ಲಂಡನ್‌(ಮೇ.16): ಬ್ರಿಟನ್ನಿನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಕಂಡುಹಿಡಿಯುತ್ತಿರುವ ಕೊರೋನಾ ಲಸಿಕೆ ಮಂಗಗಳ ಮೇಲಿನ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನೀಡಿದೆ. ಛಡಾಕ್ಸ್‌1 ಹೆಸರಿನ ಈ ಲಸಿಕೆಯನ್ನು 6 ಮಂಗಗಳಿಗೆ ನೀಡಿ, ನಂತರ ಅವುಗಳಿಗೆ ಕೊರೋನಾ ವೈರಸ್‌ ತಗಲುವಂತೆ ಮಾಡಲಾಗಿತ್ತು. ಆಗ ಅವುಗಳ ರೋಗನಿರೋಧಕ ವ್ಯವಸ್ಥೆ ಚೆನ್ನಾಗಿ ಕೆಲಸ ಮಾಡಿ, ವೈರಸ್‌ನಿಂದ ಅವುಗಳ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ.

ಮಂಗಗಳಿಗೆ ಕೇವಲ ಒಂದೊಂದೇ ಡೋಸ್‌ ಲಸಿಕೆ ನೀಡಲಾಗಿತ್ತು. ಅಷ್ಟರಿಂದಲೇ ಅವುಗಳ ಶ್ವಾಸಕೋಶಕ್ಕೆ ಕೊರೋನಾದಿಂದ ಹಾನಿಯಾಗುವುದು ತಪ್ಪಿದೆ. ಮಂಗಗಳಲ್ಲಿ ವೈರಲ್‌ ಲೋಡ್‌ ಕೂಡ ಕಡಿಮೆಯಾಗಿದೆ. ಅಲ್ಲದೆ ಕೊರೋನಾ ವೈರಸ್‌ ಪ್ರಭಾವದಿಂದ ಅವುಗಳಲ್ಲಿ ನ್ಯುಮೋನಿಯಾ ಕಾಣಿಸಿಕೊಂಡಿಲ್ಲ. ಇನ್ನು, ಕೊರೋನಾ ಲಸಿಕೆಯಿಂದ ಮಂಗಗಳ ಮೇಲೆ ಯಾವುದೇ ಅಡ್ಡಪರಿಣಾಮವೂ ಉಂಟಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಇದೇ ಲಸಿಕೆಯನ್ನು ಈಗಾಗಲೇ ಮನುಷ್ಯರ ಮೇಲೂ ಪ್ರಯೋಗ ಮಾಡಲಾಗುತ್ತಿದೆ. ಅಲ್ಲೂ ಇದೇ ರೀತಿಯ ಗುಣಾತ್ಮಕ ಫಲಿತಾಂಶ ಬಂದರೆ ಕೊರೋನಾ ನಿಯಂತ್ರಣಕ್ಕೆ ಮಹತ್ವದ ಲಸಿಕೆ ಸಿಕ್ಕಂತಾಗುತ್ತದೆ.