* ಉಗ್ರರಿಂದ ಬಾಲಕಿಯರ ರಕ್ಷಿಸಲು ಶಾಲಾ ದಾಖಲೆ ಸುಟ್ಟಶಾಲಾ ಸಂಸ್ಥಾಪಕ* ಸ್ಕೂಲ್ ಆಫ್ ಲೀಡರ್‌ಶಿಪ್ ಅಫ್ಘಾನಿಸ್ತಾನ್ ಸಂಸ್ಥಾಪಕಿ ಶಬಾನಾ ಹೇಳಿಕೆ* ಇದು ಅಫ್ಘಾನಿಸ್ತಾನದ ಏಕೈಕ ವಿದ್ಯಾರ್ಥಿನಿಯರ ಬೋರ್ಡಿಂಗ್ ಶಾಲೆ
ಕಾಬೂಲ್(ಆ.21): ತಾಲಿಬಾನಿಗಳಿಗೆ ಹೆದರಿ ಸಾವಿರಾರು ಜನರು ದೇಶ ತೊರೆಯುತ್ತಿದ್ದರೆ, ಇತ್ತ ಕಾಬೂಲ್‌ನ ಶಾಲೆಯೊಂದರ ಸಂಸ್ಥಾಪಕಿ ತನ್ನೆಲ್ಲಾ ವಿದ್ಯಾರ್ಥಿನಿಯರ ಕುರಿತ ಮಾಹಿತಿಗಳನ್ನು ಒಳಗೊಂಡ ದಾಖಲೆಗಳನ್ನು ಸುಟ್ಟುಹಾಕುವ ಮೂಲಕ ಅವರ ಜೀವರಕ್ಷಣೆ ಕೆಲಸ ಮಾಡಿದ್ದಾರೆ. ಇದು, ಈ ಬಾರಿ ಮಹಿಳೆಯರಿಗೆ ಶಿಕ್ಷಣ, ಉದ್ಯೋಗ ಸೇರಿ ಎಲ್ಲಾ ಕ್ಷೇತ್ರಗಳಲ್ಲಿ ಅವಕಾಶ ಕೊಡುವುದಾಗಿ ಹೇಳಿದ ಹೊರತಾಗಿಯೂ ಉಗ್ರರ ಬಗ್ಗೆ ಆಫ್ಘನ್ನರಿಗೆ ಇರುವ ಭೀತಿಯನ್ನು ಜಗತ್ತಿನ ಮುಂದೆ ಹರವಿದೆ.
ಕಾಬೂಲ್‌ನಲ್ಲಿ ವಿದ್ಯಾರ್ಥಿನಿಯರಿಗೆಂದೇ ಮೀಸಲಾದ ‘ಸ್ಕೂಲ್ ಆಫ್ ಲೀಡರ್‌ಶಿಪ್ ಅಫ್ಘಾನಿಸ್ತಾನ್’ ಎಂಬ ವಸತಿ ಶಾಲೆ ಇದೆ. ಇಲ್ಲಿ ದಾನಿಗಳ ನೆರವಿನಿಂದ ವಿದ್ಯಾರ್ಥಿನಿಯರಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಇದು ಇಡೀ ಅಫ್ಘಾನಿಸ್ತಾನದಲ್ಲಿ ಇರುವ ಈ ರೀತಿಯ ಏಕೈಕ ಶಾಲೆ. ಕಳೆದ ಬಾರಿ ದೇಶದಲ್ಲಿ ತಾಲಿಬಾನ್ ಆಡಳಿತಕ್ಕೆ ಬಂದಾಗ, ಉಗ್ರರು ಈ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಕುರಿತ ಎಲ್ಲಾ ದಾಖಲೆ ಸುಟ್ಟು ಅವರ ಅಸ್ತಿತ್ವವನ್ನೇ ನಾಶಪಡಿಸುವ ಯತ್ನ ಮಾಡಿದ್ದರು. ಆದರೆ ತಾಲಿಬಾನ್ ಆಡಲಿಳ ಕೊನೆಗೊಂಡ ನಂತರದ ಶಾಲೆ ಮತ್ತೆ ಚಟುವಟಿಕೆ ಆರಂಭಿಸಿತ್ತು.
ಆದರೆ ಇದೀಗ ದೇಶ ಮತ್ತೆ ತಾಲಿಬಾನಿಗಳ ವಶವಾದ ಬೆನ್ನಲ್ಲೇ ಟ್ವೀಟ್ ಮಾಡಿರುವ ಶಾಲೆಯ ಸಂಸ್ಥಾಪಕಿ ಶಬಾನಾ ಬಸಿಜ್-ರಸಿಖ್ ‘ಅಫ್ಘಾನಿಸ್ತಾನದ ಏಕೈಕ ಬಾಲಕಿಯರ ವಸತಿ ಶಾಲೆ ಸಂಸ್ಥಾಪಕಿಯಾಗಿ ನಾನು ಎಲ್ಲಾ ವಿದ್ಯಾರ್ಥಿನಿಯರ ದಾಖಲೆಗಳನ್ನು ಸುಟ್ಟುಹಾಕುತ್ತಿದ್ದೇನೆ. ಆದರೆ ಇದು ಅವರನ್ನು ಅಳಿಸಿಹಾಕಲಲ್ಲ, ಬದಲಾಗಿ ಅವರನ್ನು ಮತ್ತು ಅವರ ಕುಟುಂಬ ಸದಸ್ಯರನ್ನು ರಕ್ಷಿಸಲು. ವಿದ್ಯಾರ್ಥಿಗಳು, ಅವರ ಕುಟುಂಬ ಸದಸ್ಯರು ಮತ್ತು ನಮ್ಮ ಬೆಂಬಲಿಗರಿಗೆ ಸುರಕ್ಷತೆ ಖಚಿತಪಡಿಸುವ ಸಲುವಾಗಿ ಎಲ್ಲಾ ದಾಖಲೆಗಳನ್ನು ಸುಟ್ಟುಹಾಕುತ್ತಿದ್ದೇನೆ’ ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೆ ಕಾಗದ ಪತ್ರಗಳಿಗೆ ಬೆಂಕಿ ಹಾಕಿರುವ ವಿಡಿಯೋವನ್ನೂ ಟ್ವೀಟರ್‌ನಲ್ಲಿ ಪ್ರಕಟಿಸಿದ್ದಾರೆ.
ತಾಲಿಬಾನಿಗಳು ಪಾಲಿಸುವ ಶರಿಯಾ ಕಾನೂನಿನ ಅನ್ವಯ, ವಿದ್ಯಾರ್ಥಿನಿಯರು ಶಿಕ್ಷಣ ಪಡೆಯಬಹುದಾದರೂ, ಅವರು ಸಾಮಾನ್ಯ ಶಾಲೆ, ಕಾಲೇಜು, ಮದ್ರಸಾಗಳಿಗೆ ಹೋಗುವಂತಿಲ್ಲ. ಜೊತೆಗೆ ತಮ್ಮ ಕುಟುಂಬಕ್ಕೆ ಸೇರದ 12 ವರ್ಷ ಮೇಲ್ಪಟ್ಟಯಾವುದೇ ವ್ಯಕ್ತಿಗಳೊಂದಿಗೆ ವಿದ್ಯಾರ್ಥಿನಿಯರು ಮಾತನಾಡುವಂತಿಲ್ಲ.
