ವಿಚ್ಛೇದನದಿಂದ ಜನಿಸಿದ ವಿಶ್ವದ| ಹೊಸ ಶತಕೋಟ್ಯಧಿಪತಿ!| ವಿಚ್ಛೇದಿತೆಗೆ 24000 ಕೋಟಿ ಜೀವನಾಂಶ!

ಬೀಜಿಂಗ್‌: ರಾತ್ರೋರಾತ್ರಿ ಜಗತ್ತಿನಲ್ಲಿ ಶತಕೋಟ್ಯಧಿಪತಿ ಮಹಿಳೆಯೊಬ್ಬರ ಜನನವಾಗಿದೆ. ಈಕೆಯೀಗ ಜಗತ್ತಿನ ಅತ್ಯಂತ ಶ್ರೀಮಂತ ಮಹಿಳೆಯರಲ್ಲೊಬ್ಬಳು. ದಿಢೀರನೆ ಈಕೆ ಶ್ರೀಮಂತಳಾಗಿದ್ದು ಹೇಗೆ ಗೊತ್ತಾ? ಶ್ರೀಮಂತ ಉದ್ಯಮಿಯೊಬ್ಬ ಈಕೆಗೆ ವಿಚ್ಛೇದನ ನೀಡಿದ್ದರಿಂದ.

ಚೀನಾದ ಶೆಂಜೆನ್‌ ಕಾಂಗ್ಟೈ ಬಯೋಲಾಜಿಕಲ್‌ ಪ್ರಾಡಕ್ಟ್ ಕಂಪನಿಯ ಚೇರ್ಮನ್‌ ಡು ವೀಮಿನ್‌ ತನ್ನ ಪತ್ನಿ ಯುವಾನ್‌ ಲಿಪಿಂಗ್‌ಗೆ ವಿಚ್ಛೇದನದ ಜೀವನಾಂಶವಾಗಿ ಕಂಪನಿಯ 3.2 ಶತಕೋಟಿ ಡಾಲರ್‌ (ಸುಮಾರು 24000 ಕೋಟಿ ರು.) ಮೌಲ್ಯದ ಷೇರುಗಳನ್ನು ನೀಡಿದ್ದಾರೆ. ಅದರಿಂದಾಗಿ 49 ವರ್ಷದ ಯುವಾನ್‌ ರಾತ್ರೋರಾತ್ರಿ ಜಗತ್ತಿನ ಶ್ರೀಮಂತ ಮಹಿಳೆಯರಲ್ಲಿ ಒಬ್ಬಳಾಗಿದ್ದಾಳೆ. ಇದು ಏಷ್ಯಾದ ಅತ್ಯಂತ ದುಬಾರಿ ವಿಚ್ಛೇದನಗಳಲ್ಲೊಂದು ಎಂದು ಖ್ಯಾತಿ ಪಡೆದಿದೆ.

ಇತ್ತೀಚೆಗೆ ಕಾಂಗ್ಟೈ ಕಂಪನಿ ಕೊರೋನಾ ವೈರಸ್‌ಗೆ ಲಸಿಕೆ ಕಂಡುಹಿಡಿಯುತ್ತಿರುವುದಾಗಿ ಘೋಷಿಸಿದ ಮೇಲೆ ಕಂಪನಿಯ ಷೇರು ಮೌಲ್ಯ ಹಲವಾರು ಪಟ್ಟು ಏರಿಕೆಯಾಗಿದೆ. ಅದೇ ಸಮಯಕ್ಕೆ ಸರಿಯಾಗಿ ಕಂಪನಿಯ ಚೇರ್ಮನ್‌ ವೀಮಿನ್‌ (56) ತನ್ನ ಮಾಜಿ ಪತ್ನಿಗೆ ಪಾವತಿಸಬೇಕಾದ ಜೀವನಾಂಶವೂ ನಿಗದಿಯಾಗಿದ್ದು, ಆಕೆಗೆ ಭಾರಿ ಮೊತ್ತದ ಷೇರುಗಳು ಲಭಿಸಿವೆ.

ಈ ಹಿಂದೆ ಅಮೆಜಾನ್‌ ಕಂಪನಿಯ ಮುಖ್ಯಸ್ಥ ಜೆಫ್‌ ಬೆಜೋಸ್‌ ತನ್ನ ಮಾಜಿ ಪತ್ನಿಗೆ 3.4 ಲಕ್ಷ ಕೋಟಿ ರು. ಜೀವನಾಂಶ ಪಾವತಿಸಿದ್ದರು. ಅದು ಜಗತ್ತಿನ ಅತ್ಯಂತ ದುಬಾರಿ ವಿಚ್ಛೇದನವಾಗಿದೆ.

ಕಾಂಗ್ಟೈ ಕಂಪನಿಯ ಚೇರ್ಮನ್‌ ವೀಮನ್‌ ಚೀನಾದ ಹಳ್ಳಿಯೊಂದರಲ್ಲಿ ರೈತನ ಮಗನಾಗಿ ಜನಿಸಿ, ಕ್ಲಿನಿಕ್‌ ಒಂದರಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಾ ತನ್ನದೇ ಔಷಧ ಕಂಪನಿಯನ್ನು ಕಟ್ಟಿಯಶಸ್ವಿ ಉದ್ಯಮಿಯಾಗಿ ಬೆಳೆದಿದ್ದಾರೆ.