ಹೂಸ್ಟನ್(ನ.03): ಕೊರೋನಾ ವೈರಸ್‌ ಹಲವಾರು ಹೊಸ ಹೊಸ ರೂಪಗಳನ್ನು ಪಡೆದುಕೊಳ್ಳುತ್ತಿದ್ದು, ಅದರಲ್ಲಿ ಒಂದು ರೂಪಾಂತರವು ಸಾಮಾನ್ಯ ಕೊರೋನಾ ವೈರಸ್‌ಗಿಂತ ಬಹಳ ವೇಗವಾಗಿ ಒಬ್ಬರಿಂದ ಒಬ್ಬರಿಗೆ ಸೋಂಕು ಅಂಟಿಸುತ್ತಿದೆ ಎಂಬ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ. ಆದರೆ, ಈ ರೂಪಾಂತರವು ಹೆಚ್ಚು ಅಪಾಯಕಾರಿಯೇ ಎಂಬ ಬಗ್ಗೆ ಇನ್ನೂ ಸಂಶೋಧನೆ ನಡೆದಿಲ್ಲ.

ಅಮೆರಿಕದ ಟೆಕ್ಸಾಸ್‌ ವಿಶ್ವವಿದ್ಯಾಲಯದಲ್ಲಿ ವೈರಾಣು ತಜ್ಞರು ಕೊರೋನಾ ವೈರಸ್‌ನ ವಂಶವಾಹಿ ರೂಪಾಂತರಗಳ ಬಗ್ಗೆ ಅಧ್ಯಯನ ಕೈಗೊಂಡಿದ್ದಾರೆ. 5000 ಕೋವಿಡ್‌ ರೋಗಿಗಳನ್ನು ಅವರು ಅಧ್ಯಯನಕ್ಕೆ ಒಳಪಡಿಸಿದ್ದು, ಆರಂಭಿಕ ಅಲೆಯಲ್ಲಿ ಅಧ್ಯಯನಕ್ಕೊಳಪಟ್ಟವರ ಪೈಕಿ ಶೇ.71ರಷ್ಟುಜನರಲ್ಲಿ ಪತ್ತೆಯಾದ ಕೊರೋನಾ ವೈರಸ್‌ ಈ ರೂಪಾಂತರಗೊಂಡ ವೈರಸ್ಸಾಗಿದೆ. ನಂತರದ ದಿನಗಳಲ್ಲಿ ಅಧ್ಯಯನಕ್ಕೊಳಪಟ್ಟವರ ಪೈಕಿ ಶೇ.99.9 ಕೊರೋನಾ ರೋಗಿಗಳಲ್ಲಿ ಈ ಹೊಸ ಮಾದರಿಯ ವೈರಸ್‌ ಪತ್ತೆಯಾಗಿದೆ. ಇದಕ್ಕೆ ಡಿ614ಜಿ ಎಂದು ಹೆಸರಿಡಲಾಗಿದೆ. ಈ ರೂಪಾಂತರದಲ್ಲಿ ಕೊರೋನಾ ವೈರಸ್ಸಿನ ಮುಳ್ಳಿನಂತಹ ಪ್ರೊಟೀನ್‌ ಕೊಂಬುಗಳಲ್ಲಿ ಹೊಸ ರೂಪದ ವಂಶವಾಹಿನಿ ದೊರೆತಿದೆ. ಎಂಬಿಯೋ ಎಂಬ ವೈದ್ಯಕೀಯ ಜರ್ನಲ್‌ನಲ್ಲಿ ಈ ಕುರಿತು ವಿವರ ಪ್ರಕಟವಾಗಿದೆ.

ಇಲ್ಲಿಯವರೆಗೆ ಜಗತ್ತಿನಲ್ಲಿ ಸಾರ್ಸ್‌-ಕೋವ್‌-2 ಕೊರೋನಾ ವೈರಸ್‌ನ 285 ರೀತಿಯ ರೂಪಾಂತರಗಳು ಪತ್ತೆಯಾಗಿವೆ. ಆದರೆ ಅವು ಮನುಷ್ಯನ ಮೇಲೆ ಉಂಟುಮಾಡುವ ಪರಿಣಾಮದಲ್ಲಿ ದೊಡ್ಡ ವ್ಯತ್ಯಾಸವೇನೂ ಕಾಣಿಸಿಲ್ಲ.