* ಹೆಣ್ಮಕ್ಕಳ ಮೇಲೆ ಸಿರಿಂಜ್‌ನಿಂದ ದಾಳಿ* ದಾಳಿಗೊಳಗಾದ ಹೆಣ್ಮಕ್ಕಳಿಗೆ ಎಚ್‌ಐವಿ ಟೆಸ್ಟ್* ಎಲ್ಲರಲ್ಲೂ ಆರೋಗ್ಯ ಸಮಸ್ಯೆ
ಪ್ಯಾರಿಸ್(ಜೂ.08): ಫ್ರಾನ್ಸ್‌ನಲ್ಲಿ 20 ವರ್ಷದ ಯುವಕನ ಮೇಲೆ ಸೂಜಿಯಿಂದ (Syringe) ದಾಳಿಯ ಆರೋಪ ಹೊರಿಸಲಾಗಿದೆ. ದಕ್ಷಿಣ ಫ್ರಾನ್ಸ್‌ನಲ್ಲಿ ಇಂತಹ ಹಲವಾರು ಹೊಸ ಘಟನೆಗಳು ಬೆಳಕಿಗೆ ಬಂದ ಬಳಿಕ ಈ ಯುವಕನನ್ನು ಭಾನುವಾರ ಬಂಧಿಸಲಾಯಿತು. ಶುಕ್ರವಾರ ಸಂಜೆ, ಟೌಲೋನ್‌ನ ರಿವೇರಿಯಾ ಬೀಚ್‌ನಲ್ಲಿ ದೂರದರ್ಶನ ಕಾರ್ಯಕ್ರಮದ ಸಂಗೀತ ಕಚೇರಿಯ ಚಿತ್ರೀಕರಣದ ಸಂದರ್ಭದಲ್ಲಿ 20 ಜನರು ಸಿರಿಂಜ್ ದಾಳಿಯಿಂದ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸೂಜಿಯಿಂದ ದಾಳಿಗೊಳಗಾದ ಮಹಿಳೆಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆ ಬೆಳಕಿಗೆ ಬಂದ ತಕ್ಷಣ ಅಲ್ಲೋಲ ಕಲ್ಲೋಲ ಉಂಟಾಯಿತು. ಇಬ್ಬರು ಮಹಿಳೆಯರು ಶಂಕಿತನನ್ನು ಗುರುತಿಸಿದ್ದಾರೆ ಎಂದು ಟೌಲೋನ್‌ನ ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದಾರೆ. ವ್ಯಕ್ತಿಯ ಮೇಲೆ ಗಂಭೀರ ಮತ್ತು ಪೂರ್ವಯೋಜಿತ ಸಶಸ್ತ್ರ ಹಿಂಸಾಚಾರದ ಆರೋಪ ಹೊರಿಸಲಾಗಿದೆ. ಇನ್ನು ಆರೋಪಿಯು ತಾನು ಹಲ್ಲೆ ನಡೆಸಿದ್ದೇನೆಂಬ ಆರೋಪವನ್ನು ನಿರಾಕರಿಸಿದ್ದಾರೆ ಎಂದು ಪೊಲೀಸರು ಪ್ರಾಸಿಕ್ಯೂಟರ್ ಎದುರು ಹೇಳಿದ್ದಾರೆ. ಆದರೆ ಸಾಕ್ಷಿಗಳ ಸಾಕಷ್ಟು ಹೇಳಿಕೆಗಳಿವೆ, ಈ ಕಾರಣದಿಂದಾಗಿ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬಹುದು.
ಹೆಣ್ಣು ಮಕ್ಕಳನ್ನು ಗುರಿಯಾಗಿಸಲಾಗುತ್ತಿದೆ
ಈ ವರ್ಷದ ಆರಂಭದಿಂದ ಸುಮಾರು 100 ಸಿರಿಂಜ್ನಿಂದ ನಡೆದ ದಾಳಿ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಈ ಸಿರಿಂಜ್ ದಾಳಿಗೊಳಗಾದವರಲ್ಲಿ ವಾಕರಿಕೆ, ತಲೆತಿರುಗುವಿಕೆ ಮತ್ತು ತೀವ್ರವಾದ ನೋವಿನಂತಹ ಸಾಮಾನ್ಯ ಲಕ್ಷಣಗಳನ್ನು ಕಂಡು ಬಂದಿವೆ. ನಂತರ ಅವರು ತಮ್ಮ ಚರ್ಮದ ಮೇಲೆ ಸೂಜಿ ಚುಚ್ಚಿದ ಗುರುತುಗಳನ್ನು ಗಮನಿಸಿದ್ದಾರೆ. ಸೂಜಿಯನ್ನು ಚುಚ್ಚಿದಾಗ, ಚರ್ಮದ ಬಣ್ಣವೂ ಬದಲಾಗುತ್ತದೆ. ಈ ದಾಳಿಯಿಂದ ಜನರು ಭಯಭೀತರಾಗಿದ್ದಾರೆ, ಏಕೆಂದರೆ ಯಾವ ರೀತಿಯ ಸೂಜಿಯನ್ನು ಚುಚ್ಚಲಾಗುತ್ತದೆ ಎಂಬುವುದು ಯಾರಿಗೂ ತಿಳಿದಿಲ್ಲ.
ಆರು ಹೊಸ ಪ್ರಕರಣಗಳು ವರದಿ
ಸಂಗೀತೋತ್ಸವದ ಶೂಟಿಂಗ್ ಸಮಯದಲ್ಲಿ ಹೊಸ ಪ್ರಕರಣಗಳು ಕಂಡುಬಂದಿವೆ. ಪೂರ್ವ ಫ್ರಾನ್ಸ್‌ನ ಬೆಲ್‌ಫೋರ್ಟ್‌ನಲ್ಲಿ ನಡೆದ ಹಬ್ಬದ ಸಂದರ್ಭದಲ್ಲಿ 17-18 ವರ್ಷ ವಯಸ್ಸಿನ ಆರು ಹದಿಹರೆಯದ ಯುವತಿಯರು ತಮ್ಮ ಕೈ ಮತ್ತು ತೋಳುಗಳಲ್ಲಿ ಹಠಾತ್ ಆಗಿ ತೀವ್ರವಾದ ನೋವು ಕಾಣಿಸಿಕೊಂಡಿದೆ ಎಂದು ದೂರಿದ್ದಾರೆ. ಅದೇ ಸಮಯದಲ್ಲಿ, ಏಳು ಹುಡುಗಿಯರು ಶೂಟಿಂಗ್ ಸಮಯದಲ್ಲಿ ಸೂಜಿ ದಾಳಿ ನಡೆದಿರುವ ಬಗ್ಗೆ ದೂರು ನೀಡಿದ್ದಾರೆ. ಇಲ್ಲಿಯೇ ಆರೋಪಿಯನ್ನು ಬಂಧಿಸಲಾಗಿದೆ. ದೇಶದ ವಿವಿಧ ನಗರಗಳಲ್ಲಿ ಇಂತಹ ಪ್ರಕರಣಗಳು ವರದಿಯಾಗುತ್ತಿವೆ. ಹೆಚ್ಚಿನ ಸಂತ್ರಸ್ತರಿಗೆ ರಕ್ತ ಪರೀಕ್ಷೆಗೆ ಒಳಗಾಗಲು ಕೇಳಲಾಗಿದೆ. ಕೆಲವರಿಗೆ ಎಚ್‌ಐವಿ ಮತ್ತು ಹೆಪಟೈಟಿಸ್‌ಗೆ ತಡೆಗಟ್ಟುವ ಔಷಧಿಗಳನ್ನು ನೀಡಲಾಗಿದೆ.
