ನವದೆಹಲಿ(ಜು.03): ಗಡಿಯಲ್ಲಿ ಭಾರತವನ್ನು ಕೆಣಕುತ್ತಿರುವ ಚೀನಾದ ವಿರುದ್ಧ ಆರ್ಥಿಕ ಸಮರ ಸಾರಿರುವ ಭಾರತ ಇದೀಗ ಡ್ರ್ಯಾಗನ್‌ ದೇಶದ ಮೇಲೆ ಬಲವಾದ ರಾಜತಾಂತ್ರಿಕ ’ದಾಳಿ’ಯನ್ನೂ ಆರಂಭಿಸಿದೆ. 

ಹಾಂಕಾಂಗ್‌ನಲ್ಲಿ ಹೆಚ್ಚುತ್ತಿರುವ ಚೀನಾ ವಿರೋಧಿ ಹೋರಾಟ ಹಾಗೂ ಅದನ್ನು ಹತ್ತಿಕ್ಕಲು ಚೀನಾ ಜಾರಿಗೆ ತಂದಿರುವ ಬಲವಂತದ ಕಾನೂನಿನ ಹಿನ್ನೆಲೆಯಲ್ಲಿ ‘ಹಾಂಕಾಂಗ್‌ನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ’ ಎಂದು ವಿಶ್ವಸಂಸ್ಥೆಗೆ ಭಾರತ ಹೇಳಿಕೆ ನೀಡಿದೆ. ತನ್ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಾವನ್ನು ಇಕ್ಕಟ್ಟಿಗೆ ಸಿಲುಕಿಸಲು ದಾಳ ಉರುಳಿಸಲಾರಂಭಿಸಿದೆ.

ಅನ್ಯ ದೇಶಗಳ ಆಂತರಿಕ ಬೆಳವಣಿಗೆ ಬಗ್ಗೆ ಮಧ್ಯಪ್ರವೇಶ ಮಾಡದ ಭಾರತ ಸರ್ಕಾರ, ಹಾಂಕಾಂಗ್‌ನಲ್ಲಿನ ಭಾರತೀಯ ಹೆಸರಿನಲ್ಲಿ ಈ ರೀತಿ ಪರೋಕ್ಷವಾಗಿ ಆಕ್ಷೇಪ ವ್ಯಕ್ತಪಡಿಸಿರುವುದು ನೆರೆ ದೇಶಕ್ಕೆ ಸೂಕ್ತ ಸಂದೇಶ ರವಾನಿಸುವ ಉದ್ದೇಶ ಹೊಂದಿದೆ ಎಂದೇ ವಿಶ್ಲೇಷಿಸಲಾಗಿದೆ.

ಚೀನಾ ಕುತಂತ್ರಕ್ಕೆ ಪ್ರತಿಯಾಗಿ ಅಮೆರಿಕ, ಜರ್ಮನಿ ಟ್ರಿಕ್..! ಡ್ರ್ಯಾಗನ್ ವಿರುದ್ಧ ಭಾರತಕ್ಕೆ ಸಾಥ್

ಚೀನಾದ ಸ್ವಾಯತ್ತ ಪ್ರದೇಶವಾಗಿರುವ ಹಾಂಕಾಂಗ್‌ನಲ್ಲಿ ಪ್ರತ್ಯೇಕ ಸರ್ಕಾರವಿದ್ದರೂ ಅಲ್ಲಿ ಭದ್ರತಾ ವಿಷಯಗಳಿಗೆ ಸಂಬಂಧಿಸಿದಂತೆ ತನಗೇ ಸಂಪೂರ್ಣ ಅಧಿಕಾರವಿರುವಂತಹ ಕಾನೂನನ್ನು ಕಳೆದ ಮಂಗಳವಾರವಷ್ಟೇ ಚೀನಾ ಅಂಗೀಕರಿಸಿದೆ. ಈ ಹಿನ್ನೆಲೆಯಲ್ಲಿ ಹಾಂಕಾಂಗ್‌ನಲ್ಲಿ ಚೀನಾ ಪೊಲೀಸರು ಹಾಗೂ ಸೇನೆಯ ಜೊತೆ ಸ್ಥಳೀಯರು ಘರ್ಷಣೆ ನಡೆಸುತ್ತಿದ್ದು, ಪರಿಸ್ಥಿತಿ ತ್ವೇಷಮಯವಾಗಿದೆ. ಇದರಿಂದ ಹಾಂಕಾಂಗ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ಸುಮಾರು 40 ಸಾವಿರ ಜನರಿಗೆ ತೊಂದರೆಯಾಗಬಹುದು ಎಂದು ಕಳವಳ ವ್ಯಕ್ತಪಡಿಸಿರುವ ಭಾರತ, ಜಿನೆವಾದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಭೆಯಲ್ಲಿ ಬುಧವಾರ ಹೇಳಿಕೆ ನೀಡಿ, ‘ಹಾಂಕಾಂಗ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಸಂಬಂಧಪಟ್ಟವರು ಸೂಕ್ತ, ಗಂಭೀರ ಹಾಗೂ ವಸ್ತುನಿಷ್ಠ ಕ್ರಮ ಕೈಗೊಳ್ಳಬೇಕು’ ಎಂದು ಚೀನಾದ ಹೆಸರು ಹೇಳದೆ ಖಡಕ್ಕಾಗಿ ಪ್ರತಿಕ್ರಿಯಿಸಿದೆ.

‘ಚೀನಾದ ವಿಶೇಷ ಆಡಳಿತ ವಲಯವಾದ ಹಾಂಕಾಂಗ್‌ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾರತೀಯರಿದ್ದಾರೆ. ಹೀಗಾಗಿ ಅಲ್ಲಿನ ಬೆಳವಣಿಗೆಗಳನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಅಲ್ಲಿ ನಡೆಯುತ್ತಿರುವ ಬೆಳವಣಿಗಗಳ ಬಗ್ಗೆ ಅನೇಕ ಕಳವಳಕಾರಿ ಹೇಳಿಕೆಗಳನ್ನು ನಾವು ಕೇಳಿದ್ದೇವೆ’ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ರಾಜೀವ್‌ ಚಂದರ್‌ ವಿಶ್ವಸಂಸ್ಥೆಗೆ ತಿಳಿಸಿದ್ದಾರೆ. ಅಮೆರಿಕ, ಬ್ರಿಟನ್‌ ಸೇರಿದಂತೆ ಹಲವು ದೇಶಗಳು ಹಾಂಕಾಂಗ್‌ನಲ್ಲಿ ಚೀನಾ ಕೈಗೊಂಡಿರುವ ಕ್ರಮಗಳ ಬಗ್ಗೆ ಈಗಾಗಲೇ ವಿರೋಧ ವ್ಯಕ್ತಪಡಿಸಿವೆ.