ವಾಷಿಂಗ್ಟನ್(ಜ.27)‌: ಅಮೆರಿಕದ ಈ ಹಿಂದಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಹಲವು ನಿರ್ಣಯಗಳನ್ನು ರದ್ದುಗೊಳಿಸುತ್ತಿರುವ ಹಾಲಿ ಅಧ್ಯಕ್ಷ ಜೋ ಬೈಡೆನ್‌ ಸರ್ಕಾರ, ಇದೀಗ ಅಮೆರಿಕ ಸೇನಾ ಪಡೆಗಳಿಗೆ ತೃತೀಯ ಲಿಂಗಿಗಳ ನೇಮಕಾತಿಗೆ ಟ್ರಂಪ್‌ ಆಡಳಿತ ಹೇರಿದ್ದ ನಿಷೇಧವನ್ನು ತೆರವು ಮಾಡಿದೆ.

ಮಂಗಳವಾರ ಓವಲ್‌ ಕಚೇರಿಯಲ್ಲಿ ರಕ್ಷಣಾ ಸಚಿವ ಲೋಯ್ಡ್‌ ಆಸ್ಟಿನ್‌ ಜೊತೆಗಿನ ಸಭೆ ವೇಳೆ ಸೇನಾಪಡೆಗಳಿಗೆ ತೃತೀಯ ಲಿಂಗಿಗಳ ನೇಮಕಾತಿಗೆ ಇದ್ದ ನಿಷೇಧವನ್ನು ರದ್ದು ಮಾಡುವ ಕಾನೂನಿಗೆ ಬೈಡೆನ್‌ ಸಹಿ ಹಾಕಿದ್ದಾರೆ. ತನ್ಮೂಲಕ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂಬ ತೃತೀಯ ಲಿಂಗಿಗಳ ಆಕಾಂಕ್ಷೆಗೆ ಬೈಡೆನ್‌ ಸರ್ಕಾರ ನೀರೆರೆದಿದೆ.

ಟ್ರಂಪ್‌ ಅವಧಿಯ ವಿವಾದಿತ ಆದೇಶಗಳಿಗೆ ಬೈಡೆನ್‌ ತಡೆ!

ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಜೋ ಜೋ ಬೈಡೆನ್‌ 15 ಆದೇಶಗಳಿಗೆ ಸಹಿ ಹಾಕಿದ್ದು, ಡೊನಾಲ್ಡ್‌ ಟ್ರಂಪ್‌ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ್ದ ವಿವಾದಿತ ಆದೇಶಗಳನ್ನು ಹಿಂಪಡೆದುಕೊಂಡಿದ್ದಾರೆ. ಟ್ರಂಪ್‌ ಅವಧಿಯಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದ ವಲಸೆ ನೀತಿಯ ತಿದ್ದುಪಡಿ ಮಸೂದೆಗೆ ಸಹಿ ಹಾಕಿರುವ ಬೈಡೆನ್‌, ಅದನ್ನು ಸಂಸತ್ತಿಗೆ ಕಳುಹಿಸಿಕೊಟ್ಟಿದ್ದಾರೆ. ಈ ಮಸೂದೆ ಅಮೆರಿಕದಲ್ಲಿ ದಾಖಲೆಗಳಿಲ್ಲದೇ ನೆಲೆಸಿರುವ ಸಾವಿರಾರು ನಿರಾಶ್ರಿತರಿಗೆ ಪೌರತ್ವ ಕಲ್ಪಿಸಲು ನೆರವಾಗಲಿದೆ. ಅಲ್ಲದೇ ಗ್ರೀನ್‌ ಕಾರ್ಡ್‌ (ಕಾಯಂ ನಿವಾಸಿ) ವಿತರಣೆಗೆ ಇದ್ದ ದೇಶವಾರು ಮಿತಿ ರದ್ದಾಗಲಿದೆ