ಚಿಕಿತ್ಸೆ ಫಲಕಾರಿಯಾಗದೇ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ನಿಧನ
ಜಪಾನ್‌ನ ನಾರಾದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡುವ ವೇಳೆ ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಶಿಂಜೋ ಅಬೆ ಅವರನ್ನು ಬದುಕಿಕೊಳ್ಳುವ ನಿಟ್ಟಿನಲ್ಲಿ ವೈದ್ಯರು ನಡೆಸಿದೆ ಹೋರಾಟವೂ ವಿಫಲವಾಗಿದೆ.
ಟೋಕಿಯೋ (ಜುಲೈ 8): ಜಪಾನಿನ ಮಾಜಿ ಪ್ರಧಾನಿ ಶಿಂಜೋ ಅಬೆ (Shinjo Shinzo) ಪಶ್ಚಿಮ ಜಪಾನ್‌ನ ನಾರಾ ನಗರದಲ್ಲಿ ಭಾಷಣ ಮಾಡುವಾಗ ಅವರ ಮೇಲೆ ಶೂಟ್ ಮಾಡಿ ಕೊಲೆ ಮಾಡಲಾಗಿದೆ. ಗಂಭೀರವಾಗಿ ಗಾಯಗೊಂಡ ಅವರು ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವು ಕಂಡಿದ್ದಾರೆ ಎಂದು ಜಪಾನ್ ಸರ್ಕಾರ ಅಧಿಕೃತವಾಗಿ ತಿಳಿಸಿದೆ.
ರಾಯಿಟರ್ಸ್ ಪ್ರಕಾರ, ಪಶ್ಚಿಮ ಜಪಾನ್‌ನ ನಾರಾ ನಗರದಲ್ಲಿ ಭಾಷಣ ಮಾಡುವಾಗ ಅವರ ಮೇಲೆ ಗುಂಡಿನ ದಾಳಿ ಮಾಡಲಾಗಿತ್ತು. ರಕ್ತದ ಮಡುವಿನಲ್ಲಿದ್ದ ಶಿಂಜೋ ಅಬೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಜಪಾನ್‌ನ ರಾಷ್ಟ್ರೀಯ ಮಾಧ್ಯಮ ಎನ್‌ಎಚ್‌ಕೆ ವರದಿ ಮಾಡಿದೆ.. ಈ ಸಂಬಂಧ ಶಂಕಿತನನ್ನು ಬಂಧಿಸಲಾಗಿದೆ ಎಂದು ಎನ್‌ಎಚ್‌ಕೆ ತಿಳಿಸಿದೆ.
ಭಾನುವಾರದ ಮೇಲ್ಮನೆ ಚುನಾವಣೆಗೆ ಮುನ್ನ ನಡೆದ ಕಾರ್ಯಕ್ರಮವೊಂದರಲ್ಲಿ ಮಾಜಿ ನಾಯಕ ಸಾರ್ವಜನಿಕವಾಗಿ ಭಾಷಣ ಮಾಡುತ್ತಿದ್ದಾಗ ಗುಂಡೇಟಿನ ಸದ್ದು ಕೇಳಿಬಂದಿದೆ ಎಂದು ರಾಷ್ಟ್ರೀಯ ಪ್ರಸಾರಕ ಎನ್‌ಎಚ್‌ಕೆ ಮತ್ತು ಕ್ಯೋಡೋ ಸುದ್ದಿ ಸಂಸ್ಥೆ ತಿಳಿಸಿತ್ತು. ಗುಂಡೇಟಿನ ಶಬ್ದ ಕೇಳಿದ ಬೆನ್ನಲ್ಲಿಯೇ ಶಿಂಜೋ ಅಬೆ ಕುಸಿದು ಬಿದ್ದಿದ್ದಾರೆ. ಈ ವೇಳೆ ಅವರ ಎದೆಯ ಭಾಗದ ಕಡೆಯಲ್ಲಿ ರಕ್ತ ಕಂಡುಬಂದಿದೆ ಎಂದು ವರದಿಯಾಗಿದೆ.
67 ವರ್ಷದ ಶಿಂಜೊ ಅಬೆ ಅವರ ಕುತ್ತಿಗೆ ಭಾಗಕ್ಕೂ ಗುಂಡೇಟು ಬಿದ್ದಿದೆ ಎಂದು ಜಪಾನ್‌ನ ಆಡಳಿತ ಪಕ್ಷವಾದ ಲಿಬರಲ್ ಡೆಮಾಕ್ರಟಿಕ್ ಪಕ್ಷ ಹೇಳಿದೆ. ಎಲ್‌ಡಿಪಿಯಾಗಲಿ ಅಥವಾ ಸ್ಥಳೀಯ ಪೊಲೀಸರಾಗಲಿ ಈವರೆಗೂ ಶಿಂಜೋ ಅಬೆ ಪರಿಸ್ಥಿತಿಯ ಬಗ್ಗೆ ಸ್ಪಷ್ಟವಾದ ಹೇಳಿಕೆ ನೀಡಿಲ್ಲ. ಗುಂಡೇಟು ಬಿದ್ದು ಕುಸಿದ ತಕ್ಷಣವೇ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತಾದರೂ, ಅವರ ದೇಹದಲ್ಲಿ ಯಾವುದೇ ಚಲನೆ ಇರಲಿಲ್ಲ ಎಂದು ವರದಿಯಾಗಿದೆ. ಎದೆಯ ಭಾಗಕ್ಕೆ ಗುಂಡೇಟು ಬಿದ್ದ ಬೆನ್ನಲ್ಲಿಯೇ ಶಿಂಜೋ ಅಬೆಗೆ ಹೃದಯಾಘಾತವೂ ಆಗಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ವಿಶ್ವದ ಬಹುತೇಕ ರಾಷ್ಟ್ರಗಳ ಮುಖ್ಯಸ್ಥರು ಇದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ (PM Modi) ಕೂಡ ಪ್ರತಿಕ್ರಿಯೆ ನೀಡಿದ್ದಾರೆ. "ನನ್ನ ಆತ್ಮೀಯ ಸ್ನೇಹಿತ ಶಿಂಜೋ ಅಬೆ ಮೇಲಿನ ದಾಳಿಯಿಂದ ತೀವ್ರವಾಗಿ ನೊಂದಿದ್ದೇನೆ. ನಮ್ಮ ಪ್ರಾರ್ಥನೆಗಳು ಅವರೊಂದಿಗೆ ಇರಲಿದೆ. ಅವರ ಕುಟುಂಬ ಮತ್ತು ಜಪಾನ್ ಜನರೊಂದಿಗೆ ನಾವಿದ್ದೇವೆ' ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಜಪಾನ್ ಮಾಧ್ಯಮಗಳಲ್ಲಿ ಯಾವುದೇ ವ್ಯಕ್ತಿ ಸಾವನ್ನಪ್ಪಿದರೂ ಅದನ್ನು ಸಾವು ಎಂದು ಪ್ರಕಟಿಸುವುದಿಲ್ಲ. ಔಪಚಾರಿಕವಾಗಿ ಘೋಷಣೆ ಮಾಡುವ ಮೊದಲು, ಅವರ ದೇಹದಲ್ಲಿ ಯಾವುದೇ ಚಲನೆಯಿಲ್ಲ ಎನ್ನುವಂಥ ಶಬ್ದಗಳನ್ನೇ ಬಳಸುತ್ತಾರೆ.
ಇದನ್ನೂ ಓದಿ: ಜಪಾನ್ ಕಂಡ ಅತ್ಯಂತ ಪ್ರಭಾವಿ ಪ್ರಧಾನಿ, ಭಾರತದ ಅತ್ಯಾಪ್ತ ಮಿತ್ರ, ಶಿಂಜೋ ಅಬೆ ಬಗ್ಗೆ ಮಾಹಿತಿ..!
ಬಹುಶಃ ಶಾಟ್‌ಗನ್‌ನಿಂದ ಶಿಂಜೆ ಅಬೆ ಅವರ ಹಿಂಭಾಗದಿಂದ ಗುಂಡು ಹಾರಿಸಿರುವ ಶಂಕೆ ಇದೆ ಎಂದು ಸ್ಥಳೀಯ ಮಾಧ್ಯಮಗಳು ವರದಿಗಳಿವೆ. ಶೂಟ್‌ನ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಿದೇ ಇದ್ದರೂ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಶೂಟ್ ಮಾಡಿರುವ ಒಬ್ಬ ವ್ಯಕ್ತಿ 40 ವರ್ಷದ ಆಸುಪಾಸಿನವಂತೆ ಕಾಣಿಸುತ್ಯಿದೆ. ಆತನ ಬಳಿಯಿಂದ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.
ಇದನ್ನೂ ಓದಿ: ಭಾರತದ ‘ಮಿತ್ರ’ ಜಪಾನ್ ಪ್ರಧಾನಿ ಅಬೆ ರಾಜೀನಾಮೆ!
ಇಂಥ ದಾಳಿಗಳನ್ನು ಸಹಿಸೋದಿಲ್ಲ: ಶಿಂಜೋ ಅಬೆ ಮೇಲೆ ಗುಂಡಿನ ದಾಳಿ ನಡೆದ ಬೆನ್ನಲ್ಲಿಯೇ ಈ ಬಗ್ಗೆ ಮಾತನಾಡಿರುವ ಜಪಾನ್ ಪ್ರಧಾನಿ ಫ್ಯೂಮಿಯೋ ಕಿಶಿದಾ, ಯಾವುದೇ ಪ್ರಜಾಪ್ರಭುತ್ವದ ದೇಶದಲ್ಲಿ ಇಂಥ ಅಮಾನುಷ ಗುಂಡಿನ ದಾಳಿಯನ್ನು ಸಹಿಸೋದಿಲ್ಲ ಎಂದು ಹೇಳಿದ್ದಾರೆ.ಪ್ರಸ್ತುತ ಅಬೆ ಅವರ ಪರಿಸ್ಥಿತಿ ತೀರಾ ಗಂಭೀರವಾಗಿದ್ದು, ಎಲ್ಲಾ ರೀತಿಯ ಪರಿಸ್ಥಿತಿಯನ್ನು ಎದುರಿಸಲು ಜಪಾನ್ ಸಿದ್ಧವಾಗಿದೆ ಎಂದಿದ್ದಾರೆ.
ಜಪಾನ್‌ನ ಮಾಜಿ ಪ್ರಧಾನಿ ಮೇಲಿನ ದಾಳಿಯು 1990 ರಿಂದ ಜಪಾನಿನ ರಾಜಕಾರಣಿಗಳ ಮೇಲೆ ನಡೆದ ಐದನೇ ಗುಂಡಿನ ದಾಳಿಯಾಗಿದೆ. ಕಳೆದ 15 ವರ್ಷಗಳಲ್ಲಿ ಇದು ಮೊದಲ ದಾಳಿಯಾಗಿದೆ. 2007 ರಲ್ಲಿ ನಾಗಸಾಕಿ ಮೇಯರ್ ಇಟೊ ಇಟ್ಚೊ ಜಪಾನಿನ ಹಂತಕರ ಗುಂಪಿನಿಂದ ಸಾವು ಕಂಡಿದ್ದು, ಜಪಾನ್‌ನಲ್ಲಿ ರಾಜಕಾರಣಿಯ ಮೇಲೆ ನಡೆದ ಕೊನೆಯ ಬಂದೂಕು ದಾಳಿಯಾಗಿತ್ತು.