು ಮೂಲಗಳು ಹೇಳಿವೆ.