ಕೆಲಸದಿಂದ ವಜಾ: ಬೋಲ್ಡೋಜರ್ ತರಿಸಿ ಬಾಸ್ ಮನೆ ಬೀಳಿಸಿದ ಮಾಜಿ ಉದ್ಯೋಗಿ
ಯಾವುದೇ ಮುನ್ಸೂಚನೆ ನೀಡದೇ ನೀವು ಕೆಲಸ ಮಾಡುವ ಸಂಸ್ಥೆ ನಿಮ್ಮನ್ನು ಕೆಲಸದಿಂದ ತೆಗೆದು ಹಾಕಿದರೆ ಏನು ಮಾಡುವಿರಿ, ಕೆಲವರು ಇದು ಬದುಕಿನ ಭಾಗ ಎಂದು ಭಾವಿಸಿಕೊಂಡು ಹೊಸ ಉದ್ಯೋಗ ಹುಡುಕುವತ್ತಾ ಮುಂದಡಿ ಇಡುತ್ತಾರೆ. ಆದರೆ ಇಲ್ಲೊಬ್ಬ ಉದ್ಯೋಗಿ ಕೆಲಸದಿಂದ ತೆಗೆದು ಹಾಕಿದ ಬಾಸ್ ವಿರುದ್ಧ ತೀವ್ರವಾಗಿ ಸಿಟ್ಟುಗೊಂಡಿದ್ದು, ವಿಭಿನ್ನವಾಗಿ ಸೇಡು ತೀರಿಸಿಕೊಂಡಿದ್ದಾನೆ.
ಯಾವುದೇ ಮುನ್ಸೂಚನೆ ನೀಡದೇ ನೀವು ಕೆಲಸ ಮಾಡುವ ಸಂಸ್ಥೆ ನಿಮ್ಮನ್ನು ಕೆಲಸದಿಂದ ತೆಗೆದು ಹಾಕಿದರೆ ಏನು ಮಾಡುವಿರಿ. ಬಹುತೇಕರು ತಲೆ ಮೇಲೆ ಕೈ ಹೊತ್ತು ಕೂರುತ್ತಾರೆ. ತೀವ್ರ ಚಿಂತೆಗಿಡಾಗುತ್ತಾರೆ. ಹಳೆ ಬಾಸ್‌ಗೆ ಬಾಯಿಗೆ ಬಂದಂತೆ ಬೈದುಕೊಂಡು ಸಮಾಧಾನಗೊಳ್ಳುತ್ತಾರೆ. ಇನ್ನೂ ಕೆಲವರು ಇದು ಬದುಕಿನ ಭಾಗ ಎಂದು ಭಾವಿಸಿಕೊಂಡು ಹೊಸ ಉದ್ಯೋಗ ಹುಡುಕುವತ್ತಾ ಮುಂದಡಿ ಇಡುತ್ತಾರೆ. ಆದರೆ ಇಲ್ಲೊಬ್ಬ ಉದ್ಯೋಗಿ ಕೆಲಸದಿಂದ ತೆಗೆದು ಹಾಕಿದ ಬಾಸ್ ವಿರುದ್ಧ ತೀವ್ರವಾಗಿ ಸಿಟ್ಟುಗೊಂಡಿದ್ದು, ವಿಭಿನ್ನವಾಗಿ ಸೇಡು ತೀರಿಸಿಕೊಂಡಿದ್ದಾನೆ.
ಬಾಸ್‌ನ ಮನೆಗೆ ಬುಲ್ಡೋಜರ್ ಕರೆತಂದ ಈತ ಇಡೀ ಮನೆಯನ್ನು ಕೆಲ ನಿಮಿಷಗಳಲ್ಲಿ ಧರಾಶಾಯಿಯಾಗಿ ಮಾಡಿದ್ದಾನೆ. ಬುಲ್ಡೋಜರ್ ಮೂಲಕ ಮನೆ ಕೆಡವುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆನಡಾದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಕೆನಡಾದ ಒಂಟರಿಯೋದ ಮಸ್ಕೊಕಾದಲ್ಲಿರುವ ಲೇಕ್ ಹೌಸ್‌ನ್ನು ಈತ ಸಂಪೂರ್ಣವಾಗಿ ನೆಲಕ್ಕೆ ಕೆಡವಿದ್ದಾನೆ. ಇದೇ ಪ್ರದೇಶದಲ್ಲಿ ಲೇಕ್ ಹೌಸ್ ಹೊಂದಿದ್ದ ಡಾನ್ ಟಾಪ್‌ಸ್ಕಾಟ್ ಎಂಬಾತ ಈ ದೃಶ್ಯವನ್ನು ಫೋನ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾನೆ.
ಡಾನ್ ಶೀರ್ಷಿಕೆಯಲ್ಲಿ ಬರೆದಿದ್ದಾರೆ, ನೀವು ಇದನ್ನು ಮಾಡಲು ಸಾಧ್ಯವಿಲ್ಲ. ಕೆಲಸದಿಂದ ವಜಾಗೊಂಡ ಉದ್ಯೋಗಿಯೋರ್ವ ಅಸಮಾಧಾನಗೊಂಡು ನಮ್ಮ ಮನೆಯ ಸಮೀಪವಿರುವ ಆತನ ಬಾಸ್‌ಗೆ ಸೇರಿದ ಕಟ್ಟಡವನ್ನು ಬುಲ್ಡೋಜರ್ ತರಿಸಿ ಧ್ವಂಸಗೊಳಿಸಿದ್ದಾನೆ. ಈ ಕುರಿತು ಯಾರಿಗಾದರೂ ಹೆಚ್ಚಿನ ಮಾಹಿತಿ ಇದೆಯೇ ಎಂದು ಅವರು ಕೇಳಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಬುಲ್ಡೋಜರ್ ಯಂತ್ರವನ್ನು ಬಳಸಿ ಕೆರೆಯ ಪಕ್ಕದ ಆಸ್ತಿಯನ್ನು ಒಡೆದು ಹಾಕುತ್ತಿರುವುದು ಕಾಣಿಸುತ್ತಿದೆ. ನಂತರ ಘಟನಾ ಸ್ಥಳಲ್ಲೆ ಪೊಲೀಸರು ಆಗಮಿಸಿದ್ದಾರೆ ಎಂದು ದಿ ಸನ್ ವರದಿ ಮಾಡಿದೆ.
ಪ್ಯೂನ್ ಹುದ್ದೆಗೆ ಸಿಗುತ್ತೆ ವರ್ಷಕ್ಕೆ 97 ಲಕ್ಷ ಸಂಬಳ: ಯಾರೆಲ್ಲ ಅರ್ಜಿ ಸಲ್ಲಿಸಬಹುದು ಗೊತ್ತಾ..?
ವರದಿಯ ಪ್ರಕಾರ, ವಜಾಗೊಂಡ ಉದ್ಯೋಗಿ 59 ವರ್ಷದ ವ್ಯಕ್ತಿಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಈತನ ವಿರುದ್ಧ ಕಿಡಿಗೇಡಿತನದ ಆರೋಪ ಹೊರಿಸಲಾಗಿದೆ. ಜೊತೆಗೆ 3,200 ಪೌಂಡ್‌ಗಳ ದಂಡವನ್ನೂ ವಿಧಿಸಲಾಗಿದೆ ಎಂದು ವರದಿ ತಿಳಿಸಿದೆ. ಅಲ್ಲದೇ ಮುಂದಿನ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗಲು ಆತ ನಿರ್ಧರಿಸಿದ್ದಾನೆ ಎಂದು ತಿಳಿದು ಬಂದಿದೆ. ಜುಲೈ 28 ರಂದು ಈ ವಿಡಿಯೋವನ್ನು ಟ್ವೀಟ್ ಮಾಡಿದಾಗ, ಜುಲೈ 21 ರಂದು ಅದನ್ನು ಸೆರೆಹಿಡಿಯಲಾಗಿದೆ ಎಂದು ಸನ್ ವರದಿ ಮಾಡಿದೆ. ಅಲ್ಲದೇ ಸಮೀಪದ ಕಟ್ಟಡಗಳಿಗೂ ಹಾನಿಯಾಗಿದ್ದು, ರಿಪೇರಿ ವೆಚ್ಚವು ಲಕ್ಷಾಂತರ ರೂ ಆಗಲಿದೆ ಎಂದು ವರದಿಯಾಗಿದೆ.
ಒಟ್ಟಿನಲ್ಲಿ ಉದ್ಯೋಗಿಯನ್ನು ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಬಾಸ್ ಭಾರಿ ಬೆಲೆ ತೇರುವಂತಾಗಿದ್ದು, ಈ ಸುದ್ದಿ ಎಲ್ಲೆಡೆ ಸಂಚಲನ ಮೂಡಿಸಿದೆ. ವಿನಾಕಾರಣ ಉದ್ಯೋಗ ಕಳೆದುಕೊಂಡವರು, ಬಹುಶಃ ಈ ಸುದ್ದಿಯಿಂದ ಖುಷಿ ಪಡಬಹುದೇನೋ.
ಸೆಕ್ಯುರಿಟಿ ಗಾರ್ಡ್ ನಿಯತ್ತು, ವ್ಯಕ್ತಿಯ ಜೀವಕ್ಕೆ ಕುತ್ತು: ಅರೇ ಬೆತ್ತಲೆ ಬಂದ ಬ್ಯಾಂಕ್ ಉದ್ಯೋಗಿ ಮರ್ಡರ್!