ವಾಷಿಂಗ್ಟನ್(ಏ.03)‌: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಪತ್ನಿ ಜಿಲ್‌ ಬೈಡೆನ್‌ ಅವರು ಗಗನಸಖಿ ವೇಷ ತೊಟ್ಟು ವರದಿಗಾರರು ಮತ್ತು ಸಿಬ್ಬಂದಿಯನ್ನು ಏಮಾರಿಸಿ ‘ಏಪ್ರಿಲ್‌ ಫೂಲ್‌’ ಮಾಡಿರುವ ಅಚ್ಚರಿಯ ಘಟನೆ ಗುರುವಾರ ನಡೆದಿದೆ.

ಪ್ರಥಮ ಮಹಿಳೆ ಜಿಲ್‌ ಬೈಡೆನ್‌ ಕ್ಯಾಲಿಫೋರ್ನಿಯಾ ಭೇಟಿ ಮುಗಿಸಿ ಗುರುವಾರ ವಾಷಿಂಗ್ಟನ್‌ಗೆ ಮರಳುತ್ತಿದ್ದರು. ಈ ವೇಳೆ ಜಿಲ್‌ ಅವರೊಂದಿಗಿದ್ದ ಶ್ವೇತಭವನದ ಸೀಕ್ರೆಟ್‌ ಸವೀಸ್‌ ಸಿಬ್ಬಂದಿ ಮತ್ತು ಪತ್ರಕರ್ತರಿಗೆ ‘ಜಾಸ್ಮೈನ್‌’ ಹೆಸರಿನ ಕಪ್ಪು ಕೂದಲಿನ, ಕಪ್ಪು ಬಣ್ಣದ ಮಾಸ್ಕ್‌ ಧರಿಸಿದ ಗಗನಸಖಿ ಐಸ್‌ಕ್ರೀಮ್‌ ನೀಡಿದ್ದರು. ಆದರೆ ಐಸ್‌ಕ್ರೀಮ್‌ ಸವಿದ ಬಳಿಕ ಸಿಬ್ಬಂದಿಗಳಿಗೆ ಅಚ್ಚರಿ ಕಾದಿತ್ತು.

ಐದು ನಿಮಿಷದ ಬಳಿಕ ಜಾಸ್ಮೈನ್‌ ಪ್ರೆಸ್‌ ಸೆಕ್ಷನ್‌ನಲ್ಲಿ ಕುಳಿತಿದ್ದರು. ಅರೇ ಯಾರಿದು ಎನ್ನುವಷ್ಟರಲ್ಲಿ ಜಿಲ್‌ ತಮ್ಮ ವಿಗ್‌ ತೆಗೆದು ತಾವು ಬೇರೆ ಯಾರೂ ಅಲ್ಲ ಬೈಡೆನ್‌ ಪತ್ನಿ ಎಂದು ತಮ್ಮ ಗುರುತನ್ನು ಬಹಿರಂಗಪಡಿಸಿದರು. ಜಿಲ್‌ ಅವರ ಕಂಡು ಸಿಬ್ಬಂದಿಗಳು ಮತ್ತು ವರದಿಗಾರರು ದಂಗಾದರು. ಯಾರಿಗೂ ಗುರುತಿಸಲು ಸಾಧ್ಯವಾಗಲಿಲ್ಲ ಎಂದು ಅಚ್ಚರಿ ಪಟ್ಟರು.

ಜಿಲ್‌ ಅವರು ಹೀಗೆ ಏಪ್ರಿಲ್‌ ಫೂಲ್‌ ಮಾಡುವುದು ಹೊಸತೇನಲ್ಲ. ಈ ಹಿಂದೆ ಬೈಡೆನ್‌ ಉಪಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಏರ್‌ಫೋರ್ಸ್‌ ಟು ವಿಮಾನದ ಬಿನ್‌ನಲ್ಲಿ ತಲೆಯನ್ನು ತೂರಿಸಿ ‘ಬೋ’ ಎಂದು ಕಿರುಚಾಡಿ ಕುಚೇಷ್ಟೆ ಮಾಡಿದ್ದರು.