Asianet Suvarna News Asianet Suvarna News

ರಷ್ಯಾದಿಂದ ತೈಲ ಖರೀದಿ: ಭಾರತದ ನಡೆಗೆ ಅಮೆರಿಕ ಆಕ್ಷೇಪ

* ತೈಲ ಖರೀದಿ ನಿರ್ಬಂಧದ ಉಲ್ಲಂಘನೆಯಲ್ಲ

* ರಷ್ಯಾದಿಂದ ತೈಲ ಖರೀದಿ: ಭಾರತದ ನಡೆಗೆ ಅಮೆರಿಕ ಆಕ್ಷೇಪ

* ಆದರೆ ಇತಿಹಾಸದ ಪುಟದಲ್ಲಿ ಕಪ್ಪುಚುಕ್ಕೆ: ಅಮೆರಿಕ

Not violation of sanctions but Russian oil deal could put India on wrong side of history says US pod
Author
Bangalore, First Published Mar 17, 2022, 7:31 AM IST

ವಾಷಿಂಗ್ಟನ್‌: ‘ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಖರೀದಿ ಮಾಡುವ ಭಾರತದ ಚಿಂತನೆಯು, ರಷ್ಯಾದ ಮೇಲೆ ಹೇರಿರುವ ನಿರ್ಬಂಧದ ಉಲ್ಲಂಘನೆಯಾಗುವುದಿಲ್ಲ. ಆದರೆ ಇಂದಿನ ಸನ್ನಿವೇಶದ ಕುರಿತು ಇತಿಹಾಸ ರಚನೆಯಾದಾಗ ನೀವು ಎಲ್ಲಿ ನಿಲ್ಲಬೇಕು ಎಂಬುದನ್ನು ನೀವೇ ನಿರ್ಧರಿಸಬೇಕು’ ಎಂದು ಅಮೆರಿಕ ಪರೋಕ್ಷವಾಗಿ ಭಾರತದ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್‌ ಸಾಕಿ, ‘ರಷ್ಯಾ ಮೇಲೆ ನಾವು ಹೇರಿರುವ ನಿರ್ಬಂಧಗಳನ್ನು ಪಾಲಿಸಿ ಎಂಬುದು ಎಲ್ಲಾ ದೇಶಗಳಿಗೆ ನಮ್ಮ ಸಂದೇಶ ಮತ್ತು ಶಿಫಾರಸ್ಸು. ಆದರೆ ಭಾರತದ ಪ್ರಸ್ತಾಪ ನಮ್ಮ ನಿರ್ಬಂಧದ ಉಲ್ಲಂಘನೆಯಾಗುವುದು ಎಂದು ಅನ್ನಿಸುವುದಿಲ್ಲ. ಆದರೆ ರಷ್ಯಾದ ನಾಯಕತ್ವವನ್ನು ಬೆಂಬಲಿಸುವುದು ಪರೋಕ್ಷವಾಗಿ ಭೀಕರ ಪರಿಣಾಮಗಳಿಗೆ ಕಾರಣವಾದ ದಾಳಿಯನ್ನು ಬೆಂಬಲಿಸಿದಂತೆ’ ಎಂದು ಹೇಳಿದ್ದಾರೆ.

ಪ್ರತಿ ಬ್ಯಾರಲ್‌ಗೆ 25 ಡಾಲರ್‌ನಷ್ಟುಕಡಿಮೆ ಬೆಲೆಗೆ ತೈಲ

ಉಕ್ರೇನ್‌ ಮೇಲೆ ಯುದ್ಧ ಸಾರಿದ ಕಾರಣಕ್ಕಾಗಿ ಅಮೆರಿಕ, ಯುರೋಪಿಯನ್‌ ಒಕ್ಕೂಟ ಸೇರಿದಂತೆ ಹಲವು ದೇಶಗಳಿಂದ ತೈಲ ಆಮದು ಸೇರಿದಂತೆ ಹಲವು ನಿರ್ಬಂಧಗಳಿಗೆ ತುತ್ತಾಗಿರುವ ರಷ್ಯಾ, ಈ ಬಿಸಿಯಿಂದ ತಪ್ಪಿಸಿಕೊಳ್ಳಲು ರಿಯಾಯಿತಿ ದರದಲ್ಲಿ ಭಾರತಕ್ಕೆ ಕಚ್ಚಾತೈಲ ಮಾರಾಟ ಮಾಡಿದೆ.

‘ಭಾರತದ ಸರ್ಕಾರಿ ತೈಲ ಕಂಪನಿಯಾದ ಇಂಡಿಯನ್‌ ಆಯಿಲ್‌ ಕಾರ್ಪೋರೆಷನ್‌ಗೆ (ಐಒಸಿಗೆ) ರಷ್ಯಾ 30 ಲಕ್ಷ ಬ್ಯಾರಲ್‌ ಕಚ್ಚಾತೈಲ ನೀಡಿದೆ. ಒಂದು ಬ್ಯಾರಲ್‌ಗೆ 20-25 ಡಾಲರ್‌ (ಶೇ.20ರಿಂದ 25ರಷ್ಟು) ಕಡಿಮೆ ಬೆಲೆಗೆ ಭಾರತ ತೈಲ ಖರೀದಿಸಿದೆ. ಫೆ.24ರಂದು ಉಕ್ರೇನ್‌-ರಷ್ಯಾ ಯುದ್ಧ ಆರಂಭವಾದ ನಂತರ ಭಾರತವು ರಷ್ಯಾದಿಂದ ತೈಲ ಖರೀದಿ ಮಾಡಿದ್ದು ಇದೇ ಮೊದಲು’ ಎಂದು ಮೂಲಗಳು ಹೇಳಿವೆ. ಈಗಾಗಲೇ ಕಚ್ಚಾತೈಲ ದರ ಏರಿದರೂ ದೇಶೀಯ ಮಾರುಕಟ್ಟೆಯಲ್ಲಿ ದರ ಏರಿಕೆ ಮಾಡದೇ ನಷ್ಟಅನುಭವಿಸುತ್ತಿರುವ ತೈಲ ಕಂಪನಿಗಳಿಗೆ ಇದರಿಂದ ಭಾರೀ ನೆರವಾಗಲಿದೆ.

ಭಾರತವು ರಷ್ಯಾದಿಂದ ತೈಲ ಖರೀದಿ ಮಾಡಿದ್ದಕ್ಕೆ ಅಮೆರಿಕ ಆಕ್ಷೇಪಿಸಿತ್ತು. ಆದರೂ ಈ ಖರೀದಿ ನಡೆದಿದೆ.

ಮಾತುಕತೆ ನಡೆದಿತ್ತು:

ಕಳೆದ ವಾರ ಪೆಟ್ರೋಲಿಯಂ ಖಾತೆ ಸಚಿವ ಹರದೀಪ್‌ ಪುರಿ, ರಷ್ಯಾದ ಪೆಟ್ರೋಲಿಯಂ ಖಾತೆ ಸಚಿವರ ಜೊತೆ ನಡೆಸಿದ ಮಾತುಕತೆ ವೇಳೆ, ರಷ್ಯಾ ಮಾರುಕಟ್ಟೆದರಕ್ಕಿಂತ ಶೇ.20-25ರಷ್ಟುಅಗ್ಗದ ದರದಲ್ಲಿ ಕಚ್ಚಾತೈಲ ಮಾರಾಟ ಮಾಡುವ ಆಫರ್‌ ಮುಂದಿಟ್ಟಿತ್ತು. ಅದು ಈಗ ಸಾಕಾರಗೊಂಡಿದೆ. ತೈಲ ವ್ಯಾಪಾರಿಯೊಬ್ಬನ ಮೂಲಕ ಈ ಖರೀದಿ ನಡೆದಿದೆ ಎಂದು ಅವು ಹೇಳಿವೆ.

ಭಾರತದ ಒಂದು ದಿನದ ಕಚ್ಚಾತೈಲ ಬಳಕೆ ಪ್ರಮಾಣ 45 ಲಕ್ಷ ಬ್ಯಾರಲ್‌ಗಳಷ್ಟಿದೆ. ಈ ಪೈಕಿ ರಷ್ಯಾ 30 ಲಕ್ಷ ಬ್ಯಾರಲ್‌ ಪ್ರಸ್ತಾಪ ಇರಿಸಿತ್ತು. ಜೊತೆಗೆ ಭಾರತದವರೆಗೆ ಸಾಗಣೆ ಹೊಣೆ ಮತ್ತು ವಿಮಾ ವೆಚ್ಚವನ್ನೂ ಭರಿಸುವ ಆಫರ್‌ ಅನ್ನು ರಷ್ಯಾ ಸರ್ಕಾರ ಮುಂದಿಟ್ಟಿತ್ತು ಎಂದು ಅವು ವಿವರಿಸಿವೆ.

ವಿಮಾನ ಇಂಧನ ಬೆಲೆ 1 ಲಕ್ಷ ರು.ಗೆ ಏರಿಕೆ: ಸಾರ್ವಕಾಲಿಕ ಗರಿಷ್ಠ

 

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದರ ಏರಿಕೆಗೆ ಅನುಗುಣವಾಗಿ ಬುಧವಾರ ವೈಮಾನಿಕ ಇಂಧನ ದರ ಶೇ.18ರಷ್ಟುಏರಿಕೆಯಾಗಿದೆ. ಇದು ಸಾರ್ವಕಾಲಿಕ ಗರಿಷ್ಠ ಏರಿಕೆಯಾಗಿದೆ. ಈ ವರ್ಷದ ಆರಂಭದಿಂದ 6 ಬಾರಿ ವಿಮಾನ ಇಂಧನ ದರವನ್ನು ಏರಿಕೆ ಮಾಡಲಾಗಿದ್ದು, ಇದೇ ಮೊದಲ ಬಾರಿಗೆ 1 ಕಿಲೋ ಲೀಟರ್‌ಗೆ 1 ಲಕ್ಷ ರು.ಗೂ ಅಧಿಕವಾಗಿದೆ.

ವಿಮಾನ ಇಂಧನ ದರವನ್ನು ಪ್ರತಿ ಕಿಲೋ ಲೀಟರ್‌ಗೆ 17,135.63 ರು. ಹೆಚ್ಚಳ ಮಾಡಲಾಗಿದ್ದು, ಈ ಮೂಲಕ ದೆಹಲಿಯಲ್ಲಿ 1 ಕಿಲೋ ಲೀಟರ್‌ ಇಂಧನದ ಬೆಲೆ 1.1 ಲಕ್ಷ ರು.ಗೆ ಏರಿಕೆಯಾಗಿದೆ. ಮುಂಬೈನಲ್ಲಿ 1.09 ಲಕ್ಷಕ್ಕೆ, ಕೋಲ್ಕತಾದಲ್ಲಿ 1.14 ಲಕ್ಷಕ್ಕೆ ಮತ್ತು ಚೆನ್ನೈನಲ್ಲಿ 1.14 ಲಕ್ಷಕ್ಕೆ ಏರಿಕೆಯಾಗಿದೆ. ವಿಮಾನ ಇಂಧನ ಬೆಲೆಯನ್ನು ಪ್ರತಿ ತಿಂಗಳ 1 ಮತ್ತು 16ನೇ ತಾರೀಖಿನಂದು ಅಂತಾರಾಷ್ಟ್ರೀಯ ತೈಲ ಬೆಲೆಯನ್ನು ಆಧರಿಸಿ ಪರಿಷ್ಕರಣೆ ಮಾಡಲಾಗುತ್ತದೆ.

Follow Us:
Download App:
  • android
  • ios