ಪರೀಕ್ಷೆ ಪ್ರಮಾಣ, ಲಸಿಕಾಕರಣ ಹೆಚ್ಚಿಸಿ: WHO ಸಲಹೆ ಇದು ಕೊರೋನಾದ ಅಂತಿಮ ತಳಿಯಲ್ಲ, ಎಚ್ಚರಿಕೆ ಇರಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಶೇ.8 ರಷ್ಟುಏರಿಕೆ 

ನವದೆಹಲಿ(ಮಾ.22): ಒಮಿಕ್ರೋನ್‌ ಸೌಮ್ಯವಾದದ್ದು, ಇದೇ ಕೊರೋನಾದ ಕೊನೆಯ ತಳಿ ಮೊದಲಾದ ತಪ್ಪು ಕಲ್ಪನೆಗಳ ಕಾರಣದಿಂದಾಗಿ ಸರ್ಕಾರಗಳು ಕೋವಿಡ್‌ ಪರೀಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿವೆ. ಇದು ಸೋಂಕು ಹೆಚ್ಚಲು ಕಾರಣವಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತ ಪಡಿಸಿದೆ.

‘ಕೊರೋನಾ ವೈರಸ್‌ ರೂಪಾಂತರಿಯಲ್ಲಿ ಒಮಿಕ್ರೋನ್‌ ಸೌಮ್ಯವಾದದ್ದು, ಒಮಿಕ್ರೋನ್‌ ತಳಿಯೇ ಕೊರೋನಾದ ಕೊನೆಯ ರೂಪಾಂತರಿಯಾಗಿದೆ. ಒಮಿಕ್ರೋನ್‌ನೊಂದಿಗೆ ಕೋವಿಡ್‌ ಸಾಂಕ್ರಾಮಿಕವೂ ಅಂತ್ಯಗೊಳ್ಳುತ್ತದೆ ಎಂದು ಜನರು ತಿಳಿದುಕೊಂಡಿದ್ದಾರೆ. ಇದರಿಂದಾಗಿ ಕೋವಿಡ್‌ ಪ್ರಕರಣಗಳು ಏರುತ್ತಿದ್ದರೂ ಸರ್ಕಾರಗಳು ಕೋವಿಡ್‌ ಪರೀಕ್ಷೆಯ ಪ್ರಮಾಣದಲ್ಲಿ ಇಳಿಕೆ ಮಾಡುತ್ತಿದೆ. ಈ ನಿರ್ಲಕ್ಷ್ಯ ಧೋರಣೆಯಿಂದಾಗಿ ಕಳೆದ ಒಂದೇ ವಾರ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಶೇ.8 ರಷ್ಟುಏರಿಕೆ ಕಂಡು ಬಂದಿದ್ದು, ಜಗತ್ತಿನಾದ್ಯಂತ 1.1 ಕೋಟಿ ಹೊಸ ಪ್ರಕರಣಗಳು ವರದಿಯಾಗಿವೆ’ ಎಂದು ಕೊರೋನಾದ ಡಬ್ಲ್ಯುಎಚ್‌ಒದ ಕೋವಿಡ್‌ ತಾಂತ್ರಿಕ ಮುಖ್ಯಸ್ಥೆ ಮಾರಿಯಾ ವಾನ್‌ ಕೆರ್ಕೋವ್‌ ಹೇಳಿದ್ದಾರೆ.

ಕರ್ನಾಟಕದಲ್ಲಿ ಒಮಿಕ್ರೋನ್‌ನ ಉಪತಳಿ ಹೆಚ್ಚಳ: ಮತ್ತೆ ಹೆಚ್ಚಿದ ಆತಂಕ

‘ಬ್ರಿಟನ್‌, ಆಸ್ಟ್ರಿಯಾ, ಜರ್ಮನಿ, ಸ್ವಿಜರ್ಲೆಂಡ್‌, ನೆದರ್‌ಲೆಂಡ್‌ಗಳಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಏರಿಕೆಯಾಗುತ್ತಿದೆ. ಯುರೋಪಿನಲ್ಲಿ ಕೋವಿಡ್‌ ಮತ್ತೊಂದು ಅಲೆಯು ಸುನಿಶ್ಚಿತವಾಗಿದೆ. ಕಳೆದ 30 ದಿನಗಳಲ್ಲಿ ನಡೆಸಲಾದ ಪರೀಕ್ಷೆಗಳಲ್ಲಿ ಶೇ.99.9 ರಷ್ಟುಒಮಿಕ್ರೋನ್‌ ಪ್ರಕರಣಗಳು ಪತ್ತೆಯಾಗಿವೆ. ಜಿನೋಮ್‌ ಸೀಕ್ವೆನ್ಸಿಂಗ್‌ ಪರೀಕ್ಷೆಯಲ್ಲಿ ಶೇ. 75 ರಷ್ಟುಒಮಿಕ್ರೋನ್‌ ಉಪತಳಿ ಬಿಎ.2 ಹಾಗೂ ಶೇ. 25 ರಷ್ಟುಬಿಎ.1 ಪತ್ತೆಯಾಗಿದೆ. ಆದರೆ ಸರ್ಕಾರಗಳು ಕೋವಿಡ್‌ ಪರೀಕ್ಷೆ ಪ್ರಮಾಣ ಕಡಿತಗೊಳಿಸಿದ್ದರಿಂದ ಒಮಿಕ್ರೋನ್‌ ಸೋಂಕಿತರನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತಿದೆ’ ಎಂದು ಕೆರ್ಕೋವ್‌ ಹೇಳಿದ್ದಾರೆ.

‘ಹೀಗಾಗಿ ಕೋವಿಡ್‌ ಪರೀಕ್ಷೆಯ ಪ್ರಮಾಣ ಹೆಚ್ಚಿಸಬೇಕು. ಲಸಿಕೆ ಒಮಿಕ್ರೋನ್‌ ವಿರುದ್ಧವೂ ಪರಿಣಾಮಕಾರಿಯಾಗಿರುವುದರಿಂದ ಜನರು ಕಡ್ಡಾಯವಾಗಿ ಲಸಿಕೆ ಪಡೆದುಕೊಳ್ಳಬೇಕು’ ಎಂದು ಕೆರ್ಕೋವ್‌ ಸಲಹೆ ನೀಡಿದ್ದಾರೆ.

ಜಾಗತಿಕ ಮಟ್ಟದಲ್ಲಿ ಮತ್ತೆ ಕೋವಿಡ್‌ ಸೋಂಕಿನ ಪ್ರಮಾಣದಲ್ಲಿ ಭಾರೀ ಏರಿಕೆ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ), ಯಾವುದೇ ದೇಶಗಳು ಸೋಂಕಿನ ಬಗ್ಗೆ ನಿರ್ಲಕ್ಷ್ಯ ವಹಿಸದೇ ಎಚ್ಚರವಾಗಿರಬೇಕು. ಈಗಿನ ಪ್ರಕರಣಗಳು ಸುಳಿವು ಮಾತ್ರ. ಮುಂದೆ ಇನ್ನಷ್ಟುಸೋಂಕು ಹೆಚ್ಚಬಹುದು ಎಂದಿದೆ.

Coronavirus: ಕೊರಿಯಾ, ಚೀನಾ, ಹಾಂಕಾಂಗಲ್ಲಿ ಕೋವಿಡ್‌ ಕೊಂಚ ಇಳಿಕೆ

ಈ ಕುರಿತು ಹೇಳಿಕೆ ನೀಡಿರುವ ಡಬ್ಲ್ಯುಎಚ್‌ಒದ ಮುಖ್ಯಸ್ಥ ಟೆಡ್ರೋಸ್‌ ಆಧನೋಮ್‌ ಗೇಬ್ರಿಯೇಸಸ್‌ ‘ಸತತ ಒಂದು ತಿಂಗಳ ಕುಸಿತದ ಹಾದಿಯ ಬಳಿಕ ಕಳೆದ ವಾರ ವಿಶ್ವದಾದ್ಯಂತ ಹೊಸ ಪ್ರಕರಣಗಳಲ್ಲಿ ಭಾರೀ ಏರಿಕೆಯಾಗಿದೆ. ಭಾರೀ ವೇಗದಲ್ಲಿ ಹರಡುವ ಒಮಿಕ್ರೋನ್‌ ವೈರಸ್‌ ತಳಿ ಹಾವಳಿ, ಒಮಿಕ್ರೋನ್‌ನ ಉಪತಳಿ ಬಿಎ.2 ಪ್ರಮಾಣ ಹೆಚ್ಚಳ, ಸೋಂಕು ಇಳಿಕೆಯಾಗಿದೆಯೆಂದು ಸಾರ್ವಜನಿಕ ನಿರ್ಬಂಧ ಕ್ರಮಗಳನ್ನು ಹಿಂದಕ್ಕೆ ಪಡೆದಿದ್ದು, ಕೆಲ ದೇಶಗಳಲ್ಲಿ ಲಸಿಕೆ ವಿತರಣೆ ಪ್ರಮಾಣ ಕಡಿಮೆ ಇರುವುದು, ಸೋಂಕಿನ ಕುರಿತು ಕೆಲವೆಡೆ ಹಬ್ಬಿಸಲಾದ ಸುಳ್ಳು ಸುದ್ದಿಗಳು ಸೋಂಕಿನ ಪ್ರಮಾಣ ಏರಿಕೆಗೆ ಕಾರಣವಾಗಿದೆ. ಅದರಲ್ಲೂ ಬಹುತೇಕ ದೇಶಗಳಲ್ಲಿ ಸೋಂಕು ಪತ್ತೆ ಪ್ರಮಾಣ ಇಳಿಕೆಯಾಗಿರುವ ಹೊರತಾಗಿಯೂ ಇಷ್ಟೊಂದು ಪ್ರಮಾಣದಲ್ಲಿ ಕೇಸು ಪತ್ತೆಯಾಗುತ್ತಿದೆ ಎಂದರೆ, ಇದು ಬಹುದೊಡ್ಡ ಅಪಾಯದ ಸುಳಿವು’ ಎಂದು ಹೇಳಿದ್ದಾರೆ

ಜಗತ್ತಿನಾದ್ಯಂತ ಈಗ ಒಮಿಕ್ರೋನ್‌-2 ಅಲೆ!
ಒಂದೆಡೆ ಚೀನಾ ಹಾಗೂ ದಕ್ಷಿಣ ಕೊರಿಯಾದಂಥ ಪೂರ್ವ ಏಷ್ಯಾ ಮತ್ತು ಯುರೋಪ್‌ ದೇಶಗಳಲ್ಲಿ ಒಮಿಕ್ರೋನ್‌ನ ‘ಬಿಎ.2’ ಉಪತಳಿ ಅಬ್ಬರಿಸಿ ಸೋಂಕು ಹೆಚ್ಚಿಸುತ್ತಿದ್ದರೆ, ಇನ್ನೊಂದೆಡೆ ಅಮೆರಿಕದಲ್ಲೂ ‘ಬಿಎ.2’ ಅಬ್ಬರ ಆರಂಭವಾಗಿದ್ದು, ಅಲ್ಲಿ ಲಾಕ್‌ಡೌನ್‌ ಹೇರುವ ಎಚ್ಚರಿಕೆ ನೀಡಲಾಗಿದೆ. ಇದು ವಿಶ್ವಾದ್ಯಂತ ಒಮಿಕ್ರೋನ್‌ನ 2ನೇ ಅಲೆ ಏಳುವ ಆತಂಕ ಹುಟ್ಟುಹಾಕಿದೆ.