Asianet Suvarna News Asianet Suvarna News

ನಮಸ್ತೆ ಟ್ರಂಪ್‌!: 2 ದಿನಗಳ ಪ್ರವಾಸಕ್ಕೆ ಭಾರೀ ಬಿಗಿಭದ್ರತೆ!

ಅಮೆರಿಕ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಇಂದು ಭಾರತಕ್ಕೆ ಟ್ರಂಪ್‌| ಬೆಳಗ್ಗೆ 11.40ಕ್ಕೆ ಅಹಮದಾಬಾದ್‌ಗೆ ಆಗಮನ, ಖುದ್ದು ಮೋದಿ ಸ್ವಾಗತ| 22 ಕಿ.ಮೀ ರೋಡ್‌ ಶೋ, ಸ್ಟೇಡಿಯಂನಲ್ಲಿ 1 ಲಕ್ಷ ಜನರೆದುರು ಭಾಷಣ| ಬಳಿಕ ತಾಜಮಹಲ್‌ಗೆ, ನಂತರ ದೆಹಲಿಯಲ್ಲಿ ಮೋದಿ ಜತೆ ಔತಣ

Namaste Trump PM Modi to receive US President Donald Trump in Ahmedabad
Author
Bangalore, First Published Feb 24, 2020, 7:31 AM IST

ನವದೆಹಲಿ[ಫೆ.24]: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಚೊಚ್ಚಲ, 2 ದಿನಗಳ ಬಹುನಿರೀಕ್ಷಿತ ಭಾರತ ಪ್ರವಾಸ ಸೋಮವಾರದಿಂದ ಆರಂಭವಾಗಲಿದೆ. ಭಾನುವಾರ ರಾತ್ರಿ (ಭಾರತೀಯ ಕಾಲಮಾನ) ಹೊರಟಿರುವ ಟ್ರಂಪ್‌ ಅವರು ನೇರವಾಗಿ ಗುಜರಾತ್‌ನ ಅಹಮದಾಬಾದ್‌ಗೆ ಬಂದಿಳಿಯಲಿದ್ದು, ಅಲ್ಲಿಂದಲೇ ಅವರ ಭಾರತ ಯಾತ್ರೆ ಶುರುವಾಗಲಿದೆ. ಬಳಿಕ ಆಗ್ರಾಗೆ ಹೋಗಿ, ಅಲ್ಲಿಂದ ದೆಹಲಿಗೆ ತೆರಳಲಿದ್ದಾರೆ. ಟ್ರಂಪ್‌ ಭೇಟಿ ಹಿನ್ನೆಲೆಯಲ್ಲಿ ಇಡೀ ದೇಶದ ಗಮನ ಈ ಮೂರೂ ನಗರಗಳ ಮೇಲೆ ಕೇಂದ್ರೀಕೃತವಾಗಿದೆ.

ಟ್ರಂಪ್‌ ಅವರು ತಮ್ಮ ಪತ್ನಿ ಮೆಲಾನಿಯಾ, ಪುತ್ರಿ ಇವಾಂಕಾ, ಅಳಿಯ ಜರೇಡ್‌ ಕುಶ್ನೆರ್‌, ಅಮೆರಿಕ ನಿಯೋಗ ಹಾಗೂ ನೂರಾರು ಪತ್ರಕರ್ತರೊಂದಿಗೆ ಆಗಮಿಸಲಿದ್ದಾರೆ. ಅವರು ಭಾರತಕ್ಕೆ ಭೇಟಿ ನೀಡುತ್ತಿರುವ 7ನೇ ಅಮೆರಿಕ ಅಧ್ಯಕ್ಷರಾಗಿದ್ದಾರೆ.

ಅಮೆರಿಕ ಅಧ್ಯಕ್ಷರನ್ನು ಸ್ವಾಗತಿಸಲು ಅಹಮದಾಬಾದ್‌, ಆಗ್ರಾ ಹಾಗೂ ನವದೆಹಲಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿವೆ. ಭಾರೀ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ದಿಲ್ಲಿ ಸೇರಿದಂತೆ ಟ್ರಂಪ್‌ ಹೋದಲ್ಲೆಲ್ಲ ಅವರಿಗೆ ಸಾಂಪ್ರದಾಯಿಕ ತಿಲಕ ಇಟ್ಟು, ಶಾಲು ಹೊದಿಸಿ ಸ್ವಾಗತಿಸಲು ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ.

ತಮ್ಮ ಪ್ರವಾಸದ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ದ್ವಿಪಕ್ಷೀಯ ಮಾತುಕತೆಯನ್ನು ಅವರು ನಡೆಸಲಿದ್ದಾರೆ. ಈ ವೇಳೆ ಅವರು ಭಾರತದ ಜತೆ ಮಹತ್ವದ ವ್ಯಾಪಾರ ಒಪ್ಪಂದವೊಂದಕ್ಕೆ ಸಹಿ ಹಾಕಬಹುದು ಎಂದು ಮೊದಲು ಹೇಳಲಾಗಿತ್ತು. ಆದರೆ ಒಪ್ಪಂದಕ್ಕೆ ಸಹಿ ಹಾಕಲು ಉಭಯ ದೇಶಗಳ ನಡುವೆ ‘ಕೊಡು-ಕೊಳ್ಳುವಿಕೆ’ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಅಡ್ಡಿಗಳಿವೆ. ಅಮೆರಿಕ ಉತ್ಪನ್ನಗಳಿಗೆ ಭಾರತ ಹೆಚ್ಚು ತೆರಿಗೆ ಹೇರುತ್ತಿದೆ ಎಂದು ಟ್ರಂಪ್‌ ಇತ್ತೀಚೆಗೆ ಆಕ್ಷೇಪಿಸಿದ್ದರು. ಇವೆಲ್ಲ ಬಗೆಹರಿದರೆ ಮಾತ್ರ ಒಪ್ಪಂದ ಸಾಧ್ಯ. ಇಲ್ಲದಿದ್ದರೆ ಇಲ್ಲ ಎಂದು ಹೇಳಲಾಗಿದೆ.

ಇದೇ ವೇಳೆ, ಭಾರತವು ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರಕ್ಕೆ ಸಂಬಂಧಿಸಿದಂತೆ ಕೂಡ ಅವರು ತಮ್ಮ ಭಾಷಣದ ವೇಳೆ ಹಾಗೂ ಮೋದಿ ಭೇಟಿ ವೇಳೆ ಪ್ರಸ್ತಾಪಿಸಿ ಅದರ ಬಗ್ಗೆ ಕೆಲವು ಆಕ್ಷೇಪ ವ್ಯಕ್ತಪಡಿಸಬಹುದು ಎಂದು ಹೇಳಲಾಗಿದೆ.

ಇಂದು ಗುಜರಾತ್‌, ಆಗ್ರಾ ಪ್ರವಾಸ:

ಬೆಳಗ್ಗೆ 11.40ಕ್ಕೆ ಟ್ರಂಪ್‌ ಅವರು ಅಹಮದಾಬಾದ್‌ಗೆ ಬಂದಿಳಿಯಲಿದ್ದಾರೆ. ಶಿಷ್ಟಾಚಾರ ಬದಿಗೊತ್ತಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ರಂಪ್‌ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಿದ್ದಾರೆ.

ನಂತರ ವಿಮಾನ ನಿಲ್ದಾಣದಿಂದ ಸಾಬರಮತಿ ಆಶ್ರಮದವರೆಗೆ ಮೋದಿ ಜತೆಗೂಡಿ ಟ್ರಂಪ್‌ 22 ಕಿ.ಮೀ. ರೋಡ್‌ಶೋ ನಡೆಸಲಿದೆ. 22 ಕಿ.ಮೀ. ಉದ್ದಕ್ಕೂ ಭಾರತದ ಸಂಸ್ಕೃತಿ ಅನಾವರಣಗೊಳಿಸುವ 28 ವೇದಿಕೆಗಳನ್ನು ಹಾಕಲಾಗಿದ್ದು, ಟ್ರಂಪ್‌ ಮುಂದೆ ಪ್ರದರ್ಶಿಸಲಾಗುತ್ತದೆ.

ಬಳಿಕ ಸಾಬರಮತಿ ಆಶ್ರಮದಲ್ಲಿ ಉಭಯ ನಾಯಕರು 20 ನಿಮಿಷ ಕಳೆದು ಮಹಾತ್ಮ ಗಾಂಧೀಜಿ ಅವರನ್ನು ಸ್ಮರಿಸಲಿದ್ದಾರೆ. ನಂತರ ವಿಶ್ವದ ಅತಿದೊಡ್ಡ ಕ್ರಿಕೆಟ್‌ ಅಂಗಳವಾಗಿರುವ ಮೊಟೆರಾ ಸ್ಟೇಡಿಯಂಗೆ ಟ್ರಂಪ್‌ ತೆರಳಲಿದ್ದು, ‘ನಮಸ್ತೇ ಟ್ರಂಪ್‌’ ಕಾರ್ಯಕ್ರಮದಲ್ಲಿ 1.10 ಲಕ್ಷ ಜನರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಅಲ್ಲಿಂದ ಮಧ್ಯಾಹ್ನ 3.30ಕ್ಕೆ ನಿರ್ಗಮಿಸಿ ಆಗ್ರಾಗೆ ತೆರಳಲಿದ್ದಾರೆ. ಸಂಜೆ ಅಮರಪ್ರೇಮ ಸ್ಮಾರಕ ತಾಜ್‌ ಮಹಲ್‌ ಅನ್ನು ಸಪತ್ನೀಕರಾಗಿ ವೀಕ್ಷಿಸಲಿದ್ದಾರೆ. ಅಲ್ಲಿಂದ ಸಂಜೆ ದಿಲ್ಲಿಗೆ ತೆರಳಿ ಮೋದಿ ಹಮ್ಮಿಕೊಂಡ ಔತಣದಲ್ಲಿ ಭಾಗಿಯಾಗಲಿದ್ದಾರೆ.

ಫೆಬ್ರವರಿ 25ರ ಮಂಗಳವಾರ ಅವರಿಗೆ ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ಗೌರವ ವಂದನೆ ನೀಡಲಾಗುತ್ತದೆ. ಅಲ್ಲಿಂದ ಅವರು ರಾಜಘಾಟ್‌ತೆ ತೆರಳಿ ಗಾಂಧೀಜಿ ಸಮಾಧಿಗೆ ನಮಿಸಲಿದ್ದಾರೆ. ಮಧ್ಯಾಹ್ನ ಹೈದರಾಬಾದ್‌ ಹೌಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ರಾಷ್ಟ್ರಪತಿಗಳ ಔತಣಕೂಟದಲ್ಲಿ ಭಾಗವಹಿಸಿ ರಾತ್ರಿ ಅಮೆರಿಕಕ್ಕೆ ನಿರ್ಗಮಿಸಲಿದ್ದಾರೆ.

ಟ್ರಂಪ್‌ ಟೈಮ್‌ಲೈನ್‌

ಫೆ.24,

ಬೆಳಗ್ಗೆ

11.40: ಅಹಮದಾಬಾದ್‌ ವಿಮಾನ ನಿಲ್ದಾಣಕ್ಕೆ ಪತ್ನಿ ಸಮೇತ ಟ್ರಂಪ್‌ ಆಗಮನ, ಪ್ರಧಾನಿ ನರೇಂದ್ರ ಮೋದಿ ಅವರಿಂದ ಸ್ವಾಗತ, ಅಲ್ಲಿಂದ ಸಾಬರಮತಿ ಆಶ್ರಮದವರೆಗೆ ಮೋದಿ ಜತೆ 22 ಕಿ.ಮೀ. ರೋಡ್‌ ಶೋ

ಮಧ್ಯಾಹ್ನ

12.15: ಸಾಬರಮತಿ ಆಶ್ರಮಕ್ಕೆ ಹಾಗೂ ನದಿ ತೀರಕ್ಕೆ 20 ನಿಮಿಷದ ಭೇಟಿ

1.05: ಮೊಟೆರಾ ಸ್ಟೇಡಿಯಂಗೆ ಆಗಮನ, ‘ನಮಸ್ತೇ ಟ್ರಂಪ್‌’ ಸಮಾವೇಶದಲ್ಲಿ ಭಾಷಣ

3.30: ಆಗ್ರಾಗೆ ಪಯಣ

ಸಂಜೆ

4.45: ಆಗ್ರಾಗೆ ಆಗಮನ, ಯೋಗಿ ಆದಿತ್ಯನಾಥ್‌ ಅವರಿಂದ ಸ್ವಾಗತ

5.15: ತಾಜ್‌ಮಹಲ್‌ಗೆ ಭೇಟಿ

6.45: ದಿಲ್ಲಿಗೆ ನಿರ್ಗಮನ

7.30: ದಿಲ್ಲಿಗೆ ಆಗಮನ, ಪ್ರಧಾನಿ ನರೇಂದ್ರ ಮೋದಿ ಅವರಿಂದ ಟ್ರಂಪ್‌ಗೆ ಔತಣ

ಮಂಗಳವಾರ

ಬೆಳಗ್ಗೆ| 

10.00: ರಾಷ್ಟ್ರಪತಿ ಭವನದಲ್ಲಿ ಟ್ರಂಪ್‌ಗೆ ಸ್ವಾಗತ

10.30: ರಾಜಘಾಟ್‌ಗೆ ಭೇಟಿ, ಮಹಾತ್ಮ ಗಾಂಧಿ ಸಮಾಧಿಗೆ ಭೇಟಿ

11.00: ಹೈದರಾಬಾದ್‌ ಹೌಸ್‌ನಲ್ಲಿ ಮೋದಿ ಜತೆ ದ್ವಿಪಕ್ಷೀಯ ಮಾತುಕತೆ

ಮಧ್ಯಾಹ್ನ| 12.40: ಒಪ್ಪಂದ ವಿನಿಮಯ, ಪತ್ರಿಕಾ ಹೇಳಿಕೆ ಬಿಡುಗಡೆ

ಸಂಜೆ|

 7.30: ರಾಷ್ಟ್ರಪತಿ ಭವನದಲ್ಲಿ ಸಂಜೆ ಔತಣಕೂಟ

ರಾತ್ರಿ| 

10.00: ದಿಲ್ಲಿಯಿಂದ ನಿರ್ಗಮನ

Follow Us:
Download App:
  • android
  • ios