‘ಮಿತ್ರ’ ಚೀನಾದ ಟಿಕ್‌ಟಾಕ್ ಆ್ಯಪ್ ನಿಷೇಧಿಸಿದ ಪಾಕ್: ಡ್ರ್ಯಾಗನ್‌ಗೆ ಶಾಕ್!
ಚೀನಾ ತನ್ನ ಪರಮಾಪ್ತ ದೇಶವಾಗಿದ್ದರೂ ಪಾಕಿಸ್ತಾನ ಕೊಟ್ಟ ಶಾಕ್| ‘ಮಿತ್ರ’ ಚೀನಾದ ಟಿಕ್‌ಟಾಕ್ ಆ್ಯಪ್ ನಿಷೇಧಿಸಿದ ಪಾಕ್
ಇಸ್ಲಾಮಾಬಾದ್(ಅ.10): ಚೀನಾ ತನ್ನ ಪರಮಾಪ್ತ ದೇಶವಾಗಿದ್ದರೂ, ಆ ದೇಶದ ಪ್ರಸಿದ್ಧ ಸಾಮಾಜಿಕ ಜಾಲತಾಣವಾಗಿರುವ ಟಿಕ್‌ಟಾಕ್ ಅನ್ನು ಪಾಕಿಸ್ತಾನ ನಿಷೇಧಿಸಿರುವುದು ಅಚ್ಚರಿಗೆ ಕಾರಣವಾಗಿದೆ
ಆನ್‌ಲೈನ್ ಕುರಿತಾದ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣಕ್ಕೆ ಸರ್ಕಾರ ಸೂಚಿಸಿದ ಸೂಚನೆಗಳನ್ನು ಟಿಕ್‌ಟಾಕ್ ಅನುಸರಿಸುತ್ತಿಲ್ಲ. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಟಿಕ್‌ಟಾಕ್‌ನಲ್ಲಿ ಬರುತ್ತಿರುವ ಅನೈತಿಕ ಮತ್ತು ಅಸಭ್ಯವಾದ ವಿಡಿಯೋಗಳ ಬಗ್ಗೆ ಜನ ಬೇಸತ್ತಿದ್ದಾರೆ. ಹೀಗಾಗಿ, ಚೀನೀ ಆ್ಯಪ್ ಅನ್ನು ನಿಷೇಧಿಸಲಾಗಿದೆ ಎಂದು ಪಾಕಿಸ್ತಾನ ಸುದ್ದಿವಾಹಿನಿ ಜಿಯೋ ನ್ಯೂಸ್ ವರದಿ ಮಾಡಿದೆ.
ಅಮೆರಿಕದಲ್ಲಿ ಟಿಕ್‌ಟಾಕ್ ಬ್ಯಾನ್ ಮತ್ತಷ್ಟು ವಿಳಂಬ
ಚೀನಾ ಮೂಲದ ಜನಪ್ರಿಯ ಟಿಕ್‌ಟಾಕ್ ಆ್ಯಪ್ ಅನ್ನು ಭಾಗಶಃ ನಿಷೇಧಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ಜಾರಿಯನ್ನು ಇಲ್ಲಿ ನ್ಯಾಯಾಲಯ ಮುಂದೂಡಿದೆ. ಹೀಗಾಗಿ, ಟ್ರಂಪ್ ಕೆಂಗಣ್ಣಿಗೆ ಗುರಿಯಾಗಿದ್ದ ಟಿಕ್‌ಟಾಕ್ ಆ್ಯಪ್ ಸದ್ಯಕ್ಕೆ ಬ್ಯಾನ್‌ನಿಂದ ನಿರಾಳವಾಗಿದೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆ ಮುಕ್ತಾಯವಾಗಿ ಒಂದು ವಾರದ ಬಳಿಕ ಅಂದರೆ ನವೆಂಬರ್‌ನಲ್ಲಿ ಆ್ಯಪ್ ಮೇಲೆ ಸಂಪೂರ್ಣ ನಿಷೇಧ ಜಾರಿಯಾಗಲಿದೆ. ಹೀಗಾಗಿ, ಅದುವರೆಗೂ ಟಿಕ್‌ಟಾಕ್ ಆ್ಯಪ್‌ನ ನಿಷೇಧವನ್ನು ಮುಂದೂಡಲಾಗಿದೆ ಎಂದು ಕೊಲಂಬಿಯಾ ಜಿಲ್ಲಾ ನ್ಯಾಯಾಧೀಶ ಕಾಲ್‌ರ್ ನಿಕೋಲಸ್ ತಿಳಿಸಿದ್ದಾರೆ.
ಅಲ್ಲದೆ, ನವೆಂಬರ್‌ನಲ್ಲಿ ಜಾರಿಯಾಗಲಿರುವ ಟಿಕ್‌ಟಾಕ್ ನಿಷೇಧವನ್ನು ತಡೆಹಿಡಿಯಲಾಗದು ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗಷ್ಟೇ ರಾಷ್ಟ್ರೀಯ ಭದ್ರತೆಗೆ ಭೀತಿಯೊಡ್ಡುವ ಚೀನಾ ಮೂಲದ ಟಿಕ್‌ಟಾಕ್ ಅನ್ನು ದೇಶಾದ್ಯಂತ ಬ್ಯಾನ್ ಆಗಬೇಕು ಅಥವಾ ಅಮೆರಿಕದ ಉದ್ಯಮ ಸಂಸ್ಥೆಗಳ ಪಾಲಾಗಬೇಕು ಎಂದು ಟ್ರಂಪ್ ಪ್ರತಿಪಾದಿಸಿದ್ದರು.