* ತನ್ನ ನೌಕರರಿಗೆ ಹೊಸ ವಸ್ತ್ರ ಸಂಹಿತೆ ಜಾರಿಗೊಳಿಸಿದ ತಾಲಿಬಾನ್‌ ಸರ್ಕಾರ* ಪುರುಷ ನೌಕರರು ಗಡ್ಡವಿಲ್ಲದೆ ನೌಕರಿಗೆ ಬರುವಂತಿಲ್ಲ* ಪಾಶ್ಚಾತ್ಯ ಉಡುಗೆಗಳಿಗೂ ಕಡಿವಾಣ

ಕಾಬೂಲ್‌(ಏ.02): ಅಫ್ಘಾನಿಸ್ತಾನ ತಾಲಿಬಾನ್‌ ಸರ್ಕಾರ, ತನ್ನ ನೌಕರರಿಗೆ ಹೊಸ ವಸ್ತ್ರ ಸಂಹಿತೆ ಜಾರಿಗೊಳಿಸಿದ್ದು , ಆ ಪ್ರಕಾರ ಪುರುಷ ನೌಕರರು ಗಡ್ಡವಿಲ್ಲದೆ ನೌಕರಿಗೆ ಬರುವಂತಿಲ್ಲ ಎಂದು ಆದೇಶ ಹೊರಡಿಸಿದೆ.

ಜೊತೆಗೆ ಅವರಿಗೆ ಪಾಶ್ಚಾತ್ಯ ಉಡುಗೆಗಳಿಗೂ ಕಡಿವಾಣಹಾಕಲಾಗಿದ್ದು, ತಲೆಗೆ ಟೋಪಿ, ಉದ್ದನೆಯ ಪೈಜಾಮ ಮತ್ತು ಪ್ಯಾಂಟ್‌ ಬಳಸುವಂತೆ ಸೂಚನೆ ನೀಡಿದೆ. ಇಸ್ಲಾಮಿಕ್‌ ಧರ್ಮದ ಪ್ರಕಾರ ಪ್ರತಿದಿನ 6 ಬಾರಿ ಪ್ರಾರ್ಥನೆ ಮಾಡುವಂತೆ ಆದೇಶಿಸಲಾಗಿದೆ. ಕಾನೂನನ್ನು ಪಾಲಿಸದಿದ್ದರೆ ಅಂತಹ ನೌಕರರಿಗೆ ಕಚೇರಿ ಒಳಗೆ ಪ್ರವೇಶಿಸಲು ಅನುಮತಿ ನೀಡುವುದಿಲ್ಲ ಅಥವಾ ಅವರನ್ನು ಕೆಲಸದಿಂದ ವಜಾಗೊಳಿಸಲಾಗುವುದು ಎಂದು ತಾಲಿಬಾನ್‌ ತಿಳಿಸಿದೆ.

ಆಫ್ಘಾನ್ ಹೆಣ್ಣುಮಕ್ಕಳಿಗೆ ಆರನೇ ತರಗತಿಯೇ ಕೊನೆ

ಪ್ರಜಾಪ್ರಭುತ್ವ ಸರ್ಕಾರ ಪತನಗೊಳಿಸಿ ಅಧಿಕಾರಕ್ಕೆ ಬಂದ ವೇಳೆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವುದಾಗಿ ಬಡಾಯಿ ಕೊಚ್ಚಿಕೊಂಡಿದ್ದ ತಾಲಿಬಾನಿಗಳ ಬಣ್ಣ ಬಯಲಾಗಿದೆ. ಸರ್ಕಾರದ ಹಿಂದಿನ ಶಕ್ತಿಯಾಗಿರುವ ಮತೀಯವಾದಿ ತಾಲಿಬಾನಿ ನಾಯಕರ ಒತ್ತಡಕ್ಕೆ ಬಲಿಯಾಗಿರುವ ಸರ್ಕಾರ, ಹೆಣ್ಣು ಮಕ್ಕಳಿಗೆ 6ನೇ ತರಗತಿ ನಂತರದ ಶಾಲೆಗಳನ್ನು ತೆರೆಯದೆ ಇರಲು ನಿರ್ಧರಿಸಿದೆ.

ದೇಶದಲ್ಲಿ ಹೊಸ ಶೈಕ್ಷಣಿಕ ವರ್ಷ ಆರಂಭವಾಗಿ ಲಕ್ಷಾಂತರ ಹೆಣ್ಣು ಮಕ್ಕಳು 7ನೇ ತರಗತಿಗೆ ತೆರಳಲು ಸಜ್ಜಾಗಿರುವ ಹೊತ್ತಿನಲ್ಲೇ ತಾಲಿಬಾನ್‌ ಸರ್ಕಾರ ದಿಢೀರನೆ ಇಂಥದ್ದೊಂದು ಆಘಾತಕಾರಿ ನಿರ್ಧಾರ ಪ್ರಕಟಿಸಿದೆ. ಇದು ಈಗಾಗಲೇ ಶಿಕ್ಷಣ, ಆರೋಗ್ಯ ಸೇರಿ ವಿವಿಧ ವಲಯಗಳಲ್ಲಿ ವಿದೇಶಿ ಅನುದಾನವನ್ನೇ ನೆಚ್ಚಿಕೊಂಡಿರುವ ದೇಶಕ್ಕೆ ಮತ್ತೊಂದು ದೊಡ್ಡ ಹೊಡೆತ ನೀಡಲಿದೆ ಎನ್ನಲಾಗಿದೆ. ತಾಲಿಬಾನಿಗಳ ಈ ನಿರ್ಧಾರದಿಂದಾಗಿ ವಿದೇಶಗಳು ಅಷ್ಘಾನಿಸ್ತಾನಕ್ಕೆ ನೀಡುತ್ತಿದ್ದ ನೆರವು ಕಡಿತಗೊಳಿಸುವ ಇಲ್ಲವೇ ಸ್ಥಗಿತಗೊಳಿಸುವ ಸಾಧ್ಯತೆ ಇದೆ. ಹೀಗಾದಲ್ಲಿ ಈಗಾಗಲೇ ನೆಲಕಚ್ಚಿರುವ ದೇಶದ ಶಿಕ್ಷಣ ವಲಯ ಮತ್ತಷ್ಟುಅಧಃಪತನಗೊಳ್ಳಲಿದೆ ಎಂಬ ಆತಂಕ ವ್ಯಕ್ತವಾಗಿದೆ.

ವಾರದ ಹಿಂದಷ್ಟೇ ಹೇಳಿಕೆ ಬಿಡುಗಡೆ ಮಾಡಿದ್ದ ಶಿಕ್ಷಣ ಸಚಿವಾಲಯ, ಎಲ್ಲಾ ಮಕ್ಕಳಿಗೂ ಶಾಲೆಗೆ ಬರಲು ಸಿದ್ಧವಾಗಿರುವಂತೆ ಸೂಚಿಸಿತ್ತು. ಆದರೆ ಮಂಗಳವಾರ ಅದು ತನ್ನ ನಿರ್ಧಾರದಲ್ಲಿ ದಿಢೀರ್‌ ಬದಲಾವಣೆ ಮಾಡಿದೆ. ಈ ಕುರಿತು ಹೇಳಿಕೆ ನೀಡಿರುವ ತಾಲಿಬಾನ್‌ ಅಧಿಕಾರಿ ವಹೀದುಲ್ಲಾ ಹಾಶ್ಮಿ, ‘ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಶಾಲೆಗಳು ಮುಚ್ಚಿರಲಿವೆ. ಆದರೆ ಅವುಗಳನ್ನು ಶಾಶ್ವತವಾಗಿ ಮುಚ್ಚಲಾಗುತ್ತದೆ ಎಂದು ನಾವು ಹೇಳುತ್ತಿಲ್ಲ’ ಎಂದಿದ್ದಾರೆ.

ಜೊತೆಗೆ ‘ನಾವು ಕಟ್ಟಾಇಸ್ಲಾಮಿಕ್‌ವಾದಿಗಳಾದರೂ ಮಹಿಳೆಯರನ್ನು ಸಂಪೂರ್ಣವಾಗಿ ಶಿಕ್ಷಣದಿಂದ ವಂಚಿತರನ್ನಾಗಿಸಿಲ್ಲ. ಅವರನ್ನು ಕೆಲಸದಿಂದ ತೆಗೆದುಹಾಕಿಲ್ಲ. ಅರೋಗ್ಯ, ಶಿಕ್ಷಣ ಸಚಿವಾಲಯದಲ್ಲಿ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಮೊದಲಿನಂತೆ ಮಹಿಳೆಯರು ಬುರ್ಖಾ ಧರಿಸುವುದನ್ನು ಕಡ್ಡಾಯಗೊಳಿಸಲಾಗಿಲ್ಲ. ಕೇವಲ ತಮ್ಮ ತಲೆಯ ಭಾಗವನ್ನು ಮುಚ್ಚಿಕೊಳ್ಳಲು ಹಿಜಾಬ್‌ ಧರಿಸುವಂತೆ ತಿಳಿಸಲಾಗಿದೆ. ಆದರೆ ಆಪ್ಘನ್‌ ಗ್ರಾಮೀಣ ಭಾಗದಲ್ಲಿ ಜನರೇ ತಮ್ಮ ಹೆಣ್ಣುಮಕ್ಕಳನ್ನು ಉನ್ನತ ಶಿಕ್ಷಣಕ್ಕಾಗಿ ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಉನ್ನತ ಶಿಕ್ಷಣದ ವಿಚಾರವಾಗಿ ಮಹಿಳೆಯರಿಗೆ ಎಂದಿನಿಂದ ಶಾಲೆಗೆ ಮರಳಲು ತಿಳಿಸಬೇಕು ಎಂಬುದರ ಕುರಿತು ಇನ್ನೂ ನಿರ್ಧಾರ ಕೈಗೊಂಡಿಲ್ಲ’ಎಂದರು.

‘ತಾಲಿಬಾನ್‌ ಸರ್ಕಾರ ತಿಳಿಸಿದಂತೆ ಇಸ್ಲಾಮಿಕ್‌ ಉಡುಪುಗಳನ್ನು ಧರಿಸಲೂ ಹೆಣ್ಣುಮಕ್ಕಳು ಒಪ್ಪಿದ್ದರು. ಆದರೆ ಸರ್ಕಾರ ಉನ್ನತ ಶಿಕ್ಷಣವನ್ನು ನಿರ್ಬಂಧಿಸಿ ಮಾತಿನಿಂದ ಹಿಂದೆ ಸರಿದಿದೆ. ನಮಗೆ ಭರವಸೆ ನೀಡಿ ಮೋಸ ಮಾಡಿದ್ದಾರೆ’ ಎಂದು ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಮರಿಯಂ ನಹೀಬಿ ಕಿಡಿಕಾರಿದ್ದಾರೆ.