ಕಠ್ಮಂಡು(ಆ.03): ಭಾರತದ ಮೂರು ಪ್ರದೇಶಗಳನ್ನು ಸೇರಿಸಿ ಹೊಸದಾಗಿ ತಯಾರಿಸಿರುವ ನವೀಕೃತ ನಕ್ಷೆಯನ್ನು, ಭಾರತ ಸೇರಿದಂತೆ ವಿಶ್ವಸಂಸ್ಥೆ ಹಾಗೂ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕಳುಹಿಸುವುದಾಗಿ ನೇಪಾಳ ಹೇಳಿದೆ.

ವಿವಾದಾತ್ಮಕ ನವೀಕೃತ ನಕ್ಷೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಭೂ ನಿರ್ವಹಣಾ ಖಾತೆ ಸಚಿವೆ ಪದ್ಮಾ ಆರ್ಯಾಳ್‌ ಅವರು, ಲಿಂಪಿಯಧುರಾ, ಲಿಪುಲೇಖ್‌ ಮತ್ತು ಕಾಲಾಪಾನಿ ಒಳಗೊಂಡಿರುವ ನವೀಕೃತ ನಕ್ಷೆಯನ್ನು ಆಗಸ್ಟ್‌ ಮಧ್ಯದಲ್ಲಿ ವಿಶ್ವಸಂಸ್ಥೆ, ಭಾರತ, ಗೂಗಲ್‌ ಮತ್ತು ಅಂತಾರಾಷ್ಟ್ರೀಯ ಸಮುದಾಯಕ್ಕೆ ಕಳುಹಿಸಿಕೊಡುತ್ತೇವೆ.

ಈ ಎಲ್ಲಾ ಪ್ರಕ್ರಿಯೆಯನ್ನೂ ಈ ತಿಂಗಳಾಂತ್ಯಕ್ಕೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಕೆ.ಪಿ ಶರ್ಮಾ ಓಲಿ ನೇತೃತ್ವದ ಸರ್ಕಾರ ನವೀಕೃತ ನಕ್ಷೆಗೆ ಸಂಸತ್ತಿನ ಒಪ್ಪಿಗೆ ಪಡೆದುಕೊಂಡಿತ್ತು.