*ರಾಜ್ಯದ 31 ವಿದ್ಯಾರ್ಥಿಗಳು ಉಕ್ರೇನ್‌ನಿಂದ ತವರಿಗೆ*ಆಪರೇಷನ್ ಗಂಗಾ ಮೂಲಕ 4 ವಿಮಾನಗಳಲ್ಲಿ ಆಗಮನ*ಇದುವರೆಗೂ 406 ಕನ್ನಡಿಗರು ಹೆಸರು ನೊಂದಾವಣೆ*ಉಕ್ರೇನ್ ರಷ್ಯಾ ಸಮರದ ಬಗ್ಗೆ ಕನ್ನಡಿಗರ ಮಾತು
ನವದೆಹಲಿ(ಫೆ. 28): ಉಕ್ರೇನ್‌ನಲ್ಲಿ ಸಿಲುಕಿರುವವರ ರಕ್ಷಣೆಗೆ ಕೇಂದ್ರ ಸರ್ಕಾರ ನಡೆಸುತ್ತಿರುವ ಅಪರೇಷನ್ ಗಂಗಾ ಏರ್‌ಲಿಫ್ಟ್‌ನಲ್ಲಿ ಕರ್ನಾಟಕ ಮೂಲದ 31 ವಿದ್ಯಾರ್ಥಿಗಳು ತವರಿಗೆ ಮರಳಿದ್ದಾರೆ. ಉಕ್ರೇನ್‌ನಿಂದ ತೆರವು ಕಾರ್ಯಾಚರಣೆಗಾಗಿ ಇದುವರೆಗೂ 406 ಕನ್ನಡಿಗರು ಹೆಸರು ನೊಂದಾಯಿಸಿಕೊಂಡಿದ್ದಾರೆ. ಈ ಪೈಕಿ 31 ಜನ ಆಗಮಿಸಿದ್ದು, ಇನ್ನೂ 375 ಜನ ಉಕ್ರೇನ್‌ನಲ್ಲೇ ಬಾಕಿ ಉಳಿದಿದ್ದಾರೆ. ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳು ಮತ್ತು ಭಾರತದಲ್ಲಿರುವ ಅವರ ಪೋಷಕರು ಉಕ್ರೇನ್ ರಷ್ಯಾ ಸಮರದ ಬಗ್ಗೆ ವಿವರಿಸುವುದು ಹೀಗೆ...!
ಸ್ಲೊವಾಕಿಯಾ ಗಡಿಯಲ್ಲಿ ಸಿಲುಕಿದ್ದೇವೆ, ರಕ್ಷಿಸಿ: ಸ್ಲೊವಾಕಿಯಾ ಮೂಲಕ ಭಾರತಕ್ಕೆ ಕಳುಹಿಸುವುದಾಗಿ ರಾಯಭಾರ ಕಚೇರಿ ತಿಳಿಸಿತ್ತು. 500ಕ್ಕೂ ಹೆಚ್ಚು ಮಂದಿ ಆ ಕಡೆ ತೆರಳಿದ್ದೆವು. ಆದರೆ, ಗಡಿಯಲ್ಲಿ ನಮ್ಮನ್ನು ಉಕ್ರೇನ್ ಸೇನೆ ತಡೆದಿದೆ. ಮೊದಲು ಉಕ್ರೇನ್‌ನ ಮಕ್ಕಳು, ಮಹಿಳೆಯರನ್ನು ಗಡಿ ದಾಟಿಸುತ್ತೇವೆ. ನಂತರ ನಿಮ್ಮನ್ನು ಕಳುಹಿಸುತ್ತೇವೆ ಎನ್ನುತ್ತಿದೆ.
ಭಾರತೀಯ ರಾಯಭಾರ ಕಚೇರಿಗೆ ಕರೆ ಮಾಡಿದರೆ ಸ್ಪಂದನೆ ಸಿಗುತ್ತಿಲ್ಲ. ನಾವು ಬೀದಿಪಾಲಾಗಿದ್ದೇವೆ. ಏನು ಮಾಡಬೇಕೆಂದು ತೋಚುತ್ತಿಲ್ಲ... ಇದು ತಮ್ಮನ್ನು ರಕ್ಷಿಸುವಂತೆ ವಿಡಿಯೋ ಸಂದೇಶ ಮೂಲಕ ಬಳ್ಳಾರಿ ಮೂಲದ ವಿದ್ಯಾರ್ಥಿಗಳಾದ ಮುಲ್ಲಾ ಮಹ್ಮದ್ ಹಾಗೂ ಮಹ್ಮದ್ ಶಕೀಬ್ ಮೊರೆ.
ಇದನ್ನೂ ಓದಿ:Russia Ukraine Crisis: 31 ಕನ್ನಡಿಗರು ತವರಿಗೆ ವಾಪಸ್: ಸಚಿವ ಜೋಶಿ, ಅಶೋಕ್ ಸ್ವಾಗತ
ಹಂಗೇರಿ ಪ್ರವೇಶಕ್ಕೆ ಕಾದು ನಿಂತ ಹಾಸನದ ಮೂವರು: ಹಂಗೇರಿ ಮೂಲಕ ಭಾರತಕ್ಕೆ ಮರಳಲು ಪಶ್ಚಿಮ ಉಕ್ರೇನ್‌ನಿಂದ ಬಸ್‌ನಲ್ಲಿ ಹೊರಟ ಹಾಸನದ ಹಿಮನ್ ಕುಮಾರ್, ಸಂಜನಾ, ಅರ್ಪಿತಾ ಸೇರಿದಂತೆ ಗಡಿಯಲ್ಲಿ ಸಿಲುಕಿಕೊಂಡಿದ್ದಾರೆ. ರಾಯಭಾರ ಕಚೇರಿ ಸೂಚನೆಯಂತೆ ರಾಷ್ಟ್ರಧ್ವಜ ಹಾಕಿಕೊಂಡು ಬಸ್ಸಲ್ಲಿ ಬಂದಿದ್ದೇವೆ.
ದಾಖಲೆ ಪರಿಶೀಲನೆಗಾಗಿ 5 ತಾಸಿಂದ ಕಾಯುತ್ತಿದ್ದೇವೆ. ದಾಖಲೆಯಲ್ಲಿ ಏನಾದರೂ ವ್ಯತ್ಯಾಸವಾದರೆ ಏನಾಗುವುದೋ ಎಂಬ ಆತಂಕದಲ್ಲಿದ್ದೇವೆ. ಎಲ್ಲ ಸರಿ ಇದ್ದಲ್ಲಿ ಇನ್ನೆರಡು ದಿನದಲ್ಲಿ ಭಾರತಕ್ಕೆ ತಲುಪಬಹುದು ಎನ್ನುತ್ತಾರೆ ಅವರು.
ಕೀವ್ ಸೆಲ್ಲಾರ್‌ನಲ್ಲಿ ಕರೆಂಟ್ ಇಲ್ವಂತೆ, ಮಗ ಕತ್ತಲಲ್ಲಿದ್ದಾನೆ!: ನನ್ನ ಮಗ ಕೀವ್‌ನಲ್ಲಿದ್ದಾನೆ. ಅವನ ಅಪಾರ್ಟ್‌ಮೆಂಟ್‌ನಿಂದ 3-4 ಕಿ.ಮೀ. ದೂರದಲ್ಲಿ ಬಾಂಬ್ ದಾಳಿಯಾಗುತ್ತಿದೆಯಂತೆ. ಶನಿವಾರ ಬೆಳಗ್ಗೆ 2 ಪರೋಟ ತಿಂದಿದ್ದಾನೆ. ಕುಡಿಯುವ ನೀರಿಗೆ ಸಮಸ್ಯೆ ಇದೆ. ಆಹಾರ ತರಲು ಸ್ವಲ್ಪ ಸಮಯಾವಕಾಶ ಕೊಡುತ್ತಾರೆ. ಸೈರನ್ ಆಗುತ್ತಿದ್ದಂತೆ ಸೆಲ್ಲಾರ್ ಸೇರಿಕೊಳ್ಳಬೇಕು.
ಅಲ್ಲಿರುವ 300 ಜನರಲ್ಲಿ 50-100 ಮಂದಿ ಕನ್ನಡಿಗರು. ಶನಿವಾರ ರಾತ್ರಿಯಿಂದೀಚೆಗೆ ವಿದ್ಯುತ್ ಕಡಿತಗೊಂಡಿದ್ದು, ಅಕ್ಕಪಕ್ಕ ಯಾರಿದ್ದಾರೆ ಎಂದೂ ಗೊತ್ತಾಗುತ್ತಿಲ್ಲ ಅಂತ ಫೋನ್ ಮಾಡಿದ್ದ ಎನ್ನುತ್ತಾರೆ ಹಾಸನ ನಗರದ ಬಿ.ಕಾಟಿಹಳ್ಳಿ ಮೂಲದ ಗಗನ್‌ಗೌಡ ಅವರ ತಾಯಿ ಸುಜಾತಾ.
ಖಾರ್ಕೀವ್ ಬಂಕರ್ ಬಳಿ ಬಾಂಬ್ ಸ್ಫೋಟಿಸುತ್ತಿದೆ... : ಯುದ್ಧದ ಹಿನ್ನೆಲೆಯಲ್ಲಿ ಕರ್ಫ್ಯೂ ಇದೆ. ಹೊರಗೆ ಮಿಲಿಟರಿಯವರದೇ ಕಾರುಬಾರು. ಯಾರೂ ಹೊರಹೋಗುವಂತಿಲ್ಲ. ಬಂಕರ್ ಸಮೀಪವೇ ಬಾಂಬ್ ಬೀಳುತ್ತಿದೆ. ಭಾರೀ ಸ್ಫೋಟದ ಸದ್ದು ಕೇಳುತ್ತಿದೆ.
ಇದನ್ನೂ ಓದಿ:Russia Ukraine Crisis: ಯುದ್ಧಪೀಡಿತ ದೇಶದಿಂದ ಒಂದೇ ದಿನ 688 ಭಾರತೀಯರ ರಕ್ಷಣೆ
ನಾವು ಇರುವಲ್ಲಿಂದ 24 ತಾಸುಗಳ ಪ್ರಯಾಣ ಮಾಡಿದರೆ ಮಾತ್ರ ಭಾರತಕ್ಕೆ ಹೋಗುವ ವಿಮಾನ ಹಿಡಿಯಲು ಸಾಧ್ಯ. ಆದರೆ, ಸದ್ಯಕ್ಕೆ ಅಂತಹ ಯಾವುದೇ ಸಾಧ್ಯತೆ ಕಂಡು ಬರುತ್ತಿಲ್ಲ. ಮುಂದೆ ಹೇಗೋ, ಏನೋ ಎಂದು ತಿಳಿಯದಾಗಿದೆ... ಇದು ಖಾರ್ಕೀವ್ ನಗರದಲ್ಲಿ ಸಿಲುಕಿರುವ ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ತೆಲಸಂಗ ಮೂಲದ ವೈದ್ಯಕೀಯ ವಿದ್ಯಾರ್ಥಿ ನಾಗೇಶ್ ಪೂಜಾರಿ ವಾಟ್ಸಾಪ್ ಸಂದೇಶ.
ಮಗ ಖಾರ್ಕೀವ್‌ನಲ್ಲಿದ್ದಾನೆ, ಹಣ, ನೀರು ಖಾಲಿಯಾಗಿದೆ : ಮಗ ಮನೋಜ್ ಖಾರ್ಕೀವ್‌ನ ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಓದುತ್ತಾನೆ. ಅವನೀಗ ಬಂಕರ್ ಒಂದರಲ್ಲಿ ಆಶ್ರಯ ಪಡೆದಿದ್ದಾನೆ. ಅವನ ಬಳಿ ಹಣ ಖಾಲಿ ಆಗಿದೆ. ಕುಡಿಯಲು ನೀರಿಲ್ಲ. ಆಹಾರ ಒಂದು ದಿನಕ್ಕೆ ಸಾಕಾಗುವಷ್ಟಿದೆ.
ಸೂಪರ್ ಮಾರ್ಕೆಟ್‌ಗಳೆಲ್ಲ ಬಂದ್ ಆಗಿವೆಯಂತೆ. ಅವರನ್ನು ವಾಪಸ್ ಕರೆತರುವ ಬಗ್ಗೆ ಯಾರಿಂದಲೂ ಭರವಸೆ ಸಿಕ್ಕಿಲ್ಲ. ಅವನು ಸುರಕ್ಷಿತವಾಗಿ ಮರಳಿದರೆ ಸಾಕು... ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಸಮೀಪದ ಕೆಆರ್‌ಎಸ್ ನಿವಾಸಿ ಜಯರಾಮೇಗೌಡರ ಅಳಲು ಇದು.
ಭಾರತೀಯ ವಿದ್ಯಾರ್ಥಿಗಳಿಗೆ ಉಕ್ರೇನ್ ಯೋಧರಿಂದ ಹಲ್ಲೆ, ಗಡಿ ದಾಟದಂತೆ ನಿರ್ಬಂಧ!: ಯುದ್ಧಪೀಡಿತ ಉಕ್ರೇನ್‌ನಿಂದ ಪಾರಾಗಲು ಪೋಲಂಡ್ ಗಡಿಗೆ ತೆರಳುತ್ತಿದ್ದಾಗ ಉಕ್ರೇನ್ ಯೋಧರು ತಮ್ಮನ್ನು ತಡೆದು ಹಲ್ಲೆ ನಡೆಸಿದ್ದಾರೆ ಎಂದು ಹಲವು ಭಾರತೀಯರು ಆರೋಪಿಸಿದ್ದಾರೆ.
ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳ ಸ್ಥಿತಿ ದಿನದಿಂದ ದಿನಕ್ಕೆ ಭೀಕರವಾಗುತ್ತಿದೆ. ಉಕ್ರೇನ್ ಯೋಧರು ಮನಬಂದಂತೆ ಕಿರುಕುಳ ನೀಡುತ್ತಿದ್ದಾರೆ. ನಮ್ಮನ್ನು ಪೋಲೆಂಡ್-ಉಕ್ರೇನ್ ಗಡಿಯಲ್ಲಿ ತಡೆಯುತ್ತಿರುವ ಯೋಧರು, ಹುಡುಗಿಯರು ಸೇರಿದಂತೆ ಎಲ್ಲರ ಮೇಲೂ ಹಲ್ಲೆ ನಡೆಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಹಲವು ಭಾರತೀಯ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಆಪರೇಷನ್ ಗಂಗಾ’ಗೆ ಪ್ರತ್ಯೇಕ ಟ್ವೀಟರ್ ಖಾತೆ!: ನವದೆಹಲಿ: ಉಕ್ರೇನ್‌ನಿಂದ ಭಾರತಕ್ಕೆ ಭಾರತೀಯರನ್ನು ಕರೆತರುವ ಕಾರಾರಯಚರಣೆಗೆ ವಿದೇಶಾಂಗ ಇಲಾಖೆ ಪ್ರತ್ಯೇಕ ಟ್ವೀಟರ್ ಹ್ಯಾಂಡಲ್ ಆರಂಭಿಸಿದೆ. "OpGanga Helpline" (@opganga) ಎಂಬ ಟ್ವೀಟರ್ ಖಾತೆಯಲ್ಲಿ ತೆರವು ಕಾರ್ಯಾಚರಣೆ ಕುರಿತ ಮಾಹಿತಿ ನೀಡಿ ಸಹಾಯ ಮಾಡಲಾಗುತ್ತದೆ.
