ಕಸ್ಟಮರ್‌ ಕೇರ್‌ಗೆ 24 ಸಾವಿರ ಕರೆ ಮಾಡಿದ ವೃದ್ಧ: ಮುಂದೇನಾಯ್ತು ನೀವೇ ನೋಡಿ

ಟೋಲ್ ಫ್ರೀ ನಂಬರ್ ಗೆ 24 ಸಾವಿರ ಬಾರಿ ಕರೆ ಮಾಡಿದ ವೃದ್ಧ| ಮನೆಗೆ ಬಂದು ಕ್ಷಮೆ ಯಾಚಿಸಿ ಎಂದ ವೃದ್ಧನ ವಿರುದ್ಧ ಕಂಪ್ಲೇಂಟ್| ಅಷ್ಟಕ್ಕೂ ವೃದ್ಧ ಅಷ್ಟು ಬಾರಿ ಕರೆ ಮಾಡಿದ್ದೇಕೆ?

Japanese man arrested for making 24000 complaint calls to customer care

ಟೋಕಿಯೋ[ಡಿ.03]: ಟೋಲ್ ಫ್ರೀ ನಂಬರ್ ಗೆ ಕರೆ ಮಾಡಿದ್ರೆ ದರ ಕಡಿತಗೊಳ್ಳುವುದಿಲ್ಲ. ದೂರು ಹಾಗೂ ಸಲಹೆ ನೀಡಲು ಕಂಪನಿಗಳು ಸಾಮಾನ್ಯವಾಗಿ ಗ್ರಾಹಕರಿಗೆ ಟೋಲ್ ಫ್ರೀ ನಂಬರ್ ಸೌಲಭ್ಯ ನೀಡುತ್ತದೆ. ಆದರೀಗ ಈ ಸೌಲಭ್ಯ ಟೆಲಿಕಾಂ ಕಂಪನಿಯೊಂದಕ್ಕೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದೆ. 71 ವರ್ಷದ ವೃದ್ಧನೊಬ್ಬ ದೂರು ನೀಡಲು ಈ ಟೆಲಿಕಾಂ ಕಂಪನಿಗೆ 24 ಸಾವಿರ ಬಾರಿ ಕರೆ ಮಾಡಿದ್ದಾರೆ. ಅವರ ದೂರಿನ ಕತೆ ಏನಾಯ್ತೋ ತಿಳಿಯದು ಆದರೆ ಕಂಪನಿ ನೀಡಿದ ದೂರಿನಿಂದಾಗಿ ವೃದ್ಧ ಈಗ ಜೈಲು ಪಾಲಾಗಿದ್ದಾರೆ.

2 ವರ್ಷದಿಂದ ಕಂಪೆನಿಗೆ ತಲೆನೋವು

ಈ ವಿಚಿತ್ರ ಘಟನೆ ಜಪಾನ್ ನಲ್ಲಿ ನಡೆದಿದೆ. ನಿವೃತ್ತರಾಗಿರುವ ಎಕಿಟೋಶಿ ಓಕಮೋಟೋ ಇಲ್ಲಿನ ಸೈತಾಮಾದ ನಿವಾಸಿ. ಇವರನ್ನು ಪೊಲೀಸರು 'ಕೆಲಸದಲ್ಲಿ ತೊಡಕು' ಉಂಟು ಮಾಡಿದ್ದಾರೆಂಬ ಕಾರಣಕ್ಕೆ ಬಂಧಿಸಿದ್ದಾರೆ. ಇವರು ಕಳೆದ 2 ವರ್ಷಗಳಿಂದ ಟೆಲಿಕಾಂ ಕಂಪೆನಿಯೊಂದಕ್ಕೆ ಬರೋಬ್ಬರಿ 24 ಸಾವಿರ ಬಾರಿ ಕರೆ ಮಾಡಿದ್ದಾರೆ. ಕಂಪೆನಿ ಸೇವೆಯಿಂದ ಅಸಮಾಧಾನಗೊಂಡಿದ್ದ ಎಕಿಟೋಶಿ ಕಂಪೆನಿ ತನ್ನ ಬಳಿ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸುತ್ತಿದ್ದರು.

ಒಂದು ವಾರದಲ್ಲಿ 411 ಬಾರಿ ಕರೆ ಮಾಡಿದ್ದರು

ಅಕ್ಟೋಬರ್ ತಿಂಗಳ ಕೇವಲ ಒಂದು ವಾರದಲ್ಲಿ ಎಕಿಟೋಶಿ ಈ ಟೋಲ್ ಫ್ರೀ ನಂಬರ್ ಗೆ 411 ಬಾರಿ ಕರೆ ಮಾಡಿದ್ದಾರೆ. ನಿರಂತರವಾಗಿ ತನಗೆ ರೇಡಿಯೋ ಬ್ರಾಡ್ ಕಾಸ್ಟ್ ಸೇವೆ ಬಳಸಲು ತೊಡಕುಂಟಾಗುತ್ತದೆ ಎಂದು ದೂರು ನೀಡಲು ಅವರು ಈ ಕರೆ ಮಾಡಿದ್ದರೆನ್ನಲಾಗಿದೆ. ಟೆಲಿಕಾಂ ಕಂಪನಿ KDDI ದಾಖಲೆ ಅನ್ವಯ ಅವರು ಬರೋಬ್ಬರಿ 24 ಸಾವಿರ ಬಾರಿ ಕರೆ ಮಾಡಿದ್ದು, ಪ್ರತಿ ದಿನ ಕನಿಷ್ಟವೆಂದರೂ 33 ಬಾರಿ ಕರೆ ಮಾಡಿದ್ದಾರೆನ್ನಲಾಗಿದೆ. ಆರಂಭದಲ್ಲಿ ಕಂಪನಿ ಈ ಕರೆಗಳನ್ನು ಕಡೆಗಣಿಸಿತ್ತಾದರೂ, ಪದೇ ಪದೇ ಬರುತ್ತಿದ್ದ ಕರೆಯಿಂದ ಬೇಸತ್ತು ಪೊಲೀಸರಿಗೆ ದೂರು ನೀಡಿದೆ.

ನನ್ನ ಬಳಿ ಬಂದು ಕ್ಷಮೆ ಯಾಚಿಸಿ

ಎಕಿಟೋಶಿ ನಿರಂತರವಾಗಿ ಮಾಡುತ್ತಿದ್ದ ಕರೆಗಳಿಂದ ಕಂಪೆನಿ ಕೆಲಸಗಾರರಿಗೆ ಇತರ ಗ್ರಾಹಕರ ಕರೆ ಸ್ವೀಕರಿಸಲು ಆಗುತ್ತಿರಲಿಲ್ಲ. ಪದೇ ಪದೇ ಕರೆ ಮಾಡುತ್ತಿದ್ದ ಎಕಿಟೋಶಿ 'ನಮ್ಮ ನಡುವಿನ ಒಪ್ಪಂದ ಮುರಿದ ಹಾಗೂ ಅನುಚಿತ ವರ್ತನೆ ತೋರಿದ್ದಕ್ಕಾಗಿ ನೀವು ನನ್ನ ಬಳಿ ಬಂದು ಕ್ಷಮೆ ಯಾಚಿಸಿ' ಎನ್ನುತ್ತಿದ್ದರಂತೆ. ಸದ್ಯ ಕಂಪೆನಿಯ ದೂರು ಸ್ವೀಕರಿಸಿರುವ ಪೊಲೀಸರು ಎಕಿಟೋಶಿಯನ್ನು ಬಂಧಿಸಿದ್ದಾರೆ.

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಪ್ರಕರಣ ಸಂಬಂಧ ಎರಡು ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿವೆ. ಒಂದು ಗುಂಪು ಕಂಪನಿ ಮಾಡಿದ್ದು ಸರಿ ಎಂದರೆ ಮತ್ತೊಂದು ಗುಂಪು ಎಕಿಟೋಶಿ ಕಳಪೆ ಸೇವೆ ನೀಡುತ್ತಿದ್ದ ಕುರಿತು ದೂರು ನೀಡಲು ಕರೆ ಮಾಡಿದ್ದರು. ಇಲ್ಲಿ ಕಂಪೆನಿಯದ್ದೇ ತಪ್ಪಿದೆ ಎಂದಿದ್ದಾರೆ.

ಡಿಸೆಂಬರ್ 3ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Latest Videos
Follow Us:
Download App:
  • android
  • ios