ಲಂಡನ್‌(ಫೆ.14): ಆರ್ಕ್ಸ್‌ಫರ್ಡ್‌ ವಿವಿ ಮತ್ತು ಆಸ್ಟ್ರಾಜನೆಕಾ ಕಂಪನಿ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೋವಿಡ್‌ ಲಸಿಕೆಯನ್ನು ಇದೇ ಮೊದಲ ಬಾರಿಗೆ ಮಕ್ಕಳ ಮೇಲೂ ಪ್ರಯೋಗಿಸಲು ನಿರ್ಧರಿಸಲಾಗಿದೆ.

ಮೊದಲ ಹಂತದಲ್ಲಿ 6ರಿಂದ 17ರ ವಯೋಮಾನದ 300 ಸ್ವಯಂಸೇವಕರ (ಮಕ್ಕಳ) ಮೇಲೆ ಪ್ರಯೋಗ ನಡೆಸಲು ನಿರ್ಧರಿಸಲಾಗಿದೆ ಎಂದು ಆರ್ಕ್ಸ್‌ಫರ್ಡ್‌ ಲಸಿಕೆ ಪ್ರಯೋಗದ ಮುಖ್ಯ ಸಂಶೋಧಕ ಆ್ಯಂಡ್ರೂ ಪೊಲ್ಲಾರ್ಡ್‌ ಪ್ರಕಟಿಸಿದ್ದಾರೆ.

ಬಹುತೇಕ ಮಕ್ಕಳು ತೀವ್ರತರನಾದ ಕೋವಿಡ್‌ ಸೋಂಕಿಗೆ ತುತ್ತಾಗುವುದಿಲ್ಲ. ಆದರೂ ಮಕ್ಕಳ ಮೇಲೆ ಲಸಿಕೆಯ ಸುರಕ್ಷತೆ ಮತ್ತು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಅಭಿವೃದ್ಧಿಯ ಬಗ್ಗೆ ಪರಿಶೀಲನೆ ನಡೆಸಲು ಇಂಥ ಪ್ರಯೋಗ ಅಗತ್ಯ. ಜೊತೆಗೆ ಕೆಲ ಮಕ್ಕಳಿಗೆ ಲಸಿಕೆ ಲಾಭವಾಗಬಹುದು. ಅಲ್ಲದೆ ಮುಂದಿನ ದಿನಗಳಲ್ಲಿ ಸಾಮೂಹಿಕ ಲಸಿಕಾ ಅಭಿಯಾನದಲ್ಲಿ ಮಕ್ಕಳನ್ನೂ ಭಾಗಿ ಮಾಡುವ ಬಗ್ಗೆ ಸರ್ಕಾರಗಳ ಯೋಜಿಸಲು ಇದು ಅನುವು ಮಾಡಿಕೊಡಲಿದೆ ಎಂದು ಪೊಲ್ಲಾರ್ಡ್‌ ಹೇಳಿದ್ದಾರೆ.

ಫೈಝರ್‌ ಕಂಪನಿ ಕಳೆದ ಅಕ್ಟೋಬರ್‌ನಿಂದಲೇ ಮಕ್ಕಳ ಮೇಲೆ ಪ್ರಯೋಗ ಆರಂಭಿಸಿದೆ. ಇನ್ನು ಮಾರ್ಡೆನಾ ಡಿಸೆಂಬರ್‌ನಲ್ಲಿ ಇಂಥ ಪ್ರಯೋಗ ಆರಂಭಿಸಿದೆ.